ಕಹಿಯಾದ ಮಧು ಕೆರಳಿದ ರಾಮ

7

ಕಹಿಯಾದ ಮಧು ಕೆರಳಿದ ರಾಮ

Published:
Updated:

ಬೆಂಗಳೂರು: ವಿಧಾನ ಪರಿಷತ್ತಿನ ಕಲಾಪವನ್ನು ಗುರುವಾರ ಮಧ್ಯಾಹ್ನ ಮುಂದೂಡಿದ ಬಳಿಕ ಬಿಜೆಪಿಯ ಗೋ. ಮಧುಸೂದನ್ ಹಾಗೂ ಜೆಡಿಎಸ್‌ನ ಬಿ. ರಾಮಕೃಷ್ಣ ನಡುವೆ ತೀವ್ರ ಜಟಾಪಟಿ ನಡೆಯಿತು.ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ನಿಯಮ 59ರಡಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ತಿರಸ್ಕರಿಸಿದ ನಂತರ ಕಲಾಪವನ್ನು ಮುಂದೂಡಲಾಯಿತು.ಸಭಾಂಗಣದಿಂದ ಹೊರಗೆ ತೆರಳುವ ಮುನ್ನ ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ಹಾಗೂ ಬಿಜೆಪಿಯ ಗೋ. ಮಧುಸೂದನ್ ಅವರು ಲೋಕಾಯುಕ್ತಕ್ಕೆ ಕಳಂಕ ರಹಿತ ನ್ಯಾಯಮೂರ್ತಿಗಳನ್ನು ಹುಡುಕುವ ವಿಚಾರದ ಬಗ್ಗೆ ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದ್ದರು. ಈ ಹಂತದಲ್ಲಿ ನ್ಯಾಯಮೂರ್ತಿಯೊಬ್ಬರ ಬಗ್ಗೆ ಮಧುಸೂದನ್ ಆಡಿದರು ಎನ್ನಲಾದ ಮಾತು ಅಲ್ಲೇ ಇದ್ದಂತಹ ರಾಮಕೃಷ್ಣ ಅವರನ್ನು ಕೆರಳಿಸಿತು.ಈ ಸಂದರ್ಭದಲ್ಲಿ ರಾಮಕೃಷ್ಣ ಏರಿದ ದನಿಯಲ್ಲಿ ಮಧುಸೂದನ್ ವಿರುದ್ಧ ತಿರುಗಿ ಬಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಹಂತದಲ್ಲಿ ಸದಸ್ಯ ನಾಣಯ್ಯ ಹಾಗೂ ಇತರ ಸದಸ್ಯರು ಸಮಾಧಾನಪಡಿಸಲು ಪ್ರಯತ್ನಿಸಿದರು.ಸಭಾಂಗಣದಿಂದ ಹೊರಗೆ ಬಂದ ನಂತರವೂ ಇಬ್ಬರೂ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಆಗ ಮೊಗಸಾಲೆಯಲ್ಲಿದ್ದ ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದರು. ಇದರಿಂದ ಪರಿಸ್ಥಿತಿ ತಿಳಿಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry