ಕಸ: ಹದಗೆಟ್ಟ ನಲ್ಲೂರುಹಳ್ಳಿ ಕೆರೆ

7

ಕಸ: ಹದಗೆಟ್ಟ ನಲ್ಲೂರುಹಳ್ಳಿ ಕೆರೆ

Published:
Updated:

ಮಹದೇವಪುರ: ಕ್ಷೇತ್ರದ ಹಗದೂರು ವಾರ್ಡ್‌ ವ್ಯಾಪ್ತಿಗೆ ಸೇರಿದ ನಲ್ಲೂರುಹಳ್ಳಿ ಕೆರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ದಿನ ಬೆಳಗಾಗುತ್ತಲೇ ಕೆರೆಯ ದಂಡೆಯ ಮೇಲೆ ಕಸದ ರಾಶಿಯೇ ಬೀಳುತ್ತಿದೆ.ಅಲ್ಲದೆ, ಕೆರೆ ಕಟ್ಟೆಯ ಮೇಲಿರುವ ರಸ್ತೆಯ ಅಕ್ಕಪಕ್ಕ­ದಲ್ಲಿಯೂ ರಾಶಿ ರಾಶಿ ಕಸ ಸಂಗ್ರಹಗೊಳ್ಳುತ್ತಿದೆ. ಈ ರಸ್ತೆ ವೈಟ್‌ಫೀಲ್ಡ್‌ನಿಂದ ನಲ್ಲೂರುಹಳ್ಳಿ ಗ್ರಾಮದ ಮೂಲಕ ಇಂಟರ್‌ನ್ಯಾಷನಲ್‌ ಟೆಕ್‌ಪಾರ್ಕ್‌ (ಐಟಿಪಿಎಲ್) ರಸ್ತೆಗೂ ಹಾಗೂ ಓಫಾರಂ–ಹೂಡಿ ಮುಖ್ಯ ರಸ್ತೆಗೂ ಸಂಪರ್ಕ ಕೊಂಡಿಯಾಗಿದೆ. ಇಲ್ಲಿ ದಿನದ 24 ಗಂಟೆಗಳ ಕಾಲ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಪಕ್ಕದಲ್ಲಿ ಮತ್ತು ಕೆರೆ ದಂಡೆಯಲ್ಲಿ ಕೊಳೆತು ನಾರುವ ಕಸದ ರಾಶಿಯ ನಡುವೆ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿಮಾರ್ಣಗೊಂಡಿದೆ.ಕಳೆದ ಆರೇಳು ತಿಂಗಳುಗಳಿಂದ ಕೆರೆಗೆ ಹಾಗೂ ಕೆರೆ ಕಟ್ಟೆಯ ಮೇಲಿನ ರಸ್ತೆಯ ಮೇಲೆ ಕಸದ ರಾಶಿ ಬೀಳುತ್ತಿದೆ. ಹೀಗೆ ಬಹಳಷ್ಟು ಕಸವು ಬೀಳುವುದಕ್ಕೆ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರೇ ಕಾರಣ. ಹಗದೂರು ವಾರ್ಡ್‌ ವ್ಯಾಪ್ತಿಯಲ್ಲಿ ಕಸವನ್ನು ಸಂಗ್ರಹಿಸುವ ಪಾಲಿಕೆ ಕಾರ್ಮಿಕರು ನೇರವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸವನ್ನು ಸಾಗಿಸುವ ಬದಲು ನಲ್ಲೂರುಹಳ್ಳಿ ಕೆರೆಗೆ ತಂದು ಸುರಿದು ಹೋಗುತ್ತಾರೆ. ಇದರಿಂದ ಕೆರೆ ಕಸದ ಗುಂಡಿಯಂತಾಗಿದೆ ಎಂದು ಸ್ಥಳೀಯ ಮೋಹರಕುಮಾರ್‌ ತಿಳಿಸಿದರು.ಪಾಲಿಕೆ ಕಾರ್ಮಿಕರು ಅಷ್ಟೇ ಅಲ್ಲದೆ ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ವೈಟ್‌ಫೀಲ್ಡ್‌, ಸಿದ್ಧಾಪುರ, ಹೂಡಿ ಹಾಗೂ ಕುಂದಲಹಳ್ಳಿಯಲ್ಲಿನ ಬಹುತೇಕ ಎಲ್ಲಾ ಬೇಕರಿ ಅಂಗಡಿಗಳಿಂದ ಮತ್ತು ಮಾಂಸದ ಅಂಗಡಿಗಳಿಂದಲೂ ಮೂಟೆಗಟ್ಟಲೆ ತ್ಯಾಜ್ಯ ಕೆರೆಗೆ ಬಂದು ಬೀಳುತ್ತಿದೆ. ಕೆರೆಯ ಸುತ್ತಮುತ್ತ ಸಮರ್ಪಕವಾಗಿ ತಂತಿ ಬೇಲಿ ಹಾಕಿಲ್ಲ. ರಸ್ತೆಯ ಬದಿಯಲ್ಲಿ ಮಾತ್ರ ಕೆಲವೆಡೆ ತಂತಿ ಬೇಲಿಯನ್ನು ಹಾಕಲಾಗಿದೆ. ಕೆರೆಗೆ ಸೂಕ್ತ ರಕ್ಷಣೆ ಇಲ್ಲದ್ದರಿಂದ ಕೆರೆಯ ಒಡಲಾಳಕ್ಕೆ ಕಸದ ರಾಶಿ ಬಂದು ಬೀಳುತ್ತಿದೆ.ಪ್ಲಾಸ್ಟಿಕ್‌ ಚೀಲಗಳು ಹಾಗೂ ಗಾಜಿನ ಬಾಟಲಿಗಳು ಕೆರೆಯ ದಂಡೆಯಲ್ಲಿ ಹೆಚ್ಚಾಗಿ ಬಿದ್ದಿವೆ. ಇನ್ನೂ ಕೆರೆಯ ಪೂರ್ವ ಭಾಗದಲ್ಲಿ ಕಟ್ಟಡಗಳ ಅವಶೇಷಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry