ಕಹಿಯಾದ ಎಳನೀರು

ಭಾನುವಾರ, ಜೂಲೈ 21, 2019
27 °C

ಕಹಿಯಾದ ಎಳನೀರು

Published:
Updated:

ಊರಿನ ಹೆಸರೇ `ಎಳನೀರು'. ಆದರೆ ಜನರ ಬದುಕು ಮಾತ್ರ ಎಳನೀರು ಕುಡಿದಷ್ಟು ಸೊಗಸಾಗಿಲ್ಲ. ಕೆಲವು ದಿನಗಳು ಕಳೆದರೆ ಎಳನೀರು ಕುಡಿಯಲು ಅಲ್ಲಿ ತೆಂಗಿನ ಮರಗಳೂ ಇರುವುದಿಲ್ಲವೋ ಏನೋ. ಅಷ್ಟರ ಮಟ್ಟಿಗೆ ಕಾಡಾನೆ ಹಾವಳಿ. 30- 40 ವರ್ಷ ವಯಸ್ಸಿನ ಫಲಭರಿತ ತೆಂಗಿನ ಮರಗಳ ಬುಡಕ್ಕೆ ಹಣೆಕೊಟ್ಟು ನೂಕಿ ನೆಲಸಮ ಮಾಡುವ ಕಾಡಾನೆಗಳು ತೆಂಗಿನ ಸಿರಿಗಳನ್ನು ತಿನ್ನುತ್ತಿವೆ.

ತೋಟಗಳಿಗೆ ನುಗ್ಗಿ ಫಲ ಭರಿತ ಅಡಿಕೆ ಮರಗಳನ್ನು ನಜ್ಜುಗುಜ್ಜು ಮಾಡಿ ರಚ್ಚೆ ಎಬ್ಬಿಸಿವೆ. ಭತ್ತದ ಗದ್ದೆಗಳನ್ನು ಪುಡಿಪುಡಿ ಮಾಡಿವೆ. ದಶಕಗಳ ಹಿಂದೆ ನೆಟ್ಟು ಬೆವರು ಸುರಿಸಿ ಕಾಪಾಡಿದ ರೈತರ ಬೆಳೆಗಳನ್ನು ಅವರ ಕಣ್ಮುಂದೆಯೇ ಕಾಡಾನೆಗಳು ನಾಶ ಮಾಡುತ್ತಿವೆ. ಇವೆಲ್ಲವನ್ನು ನೋಡಿ ಸಂಕಟ ಪಡುತ್ತಿರುವ ರೈತರು ಏನೂ ತೋಚದೆ ಕಂಗಾಲಾಗಿದ್ದಾರೆ.ಈ ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮದ ವ್ಯಾಪ್ತಿಗೆ ಬರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿದೆ. ಕಳಸದಿಂದ ಸುಮಾರು 11 ಕಿ.ಮೀ, ಸಂಸೆಯಿಂದ ಮೂರು ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರ ಬೆಳ್ತಂಗಡಿಯಿಂದ ದುರ್ಗಮ ಕಾಡಿನ ಕಾಲುದಾರಿಯಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿದೆ. ಮಳೆಗಾಲದಲ್ಲಿ ಕಾಲುದಾರಿಯ ಪ್ರಯಾಣ ಸಾಧ್ಯವಿಲ್ಲದ ಕಾರಣ ರಸ್ತೆ ಮಾರ್ಗವಾಗಿ ಬಜಗೋಳಿ ಮೂಲಕ ಬೆಳ್ತಂಗಡಿಗೆ ತಲುಪಲು ಸುಮಾರು 80 ಕಿ.ಮೀ. ಕ್ರಮಿಸಬೇಕು.ಇಲ್ಲಿ ಸುಮಾರು 50ಕ್ಕೂ ಮಿಕ್ಕಿ ಕೃಷಿಕರ ಕುಟುಂಬಗಳಿದ್ದು, ಈ ಹಿಂದೆ ಕಾಡಾನೆ ಹಾವಳಿ ಇರಲಿಲ್ಲ. ಒಂದು ವರ್ಷದಿಂದ ಇವು ಹಟಕ್ಕೆ ಬಿದ್ದಂತೆ ಕೃಷಿ ಹಾಳುಗೆಡವುತ್ತಿವೆ. ಎಳನೀರು ಪಕ್ಕದ ಬಡಮನೆ ಎಂಬಲ್ಲಿಯೂ ಇದೇ ಸಮಸ್ಯೆ. ಎಳನೀರು ಮತ್ತು ಎಂಟು ಕಿ.ಮೀ. ದೂರದ ತಿಮ್ಮಯಕಾಂಡ ನಡುವೆ ಇವುಗಳ ಓಡಾಟ ನಿರಂತರ.ಗ್ರಾಮಸ್ಥರ ಅಳಲು

