ಕಸ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆ

7
ಬಿಬಿಎಂಪಿ ಕಸದ ಗೋಳು

ಕಸ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆ

Published:
Updated:
ಕಸ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆ

ಬೆಂಗಳೂರು:`ಹಬ್ಬ ಗಳ ಸಂದರ್ಭದಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿಗಾಗಿ ಹೆಚ್ಚಿನ ವ್ಯವಸ್ಥೆ ಮಾಡಿಕೊಂಡು, ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಸ ನಿರ್ವಹಣೆ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಗುತ್ತಿಗೆದಾರರು ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ನೇರವಾಗಿ ಹೊಣೆ ಮಾಡಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎಚ್ಚರಿಕೆ ನೀಡಿದರು.ಚಾಮರಾಜಪೇಟೆ, ಪಾದರಾಯನಪುರ, ವಿಜಯನಗರ, ಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಮಿಲ್ಕ್ ಕಾಲೋನಿ, ಸ್ಯಾಂಕಿ ಕೆರೆ, ಶಿವಾಜಿನಗರ, ಹಲಸೂರು ರಸ್ತೆ, ಹಲಸೂರು ಕೆರೆ ಮತ್ತಿತರ ಕಡೆಗಳಲ್ಲಿ ಸೋಮವಾರ ಬೆಳಿಗ್ಗೆ ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು.`ಕಸ ವಿಲೇವಾರಿ ಮಾಡುವ ಗುತ್ತಿಗೆದಾರರು ತಮ್ಮ ಪ್ಯಾಕೇಜ್‌ಗಳಿಗೆ ನಿಗದಿಪಡಿಸಿದ ಸಂಖ್ಯೆಯಲ್ಲಿ ಟ್ರಕ್, ಆಟೋ ಟಿಪ್ಪರ್, ತಳ್ಳುವ ಗಾಡಿ ಮತ್ತು ಪೌರ ಕಾರ್ಮಿಕರನ್ನು ನಿಯೋಜನೆ ಮಾಡಿ, ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು. ವಾಹನ ಮತ್ತು ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತಗೊಳಿಸಿ, ಲಭ್ಯವಿರುವ ವ್ಯವಸ್ಥೆಯಲ್ಲಿಯೇ ನಿರ್ವಹಿಸಲಿಕ್ಕೆ ಪ್ರಯತ್ನಿಸಿದ್ದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು.ಸಂಬಂಧಪಟ್ಟ ಎಂಜಿನಿಯರ್‌ಗಳು ಪ್ರತಿದಿನ ಬೆಳಿಗ್ಗೆ ಕಸ ವಿಲೇವಾರಿ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಆಯಾ ಪ್ಯಾಕೇಜ್‌ಗೆ ನಿಯೋಜಿಸಲಾದ ವಾಹನ ಮತ್ತು ಸಿಬ್ಬಂದಿ ಸಂಖ್ಯೆ ಪರಿಶೀಲನೆ ನಡೆಸಬೇಕು. ಅದರಲ್ಲಿ ಏನಾದರೂ ಕೊರತೆ ಕಂಡುಬಂದಲ್ಲಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಬೇಕು. ನಗರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸ್ವಚ್ಛತೆಯಲ್ಲಿ ಲೋಪ ಎಸಗುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಕೆ ಬೇಡ ಎಂದು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.ಚಾಮರಾಜಪೇಟೆ ಈದ್ಗಾ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ಅಲ್ಲಿನ ಕಾರ್ಯಪಾಲಕ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿ, `ಈ ಪ್ರದೇಶದಲ್ಲಿ ಕಸ ವಿಲೇವಾರಿ ತೀವ್ರಗತಿಯಲ್ಲಿ ನಡೆಯಬೇಕು. ವಾರದಲ್ಲಿ ಇನ್ನೊಂದು ಸಲ ತಪಾಸಣೆ ಮಾಡಲಾಗುವುದು. ಆಗಲೂ ಇದೇ  ಪರಿಸ್ಥಿತಿ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು.ಸ್ಯಾಂಕಿ ಕೆರೆಗೆ ಭೇಟಿ ನೀಡಿದ ಆಯುಕ್ತರು, `ಪಾದಚಾರಿ ಮಾರ್ಗ ಮತ್ತು ತಡೆಗೋಡೆ ನಿರ್ಮಾಣ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು'  ಎಂದು ಭರವಸೆ ನೀಡಿದರು.ಕೋರಮಂಗಲದ ಮೇಸ್ತ್ರಿ ಪಾಳ್ಯ ಕೆರೆಯ ತಪಾಸಣೆ ನಡೆಸಿದ ಅವರು, `11 ಎಕರೆ ವಿಸ್ತೀರ್ಣದ ಕೆರೆಯಲ್ಲಿ 3 ಎಕರೆಯಷ್ಟು ಒತ್ತುವರಿಯಾಗಿದೆ. ಅನೇಕ ವರ್ಷಗಳಿಂದ ಈ ಕೆರೆ ಅಭಿವೃದ್ಧಿಯಾಗದೇ ಉಳಿದಿದೆ. ಈ ಕೆರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದೆ. ಆದರೂ ಜಂಟಿಯಾಗಿ ಕಾರ್ಯನಿರ್ವಹಿಸಿ ಒತ್ತುವರಿ ತೆರವು, ಕೊಳಚೆ ನೀರು ಕೆರೆಗೆ ಹರಿಯದಂತೆ ಪ್ರತ್ಯೇಕ ಕಾಲುವೆ ನಿರ್ಮಾಣ ಮತ್ತು ಕೆರೆಯ ಸುತ್ತಲು ತಂತಿ ಬೇಲಿ ನಿರ್ಮಿಸುವ ಕಾರ್ಯವನ್ನು ಹಂತಹಂತವಾಗಿ ನಿರ್ವಹಿಸಿ, ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು' ಎಂದು ತಿಳಿಸಿದರು.ಬಳಿಕ ಸ್ಥಳೀಯ ನಿವಾಸಿಗಳಿಂದ ನಿರ್ವಹಿಸಲಾಗುತ್ತಿರುವ ಒಣ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು, ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಅವಶ್ಯಕ ಪ್ರೋತ್ಸಾಹವನ್ನು ಪಾಲಿಕೆಯಿಂದ ನೀಡಲಾಗುವುದು. ಇದರ ಸಾಮರ್ಥ್ಯವನ್ನು ಐದು ಟನ್‌ಗಳಿಗೆ ಹೆಚ್ಚಿಸಿ, ಈ ಬಡಾವಣೆಗಳಲ್ಲಿ ಉತ್ಪತ್ತಿಯಾದ ಒಣ ಕಸವನ್ನು ಇಲ್ಲೇ ವಿಂಗಡಿಸಲು ಕ್ರಮ ಕೈಗೊಳ್ಳಬೇಕು ಎಂದು ವಲಯ ಹೆಚ್ಚುವರಿ ಆಯುಕ್ತ (ದಕ್ಷಿಣ) ಡಾ.ಕೆ.ವಿ. ತ್ರಿಲೋಕಚಂದ್ರ ಅವರಿಗೆ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry