ಶುಕ್ರವಾರ, ನವೆಂಬರ್ 22, 2019
22 °C

ಕಾಂಗ್ರೆಸ್ಸಿಗೆ ಗದ್ದುಗೆ ಖಚಿತ: ಸಿದ್ದರಾಮಯ್ಯ

Published:
Updated:

ಬಸವನ ಬಾಗೇವಾಡಿ: `ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮೂರು ಹೋಳಾಗಿದೆ. ಜೆಡಿಎಸ್ ಅಪ್ಪ ಮಕ್ಕಳ ಪಕ್ಷ. ಸ್ಥಿರ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಉತ್ತಮ ಆಡಳಿತಕ್ಕಾಗಿ ನಮ್ಮ  ಅಭ್ಯರ್ಥಿಗಳಿಗೆ ಮತ ನೀಡಬೇಕು' ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.`ಬಿಜೆಪಿ ಸರ್ಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿತು. ಬೀಜ ಗೊಬ್ಬರ ಕೆಳಲು ಹೋದ ರೈತರ ಮೇಲೆ ಗೋಳಿಬಾರ ಮಾಡಿತು. ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ದಿನದ 4ಗಂಟೆಯೂ ವಿದ್ಯುತ್ ಕೊಡಲಿಲ್ಲ. ಜಿಲ್ಲೆಯ ಜನ ಬರಗಾಲದಿಂದ ತತ್ತರಿಸಿದರೆ ಅವರಿಗೆ ನೆರವು ನೀಡುವುದನ್ನು ಬಿಟ್ಟು ಅಧಿಕಾರಕ್ಕಾಗಿ ಕಚ್ಚಾಟ ಮಾಡಿದರು' ಎಂದರು.`ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಮನೆ ಕಟ್ಟಿಸಿಕೊಡುವಲ್ಲಿ ರಾಜ್ಯ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ. ಕಟ್ಟಿರುವ ಮನೆಗಳು ಕೇಂದ್ರ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಜನರು ದೇಣಿಗೆ ನೀಡಿದ ಹಣದಿಂದ. ಕೆವಲ ಭರವಸೆಗಳನ್ನೆ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿದ ಸರ್ಕಾರ ನಿಮಗೆ ಬೇಕೆ' ಎಂದು ಪ್ರಶ್ನಿಸಿದರು.`ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಸಂಪೂರ್ಣ ನೀರಾವರಿ ಮಾಡುವ ದೃಷ್ಠಿಯಿಂದ ಪ್ರತಿವರ್ಷ ನೀರಾವರಿ ಯೋಜನೆಗಳಿಗೆ ರೂ.10 ಸಾವಿರ ಕೋಟಿ ಖರ್ಚು ಮಾಡಲಿದೆ. 5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವುದರೊಂದಿಗೆ ದಿನದ 8 ಗಂಟೆಯ ವರೆಗೆ 3 ಪೇಸ್ ವಿದ್ಯುತ್ ನೀಡುತ್ತೇವೆ. 1 ರೂ. ಕೆಜಿಯಂತೆ ಪ್ರತಿ ಕಾರ್ಡ್‌ಗೆ 30 ಕೆ.ಜಿ ಅಕ್ಕಿ, ರೈತರು ಬೆಳೆದ ಬೆಳೆಗೆ ಬೆಲೆ ನಿಗದಿ ಪಡಿಸುವುದು ಸೇರಿದಂತೆ ಬೆಳೆ ನಷ್ಟ ಭರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ' ಎಂದು ಭರವಸೆ ನೀಡಿದರು. ಅಭ್ಯರ್ಥಿ ಶಿವಾನಂದ ಪಾಟೀಲ, ಅಣ್ಣಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ ನಾಯಕ, ಉಸ್ಮಾನ ಪಟೇಲ್ ಇತರರು ಮಾತನಾಡಿದರು.ಎಸ್.ಆರ್. ಪಾಟೀಲ, ಪ್ರಕಾಶ ರಾಠೋಡ, ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕಾವ್ಯಾ ದೇಸಾಯಿ, ಗೌರಮ್ಮ ಮುತ್ತತ್ತಿ, ಶ್ರೀದೇವಿ ಲಮಾಣಿ, ಜಗದೇವಿ ಬೂದಿಹಾಳ, ರಮೇಶ ಸೂಳಿಭಾವಿ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಲ.ರು. ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಕಲ್ಲು ಸೊನ್ನದ ಇತರರು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)