ಕಸ ಸಂಸ್ಕರಣೆ: ಬಿಬಿಎಂಪಿಗೆ ಬಿಎಂಟಿಸಿ ಭೂಮಿ

7

ಕಸ ಸಂಸ್ಕರಣೆ: ಬಿಬಿಎಂಪಿಗೆ ಬಿಎಂಟಿಸಿ ಭೂಮಿ

Published:
Updated:
ಕಸ ಸಂಸ್ಕರಣೆ: ಬಿಬಿಎಂಪಿಗೆ ಬಿಎಂಟಿಸಿ ಭೂಮಿ

ಬೆಂಗಳೂರು:  ನಗರದಲ್ಲಿ ಉಂಟಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ 225 ಎಕರೆ ಭೂಮಿಯನ್ನು ಪಡೆದು ಕಸ ಸಂಸ್ಕರಣೆಗೆ ಬಳಸಿಕೊಳ್ಳಲು ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್. ಅಶೋಕ್, ಬಿಬಿಎಂಂಪಿ ಆಯುಕ್ತ ರಜನೀಶ್ ಗೋಯಲ್ ಪಾಲ್ಗೊಂಡಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. `ಬಿಎಂಟಿಸಿಯಿಂದ ಪಡೆಯಲು ನಿರ್ಧರಿಸಲಾದ ಭೂಮಿಯಲ್ಲಿ ಕಸ ಸಂಸ್ಕರಣೆಗೆ ಅನುಮತಿ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದ್ದು, ಅದು ಸಮೀಕ್ಷಾ ಕಾರ್ಯ ನಡೆಸುತ್ತಿದೆ~ ಎಂದು ಪಾಲಿಕೆ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ.`ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಸಿಗುವತನಕ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಬೇಕು. ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಮಾರ್ಗಗಳ ವಿಷಯವಾಗಿಯೂ ಬಿಬಿಎಂಪಿ ಚಿಂತಿಸಬೇಕು~ ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಇದುವರೆಗಿನ ಸ್ಥಿತಿ-ಗತಿಯನ್ನು ಗೋಯಲ್ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.`ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಬಿಬಿಎಂಪಿಗೆ ಬೇಕಾದ ಎಲ್ಲ ನೆರವನ್ನೂ ಸರ್ಕಾರ ನೀಡಲಿದೆ~ ಎಂದು ಭರವಸೆ ನೀಡಿದ ಶೆಟ್ಟರ್, ಬಿಬಿಎಂಪಿ ಮುಂದಿಟ್ಟ ಪ್ರಸ್ತಾವಗಳನ್ನು ಅವಲೋಕಿಸಿದರು. `ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲು ರೂ 360 ಕೋಟಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು~ ಎಂದು ಅವರು ಪ್ರಕಟಿಸಿದರು.