`ಕಾಡಾನೆ ಹಿಂಡು ದಾಳಿಯಿಂದ ನನ್ನ ತೋಟದ ಸುಮಾರು 800ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮವಾಗಿವೆ. ತೋಟಕ್ಕೆ ಹೋಗಲು ಆನೆ ಭಯ. ಅವು ಎಲ್ಲಿ, ಯಾವಾಗ ದಾಳಿ ಮಾಡುತ್ತವೆ ಎಂದು ಹೇಳಲಾಗದು. ಮಳೆಯ ಅಬ್ಬರ. ಕಾಲಿಟ್ಟರೆ ಮುತ್ತಿಕೊಂಡು ರಕ್ತ ಹೀರುವ ಜಿಗಣೆ. ಆನೆ ಹಿಂಡು ಓಡಾಡಿ ಕೆಸರಿನಿಂದ ಕೊಚ್ಚೆಯಾದ ದಾರಿ. ಸಂಜೆ 6 ಗಂಟೆಯ ನಂತರ ಮನೆ ಹೊರಗಡೆ ಹೋಗುವಂತಿಲ್ಲ.ರಾತ್ರಿಯಿಡೀ ತೋಟದಲ್ಲಿ ಆನೆಗಳದ್ದೇ ಸಾಮ್ರಾಜ್ಯ. ಅರಣ್ಯ ಇಲಾಖೆಯವರಿಗೂ ದೂರು ನೀಡಿದ್ದೇವೆ. ಅರಣ್ಯ ಸಿಬ್ಬಂದಿ ಆನೆ ಓಡಿಸಲು ತಮ್ಮಿಂದ ಆದ ಪ್ರಯತ್ನ ನಡೆಸಿದ್ದಾರೆ. ಮರಗಳ ಮರೆಯಲ್ಲಿ ಆನೆಗಳು ಕಣ್ಣಿಗೆ ಗೋಚರಿಸುವುದಿಲ್ಲ. ಮುನ್ನುಗ್ಗಲು ಅರಣ್ಯ ಸಿಬ್ಬಂದಿಗೂ ಭಯ. ಕೃಷಿ ಹಾನಿಗೆ ಪರಿಹಾರ ಒದಗಿಸುವ ಭರವಸೆ, ಪ್ರಯತ್ನ ಇಲಾಖೆಯಿಂದ ನಡೆದಿದೆ' ಎನ್ನುತ್ತಾರೆ ಹಲಸಿನಕಟ್ಟೆಯ ಕೃಷಿಕ ನಾಗಕುಮಾರ್.`ಬೆಳೆದ ಕೃಷಿ ಭೂಮಿಯನ್ನು ಬಿಟ್ಟು ಹೋಗುವಂತಿಲ್ಲ. ಕಾಡಾನೆಗಳು ಸೇರಿದಂತೆ ಇತರ ವನ್ಯಜೀವಿಗಳ ಉಪಟಳದಿಂದ ಅಲ್ಲಿ ಬದುಕುವಂತಿಲ್ಲ. ನಮ್ಮದು ತ್ರಿಶಂಕು ಸ್ಥಿತಿ. ಕೃಷಿ ಭೂಮಿ ಮತ್ತು ಮನೆಗೆ ಸರ್ಕಾರ ಅರ್ಹ ಮೌಲ್ಯದ ಪರಿಹಾರ ನೀಡಲಿ. ತಕ್ಷಣ ರಾಷ್ಟ್ರೀಯ ಉದ್ಯಾನದಿಂದ ಹೊರಗೆ ಹೋಗುತ್ತೇವೆ' ಎನ್ನುತ್ತಾರೆ ಮೇಲುಕುಂಬ್ರಿಯ ಜ್ಞಾನಚಂದ್ರ ಶೆಟ್ಟಿ.`ಬೇಸಿಗೆಯಲ್ಲಿ ಕಾಡಾನೆಗಳು ಬಂದಾಗ ಬೊಬ್ಬೆ ಹೊಡೆದು, ಪಟಾಕಿ, ಗರ್ನಲ್ ಸಿಡಿಸಿ ಓಡಿಸುತ್ತೇವೆ. ಇವುಗಳ ಭಯದಿಂದ ಕೂಲಿ ಆಳುಗಳೂ ಸಿಗೋದಿಲ್ಲ. `ನಾವು ಬರೋದಿಲ್ಲ ಮಾರಾಯ್ರೆ. ಭಯ ಆಗುತ್ತಿದೆ. ನಾವು ಯಾಕೆ ಪುಕ್ಕಟೆಯಾಗಿ ಸಿಕ್ಕಿಹಾಕಿಕೊಳ್ಳಬೇಕು' ಎಂದು ಕೂಲಿಯಾಳುಗಳು ಹಿಂಜರಿಯುತ್ತಾರೆ' ಎನ್ನುತ್ತಾರೆ ನಾಗಕುಮಾರ್.ಹೆಚ್ಚಿದ ಸಲಗ

`ಈ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಒಂಟಿ ಸಲಗವೊಂದು ಓಡಾಡುತ್ತಿತ್ತು. ನಾಲ್ಕು ತಿಂಗಳಿಂದ ಕಾಡಾನೆ ಹಿಂಡೊಂದು ಸೇರಿಕೊಂಡಿದೆ. ಹಿಂಡಿನಲ್ಲಿ ಮರಿ ಇರುವುದರಿಂದ ಹೆಚ್ಚು ಅಪಾಯಕಾರಿ. ಕಾಡಾನೆಗಳಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವುದು ನಿಜ. ಬೆಳೆ ಹಾನಿಯಿಂದ ಪರಿಹಾರ ಕೋರಿ ಅರ್ಜಿ ನೀಡಿದವರಿಗೆ ಸೂಕ್ತ ಪರಿಹಾರ ಒದಗಿಸಲು ಇಲಾಖೆ ಕ್ರಮ ತೆಗೆದುಕೊಂಡಿದೆ.

ಇಲ್ಲಿನ ದಟ್ಟ ಅರಣ್ಯದಲ್ಲಿ ಕಾಡಾನೆಗಳ ನಿಯಂತ್ರಣ ಭಾರಿ ಕಷ್ಟ. ನಾಗರಹೊಳೆ, ಬಂಡೀಪುರದಂಥ ಭೂ ಪ್ರದೇಶ ಇಲ್ಲಿ ಇಲ್ಲ. ಕಡಿದಾದ, ಕಣಿವೆಯಂಥ ಜಾಗದಲ್ಲಿ ಆನೆ ದಾಟದ ಕಂದಕ (ಇಪಿಟಿ) ರಚಿಸಿದರೆ ಮಳೆಗಾಲದಲ್ಲಿ ನೀರು ನಿಂತು ಭೂ ಕುಸಿತವಾಗುವ ಭಯವಿದೆ. ಜತೆಗೆ ಸಿಬ್ಬಂದಿ ಕೊರತೆಯೂ ಇದೆ. ರೈತರಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಕಾಡಾನೆಗಳನ್ನು ಓಡಿಸಲು ಪಟಾಕಿಗಳನ್ನು ನೀಡಿದ್ದೇವೆ. ಸ್ವ ಇಚ್ಛೆಯಿಂದ ಹೊರಗೆ ಬರಲು ಬಯಸುವವರಿಗೆ ಪರಿಹಾರ ಒದಗಿಸಿ ಪುನರ್ವಸತಿ ಕಲ್ಪಿಸುವ ಕಾರ್ಯವೂ ನಡೆದಿದೆ' ಎನ್ನುತ್ತಾರೆ ಬೆಳ್ತಂಗಡಿಯ ಆರ್‌ಎಫ್‌ಒ ಅರುಣ್‌ಕುಮಾರ್.ಎಳನೀರು, ರಾಷ್ಟ್ರೀಯ ಉದ್ಯಾನದೊಳಗೆ ಇರುವುದರಿಂದ ಅಭಿವೃದ್ಧಿ ಕಾರ್ಯ ಮಾಡುವ ಹಾಗಿಲ್ಲ. ಸವಲತ್ತು ಸಿಗುವುದು ಉದ್ಯಾನದ ಗಡಿಯಿಂದ ಹೊರಗಿರುವವರಿಗೆ ಮಾತ್ರ. ಅವರೆಲ್ಲರೂ ಉದ್ಯಾನದಿಂದ ಹೊರಗೆ ಬರುವುದು ಅನಿವಾರ್ಯ. ಅಲ್ಲಿಯೇ ಇದ್ದರೆ ಸರ್ಕಾರವೂ ಏನೂ ಮಾಡುವಂತಿಲ್ಲ. ಉದ್ಯಾನದೊಳಗಿರುವವರಿಗೆ ಕಾಡಾನೆಗಳು ಯಾವತ್ತೂ ಅಪಾಯಕಾರಿ. ಜತೆಗೆ ಆರೋಗ್ಯ, ಶಿಕ್ಷಣಕ್ಕಾಗಿ ತಂದೆ- ತಾಯಿ ಮತ್ತು ಮಕ್ಕಳು ಎಲ್ಲೆಲ್ಲೋ ಇರಬೇಕಾದ ಅನಿವಾರ್ಯತೆ ಇದೆ.ಈ ಎಲ್ಲ ಹಿನ್ನೆಲೆಯಲ್ಲಿ ಅಲ್ಲಿನ ಕುಟುಂಬಗಳಲ್ಲಿ ನೆಮ್ಮದಿಯ ಜೀವನವನ್ನು ಖಂಡಿತ ನಿರೀಕ್ಷಿಸಲು ಸಾಧ್ಯವಿಲ್ಲ. `ಆನೆ ನಡೆದದ್ದೇ ದಾರಿ' ಎನ್ನುವಂತೆ ಉದ್ಯಾನದೊಳಗೆ ಕಾಡಾನೆಗಳ ಓಡಾಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆಹಾರ, ನೀರು, ಭದ್ರತೆ ಹಾಗೂ ಸ್ವಾಭಾವಿಕ ವರ್ತನೆಗಳ ಕಾರಣಕ್ಕಾಗಿ ಕಾಡಾನೆಗಳು ಅರಣ್ಯದೊಳಗೆ ಎಲ್ಲಿ ಬೇಕಾದರೂ ಓಡಾಡಬಹುದು. ಅದಕ್ಕಾಗಿಯೇ ಅವುಗಳನ್ನು `ವನ್ಯಜೀವಿ' ಎಂದು ಕರೆಯುವುದು.

ಅವುಗಳ ಮುಕ್ತ ಓಡಾಟಕ್ಕೆ ಅಡ್ಡಿಯಾದರೆ ಅವು ತಿರುಗಿ ಬೀಳುವುದು ಸಹಜ. ಬೊಬ್ಬೆ ಹಾಕಿ, ಪಟಾಕಿ ಸಿಡಿಸಿ ಬೆದರಿಸಿದರೆ ಅವು ಗಾಬರಿಯಾಗಿ ಮತ್ತಷ್ಟು ಆಕ್ರಮಣಕಾರಿಯಾಗಿ ಮನುಷ್ಯರ ಜೀವಕ್ಕೇ ಅಪಾಯ ತರಬಹುದು. ಕಾಡಾನೆಗಳನ್ನು ಅವುಗಳ ನೆಲೆಯಿಂದ ಓಡಿಸುವ ಬದಲು ಅಲ್ಲಿ ಅತಿಕ್ರಮಿಸಿರುವವರೇ ಜಾಗ ಖಾಲಿ ಮಾಡಿ ಪುನರ್ವಸತಿ ಪಡೆಯುವುದೇ ಹೆಚ್ಚು ಸೂಕ್ತ ಮತ್ತು ಜಾಣತನ. ಬೆಳೆ ಹಾನಿ ಪರಿಹಾರಗಳು ಅಲ್ಪಕಾಲಿಕ. ಉದ್ಯಾನದಿಂದ ಹೊರಬಂದು ಪುನರ್ವಸತಿ ಪಡೆಯುವುದೇ ಕೊನೆಗುಳಿದಿರುವ ಶಾಶ್ವತ ಪರಿಹಾರ.ಈ ರೀತಿಯ ಸಮಸ್ಯೆಗಳಿಂದ ಬೇಸತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನದೊಳಗಿರುವ ಕುಟುಂಬಗಳಿಂದ ಪರಿಹಾರ ಕೋರಿ ಪುನರ್ವಸತಿ ಪಡೆಯಲು ಬಯಸಿ 650ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಸರ್ಕಾರದ ಕಡೆಯಿಂದ ಪರಿಹಾರ ಪಡೆದು 60ಕ್ಕೂ ಹೆಚ್ಚು ಕುಟುಂಬಗಳು ಪುನರ್ವಸತಿ ಕಂಡಿವೆ. ವನ್ಯಜೀವಿಗಳ ಸಂರಕ್ಷಣಾ ಸೊಸೈಟಿಯಿಂದ (ಡಬ್ಲ್ಯುಸಿಎಸ್) ಪರಿಹಾರ ಪಡೆದು 53 ಕುಟುಂಬಗಳು ಪುನರ್ವಸತಿ ಪಡೆದಿವೆ.

5- 6 ವರ್ಷಗಳಿಂದ ಸಾಕಷ್ಟು ಕುಟುಂಬಗಳು ಪರಿಹಾರ ಪಡೆದು ಪುನರ್ವಸತಿ ಪಡೆಯಲು ಕಾಯುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಒಲವು ತೋರಿಸಬೇಕಾಗಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತ, ಅರಣ್ಯ ಇಲಾಖೆ ಒಮ್ಮತದಿಂದ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.

-ರಾಜೇಶ್ ಶ್ರೀವನ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry