ಶುಕ್ರವಾರ, ನವೆಂಬರ್ 22, 2019
26 °C

ಕಾಂಗ್ರೆಸ್ಸಿಗೆ ಗದ್ದುಗೆ ಕನಸಿನ ಮಾತು: ಸೋಮನಗೌಡ

Published:
Updated:

ವಿಜಾಪುರ: ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಪರ ಕೆಲಸ ಮಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ದೇವರ ಹಿಪ್ಪರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ  ಮತಯಾಚಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ, ಭಾಗ್ಯಲಕ್ಷ್ಮಿ ಬಾಂಡ್, ಸೈಕಲ್ ವಿತರಣೆ, ಬಸ್ ವ್ಯವಸ್ಥೆ ಮುಂತಾದ ಜನಪರ ಕೆಲಸಗಳಿಂದಾಗಿಯೇ ಬಿಜೆಪಿ ಜನರ ಮನ ಗೆದ್ದಿದೆ. ದೇವರ ಹಿಪ್ಪರಗಿ ಮತಕ್ಷೇತ್ರದ ಸಂಪೂರ್ಣ ನೀರಾವರಿಯೇ ನಮ್ಮ ಗುರಿಯಾಗಿದೆ ಎಂದರು.ಬಿಜೆಪಿಗೆ ಸೇರ್ಪಡೆ: ಸಂಗರೆಡ್ಡಿ ದೇಸಾಯಿ, ಸಂಗಣ್ಣ ದೇಸಾಯಿ, ಮಲ್ಲಿನಾಥ ದೇಸಾಯಿ, ರಾಮರಾವ ದೇಶಮುಖ, ಡಾ.ಎ.ಬಿ. ದೇಸಾಯಿ, ಕುಮಾರ ದೇಸಾಯಿ, ಇಸ್ಮಾಯಿಲ್ ಬಡೆಮಗೋಳ, ಬಸಪ್ಪ ಬೂದಿಹಾಳ, ಮರಿಗೆಪ್ಪ ಹೊಸಮನಿ, ಮನೋಹರ ಈಳಗೇರ ಇತರರು ಬಿಜೆಪಿ ಸೇರಿದರು.ಪಕ್ಷದ ಮುಖಂಡರಾದ ರಾಮಗೌಡ ಚೌಧರಿ, ಆರ್.ಎಸ್. ಕರಿಗೌಡರ, ವೀರಪ್ಪ ಅಲ್ಲಾಪೂರ, ವಿಶ್ವನಾಥ ಹುರಕಡ್ಲಿ, ಸೋಮಶೇಖರ ಸಜ್ಜನ, ವೈ.ಬಿ. ಕುಲಕರ್ಣಿ, ಕಾಶಿರಾಯ ಸಂಕನಾಳ ಮೊದಲಾದವರು ಉಪಸ್ಥಿತರಿದ್ದರು.ಹೂವಿನ ಹಿಪ್ಪರಗಿ:ಹೂವಿನ ಹಿಪ್ಪರಗಿಯಲ್ಲಿ ಪಕ್ಷದ ನೂತನ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು,`ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ, ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ಆಶೀರ್ವದಿಸಬೇಕು' ಎಂದರು. ದೇವರ ಹಿಪ್ಪರಗಿ ಮತಕ್ಷೇತ್ರದ ಜನರು ಹಲವಾರು ವರ್ಷಗಳಿಂದ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುವ್ಯವಸ್ಥಿತವಾದ ಬಸ್ ನಿಲ್ದಾಣ, ಉತ್ತಮ ರಸ್ತೆ, ಕುಡಿಯುವ ನೀರು, ಉತ್ತಮ ಶಾಲಾ ವ್ಯವಸ್ಥೆ, ಆಸ್ಪತ್ರೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದರು.`ಅಭ್ಯರ್ಥಿಗಳು ಆಯ್ಕೆಯಾದ ಮೇಲೆ ತಮ್ಮ ಕ್ಷೇತ್ರವನ್ನು, ಮತ ಹಾಕಿದ ಜನರನ್ನು  ಮರೆತು ಬಿಡುತ್ತಾರೆ. ಆದರೆ, ನಾನು ಆಯ್ಕೆಯಾದ ನಂತರ ಮತಕ್ಷೇತ್ರದಲ್ಲಿಯೇ ಇರಲು ತೀರ್ಮಾನಿಸಿದ್ದೇನೆ. ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ನನ್ನ ಬಯಕೆ' ಎಂದು ಹೇಳಿದರು. ಬಿಜೆಪಿ ಮುಖಂಡ ಶಿವಣ್ಣ ಬಾಗೇವಾಡಿ ಮಾತನಾಡಿ, ಜನರಿಗೆ ಉತ್ತಮ ಆಡಳಿತ ಬೇಕೆಂದರೆ ಉತ್ತಮ ನಾಯಕನನ್ನೇ ಆರಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ಹೇಳಿದರು.ಶಂಕರಗೌಡ ಕೋಟಿಕಾನೆ, ಸದಾಶಿವಣ್ಣ ನಾಡಗೌಡ, ಸಂಗಣ್ಣ ಬ್ಯಾಕೋಡ, ಎಸ್.ಎಸ್. ಪಾಟೀಲ, ಅಣ್ಣು ಆಳೂರು, ಬಿ.ಬಿ.ನಾಡಗೌಡ, ಬಸವನಗೌಡ ಪಾಟೀಲ ಚಬನೂರ, ಶಂಕರಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)