ಬಿಬಿಎಂಪಿಗೆ ಭೂಮಿ ನೀಡಲು ಬಿಎಂಟಿಸಿ ಈ ಹಿಂದೆಯೇ ತಾತ್ವಿಕವಾಗಿ ಒಪ್ಪಿಕೊಂಡಿತ್ತು. ಸರ್ಕಾರದ ಅನುಮತಿಯಿಂದ ಭೂಮಿ ಕೊಡು-ಕೊಳ್ಳುವ ಪ್ರಕ್ರಿಯೆ ಸುಗಮಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದ ಹೊರ ವಲಯದಲ್ಲಿ ಬಿಬಿಎಂಪಿಗೆ ತ್ಯಾಜ್ಯ ವಿಲೇವಾರಿಗೆ ಭೂಮಿ ಬೇಕಾದರೆ, ನಗರದ ಒಳ ಪ್ರದೇಶದಲ್ಲಿ ಬಿಎಂಟಿಸಿಗೆ ಸಾರಿಗೆ ಮೂಲ ಸೌಕರ್ಯ ಒದಗಿಸಲು ನಿವೇಶನ ಬೇಕಿದೆ.ಬಿದರಹಳ್ಳಿಯಲ್ಲಿ 92 ಎಕರೆ, ಉತ್ತರಹಳ್ಳಿಯಲ್ಲಿ 15, ತಾವರೆಕೆರೆಯಲ್ಲಿ 20, ಯಶವಂತಪುರದಲ್ಲಿ 3, ಜಾಲದಲ್ಲಿ 23 ಮತ್ತು ಆನೇಕಲ್‌ನಲ್ಲಿ 71 ಎಕರೆ ಭೂಮಿಯನ್ನು ಬಿಎಂಟಿಸಿಯಿಂದ ಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಭೂಮಿಯ ಒಟ್ಟು ಮಾರುಕಟ್ಟೆ ದರ ರೂ 107.50 ಕೋಟಿ ಎಂದು ಬಿಎಂಟಿಸಿ ಅಂದಾಜು ಮಾಡಿದೆ. ಪ್ರತಿಯಾಗಿ ಸಾರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಲಾಸಿಪಾಳ್ಯದಲ್ಲಿ 4 ಎಕರೆ, 13 ಗುಂಟೆ, ಯಶವಂತಪುರದಲ್ಲಿ 30 ಗುಂಟೆ, ಕೆ.ಆರ್. ಪುರಂನಲ್ಲಿ 7 ಎಕರೆ, ಬೇಗೂರಿನಲ್ಲಿ 2 ಎಕರೆ 32 ಗುಂಟೆ ಸ್ಥಳವನ್ನು ಬಿಟ್ಟು ಕೊಡುವಂತೆ ಅದು ಬೇಡಿಕೆ ಮುಂದಿಟ್ಟಿದೆ.`ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮಂಡೂರಿನಲ್ಲೇ ಕಸವನ್ನು ಒಯ್ದು ಸುರಿಯುವ ಪ್ರಕ್ರಿಯೆ ಮುಂದುವರಿಯಲಿದೆ~ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಶುಕ್ರವಾರವೂ ಕಸ ವಿಲೇವಾರಿಗೆ ಅಲ್ಲಿಯ ಗ್ರಾಮಸ್ಥರು ಅವಕಾಶ ನೀಡಿಲ್ಲ.ಕಸದ ಸಮಸ್ಯೆ ಉತ್ತುಂಗಕ್ಕೆ ತಲುಪಿದ ಈ ಸಂದರ್ಭದಲ್ಲೇ ಸಾಲು, ಸಾಲು ಹಬ್ಬಗಳು ಬಂದಿರುವುದು ಬಿಬಿಎಂಪಿಯನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬಾಳೆಕಂಬ, ಹೂವಿನ ಗಿಡ ಮತ್ತಿತರ ಅಲಂಕಾರಿಕ ಸಾಮಗ್ರಿಗಳ ಮಾರಾಟದ ಭರಾಟೆ ಜೋರಾಗಿದ್ದು, ತ್ಯಾಜ್ಯದ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಮಲ್ಲೇಶ್ವರ ಮಾರುಕಟ್ಟೆ ಮುಂದೆ ದೊಡ್ಡ ಪ್ರಮಾಣದಲ್ಲಿ ಹಸಿ ಕಸದ ರಾಶಿಯೇ ಬಿದ್ದಿತ್ತು.ಈ ಮಧ್ಯೆ ಹಸಿ ತ್ಯಾಜ್ಯ ಸಂಸ್ಕರಣೆಗೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಮುದಿಮಡು ಗ್ರಾಮದ ರೈತರೊಬ್ಬರು ಮುಂದಾಗಿದ್ದಾರೆ. ಬಿಬಿಎಂಪಿಗೆ ಈ ಸಂಬಂಧ ಒಪ್ಪಿಗೆ ಪತ್ರವನ್ನೂ ಅವರು ಕೊಟ್ಟಿದ್ದಾರೆ. `ನಾನು 15 ಎಕರೆ ಜಮೀನು ಹೊಂದಿದ್ದು, ಸಂಸ್ಕರಣೆ ಮಾಡಲು 100 ಟನ್ ಹಸಿ ತ್ಯಾಜ್ಯ ನೀಡಿ~ ಎಂದು ಕೋರಿಕೆ ಸಲ್ಲಿಸಿದ್ದಾರೆ. ಹಸಿ ಕಸದ ಸಂಸ್ಕರಣೆಗೆ ಬಿಬಿಎಂಪಿ ಗುರುವಾರವಷ್ಟೇ ರೈತರಿಗೆ ಆಹ್ವಾನ ನೀಡಿದೆ.`ಸಾರ್ವಜನಿಕರು ಕಸ ವಿಂಗಡಣೆಯಲ್ಲಿ ಆಸಕ್ತಿ ವಹಿಸಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸಿದರೆ ಆಗ ಈ ತ್ಯಾಜ್ಯದ ಸಮಸ್ಯೆ ಅರ್ಧ ಪಾಲು ಕಡಿಮೆಯಾಗುತ್ತದೆ. ಈಗ ಶೇ 10 ರಷ್ಟು ಜನರಲ್ಲಿ ಈ ಕುರಿತು ಜಾಗೃತಿ ಮೂಡಿದೆ. ಇನ್ನು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ. ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಇದುವರೆಗೂ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ, ಈಗ ಈ ರೀತಿ ಸಮಸ್ಯೆ ಉಂಟಾಗಲು ಬೇರೆಯದೇ ಕಾರಣಗಳಿರುತ್ತವೆ~ ಎಂದು ಉಪಮುಖ್ಯಮಂತ್ರಿ ಆರ್. ಅಶೋಕ ಕಾರ್ಯಕ್ರಮವೊಂದರಲ್ಲಿ  ಪ್ರತಿಕ್ರಿಯಿಸಿದರು.ವಿಲೇವಾರಿಯಾಗದ 5,000 ಟನ್ ತ್ಯಾಜ್ಯ

ಮಂಡೂರಿನಲ್ಲಿ ತ್ಯಾಜ್ಯ ಸುರಿಯಲು ಗ್ರಾಮಸ್ಥರು ಅವಕಾಶ ನಿರಾಕರಿಸಿದ್ದರಿಂದ ಕನಿಷ್ಠ 5,000 ಟನ್ ಕಸ ಶುಕ್ರವಾರ ನಗರದ ಬಡಾವಣೆಗಳಲ್ಲಿಯೇ ರಾಶಿಯಾಗಿ ಬಿದ್ದಿತ್ತು.ನಗರದಲ್ಲಿ ಪ್ರತಿದಿನ 3,500 ಟನ್‌ನಷ್ಟು ಕಸ ಸಂಗ್ರಹವಾಗುತ್ತದೆ. ಅದರ ಶೇ 35ರಷ್ಟು ಭಾಗ ಹಸಿ ಕಸವಾಗಿದ್ದು ಬಿಬಿಎಂಪಿ ಅದನ್ನು ರೈತರಿಗೆ ನೀಡುತ್ತಿದೆ. ಶೇ 5ರಷ್ಟು ತ್ಯಾಜ್ಯವನ್ನು ಪುನರ್ ಬಳಕೆಗೆ ವಿನಿಯೋಗಿಸಲಾಗುತ್ತಿದೆ. ಮಿಕ್ಕ ಶೇ 60ರಷ್ಟು ಪ್ರಮಾಣದ ಕಸ ಕಳೆದ ಮೂರು ದಿನಗಳಿಂದ ಬಡಾವಣೆಗಳಲ್ಲಿ ಹಾಗೇ ಉಳಿದುಕೊಂಡಿದೆ.ವಿಲೇವಾರಿಯಾಗದ ತ್ಯಾಜ್ಯದ ಬಿಸಿ ಈಗ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ, ಕೋರಮಂಗಲ, ಬಿಟಿಎಂ ಲೇಔಟ್, ಸೇಂಟ್ ಮಾರ್ಕ್ಸ್ ರಸ್ತೆ, ಕಮರ್ಸಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಶಾಂತಿನಗರದಂತಹ ಪ್ರತಿಷ್ಠಿತ ಪ್ರದೇಶಗಳಿಗೂ ತಟ್ಟಿದೆ. ಶುಕ್ರವಾರ ಎಂಜಿ ರಸ್ತೆಯ ಮೆಟ್ರೊ ನಿಲ್ದಾಣದ ಮುಂದಿನ ಫುಟ್‌ಪಾತ್ ಮೇಲೂ ಕಸದ ರಾಶಿ ಹರಡಿಕೊಂಡಿತ್ತು.ಜಯನಗರದ ನಾಲ್ಕನೇ `ಟಿ~ ಬ್ಲಾಕ್‌ನ 35ನೇ ಕ್ರಾಸ್‌ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಸಕ್ಕೆ ಕೆಲವರು ಬೆಂಕಿ ಹಾಕಿದ ಘಟನೆಯೂ ನಡೆಯಿತು. ಪ್ಲಾಸ್ಟಿಕ್ ತ್ಯಾಜ್ಯಕ್ಕೂ ಬೆಂಕಿ ಬಿದ್ದಿದ್ದರಿಂದ ಕಲುಷಿತ ಹೊಗೆ ದಟ್ಟವಾಗಿ ಹಬ್ಬಿತ್ತು. ವಿಲ್ಸನ್ ಗಾರ್ಡನ್‌ನಲ್ಲಿ ಕೂಡ ತ್ಯಾಜ್ಯದ ತಿಪ್ಪೆಯೇ ನಿರ್ಮಾಣವಾಗಿತ್ತು.ಮೋಡ ಕವಿದ ವಾತಾವರಣ ಹಾಗೂ ಕೆಲವೆಡೆ ಸುರಿದ ಮಳೆ ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ಒಯ್ದಿತ್ತು. ಒಂದೆಡೆ ತ್ಯಾಜ್ಯದ ರಾಶಿ, ಇನ್ನೊಂದೆಡೆ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಕೋರಮಂಗಲದ ವೈದ್ಯ ಡಾ. ರಾಘವೇಂದ್ರಪ್ರಸಾದ್. ಡೆಂಗೆ ಮತ್ತು ಕಾಲರಾ ಹರಡಲು ಕಸ ತಕ್ಕ ವಾತಾವರಣ ನಿರ್ಮಿಸಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.ಈ ಮಧ್ಯೆ ಮಂಡೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಪಾಲಿಕೆ ನಡೆಸಿದ ಪ್ರಯತ್ನ ಶುಕ್ರವಾರವೂ ಫಲ ನೀಡಲಿಲ್ಲ. ಗ್ರಾಮಸ್ಥರು ಒಂದೇ ಒಂದು ಲಾರಿಯನ್ನೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry