ಶುಕ್ರವಾರ, ನವೆಂಬರ್ 22, 2019
20 °C

ಕಾಂಗ್ರೆಸ್‌ಗೂ `ಸಾಮಾಜಿಕ ಮಾಧ್ಯಮ' ಮೋಹ

Published:
Updated:

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಯುವ ಮತದಾರರನ್ನು ತಲುಪುವ ಉದ್ದೇಶದೊಂದಿಗೆ ಕಾಂಗ್ರೆಸ್ ಸೋಮವಾರ `ಗೂಗಲ್ ಹ್ಯಾಂಗ್‌ಔಟ್' ನೇರ ಸಂವಾದಕ್ಕೆ ಚಾಲನೆ ನೀಡಿದೆ. ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಆರಂಭಿಸಿದೆ.ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ಗೂಗಲ್ ಹ್ಯಾಂಗ್‌ಔಟ್' ಮೂಲಕ ನೇರ ಸಂವಾದಕ್ಕೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಯುವ ಮತದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಸ್ವಚ್ಛ ಹಾಗೂ ಜನಪರ ಆಡಳಿತದ ಮೂಲಕ ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವ ಭರವಸೆ ನೀಡಿದರು.ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನಡೆ ಆಗಿದೆ. ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಶಿಕ್ಷಣ ಕ್ಷೇತ್ರ ಕಡೆಗಣನೆಗೆ ಒಳಗಾಗಿದೆ. ಸಣ್ಣ ಕೈಗಾರಿಕೋದ್ಯಮಿಗಳು ದೊಡ್ಡ ಸಂಖ್ಯೆಯಲ್ಲಿ ಇತರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ್ದ ವಾಗ್ದಾನವನ್ನು ಮರೆತು ಬಿಜೆಪಿ ದುರಾಡಳಿತ ನಡೆಸಿದೆ ಎಂದು ಟೀಕಿಸಿದರು.ನೇರ ಸಂವಾದದಲ್ಲಿ ಪಾಲ್ಗೊಂಡ ರುಚಿತಾ ಜೈನ್ ಎಂಬುವರು, `ಕಾಂಗ್ರೆಸ್‌ನ ಧ್ಯೇಯ ಮತ್ತು ಗುರಿಗಳು ಏನು' ಎಂಬ ಪ್ರಶ್ನೆ ಮುಂದಿಟ್ಟರು. ಅದಕ್ಕೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷರು, `ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದ ಆಡಳಿತ ನೀಡುವುದು ನಮ್ಮ ಧ್ಯೇಯ. ಅಭಿವೃದ್ಧಿಯ ವಿಷಯದಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ದಕ್ಕುವಂತೆ ಮಾಡುವುದು ನಮ್ಮ ಗುರಿ' ಎಂದರು.ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ಇರುತ್ತಾರೆ. ಅವರ ಆಶಯಗಳಿಗೆ ಸ್ಪಂದಿಸುವುದು ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಅವರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರಿಸುವ ಉದ್ದೇಶದಿಂದ ನೇರ ಸಂವಾದಕ್ಕೆ ಚಾಲನೆ ನೀಡಲಾಗಿದೆ. ಈ ಮಾಧ್ಯಮವನ್ನು ಬಳಸಿಕೊಂಡು ಯುವ ಜನರನ್ನು ತಲುಪುವ ಕಾರ್ಯಕ್ಕೆ ಕಾಂಗ್ರೆಸ್ ಆದ್ಯತೆ ನೀಡಲಿದೆ ಎಂದು ತಿಳಿಸಿದರು.`ಪ್ರಾತಿನಿಧ್ಯ ದೊರೆತಿದೆ': ನಂತರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಪರಮೇಶ್ವರ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಅಸಮಾಧಾನ ಕುರಿತು ಪ್ರಶ್ನಿಸಿದಾಗ, `ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂವರಿಗೆ ಟಿಕೆಟ್ ನೀಡಲಾಗಿದೆ. ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಮಾತ್ರ 35 ವರ್ಷದ ವಯೋಮಿತಿ ಇದೆ. ಆದರೆ, ರಾಜಕಾರಣದಲ್ಲಿ 45ರಿಂದ 50 ವರ್ಷದವರನ್ನೂ ಯುವಕರೆಂದೇ ಪರಿಗಣಿಸಲಾಗುತ್ತದೆ. ಈ ವಯೋಮಿತಿಯಲ್ಲಿರುವ ಹಲವು ಮಂದಿಗೆ ಟಿಕೆಟ್ ನೀಡಲಾಗಿದೆ' ಎಂದರು.ಗಂಭೀರ ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಟಿಕೆಟ್ ಘೋಷಿಸಿದ್ದೀರಲ್ಲಾ ಎಂಬ ಪ್ರಶ್ನೆಗೆ, `ಆರೋಪ ಎದುರಿಸುವುದು ಹಾಗೂ ಅಪರಾಧ ಸಾಬೀತಾಗುವುದರ ನಡುವೆ ವ್ಯತ್ಯಾಸವಿದೆ. ಅಪರಾಧ ಸಾಬೀತಾದರೆ ಮಾತ್ರ ಟಿಕೆಟ್ ನಿರಾಕರಿಸಬಹುದು' ಎಂದು ಉತ್ತರಿಸಿದರು.`ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣೆ ಎದುರಿಸುವ ರೂಢಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಚುನಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮ ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದೆ. ವರಿಷ್ಠರ ಆದೇಶದಂತೆ ಎಲ್ಲರೂ ನಡೆಯುತ್ತಾರೆ' ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ನಾಯಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಭೋಸರಾಜು ಉಪಸ್ಥಿತರಿದ್ದರು.ಸೋನಿಯಾಗೆ ಕೋರ್ಟ್ ನೋಟಿಸ್

ಬೆಂಗಳೂರು:
ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಬಯಸುವ ಅಭ್ಯರ್ಥಿಗಳಿಂದ ಪಕ್ಷದ ನಿಧಿಗೆ ತಲಾ ರೂ 10,000  ವಸೂಲು ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಕ್ರಮ ಈಗ ಹೈಕೋರ್ಟ್ ಮೆಟ್ಟಿಲೇರಿದೆ.ಪಕ್ಷದ ಕಾರ್ಯಕರ್ತ ವಿ. ಶಶಿಧರ್ ಎಂಬುವವರು ಈ ಕುರಿತು ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ತುರ್ತು ನೋಟಿಸ್ ನೀಡಲು ಆದೇಶಿಸಿದರು. ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದರು.ವಿಧಾನಸಭಾ ಚುನಾವಣೆಗೆ ಟಿಕೆಟ್ ಬಯಸುವ ಪ್ರತಿಯೊಬ್ಬ ಅಭ್ಯರ್ಥಿಯಿಂದ ಪಕ್ಷದ ನಿಧಿಗೆ ರೂ 10,000  ವಸೂಲು ಮಾಡಲು ಕಾಂಗ್ರೆಸ್ಸಿನ ಸಂವಿಧಾನದಲ್ಲಿ ಅವಕಾಶ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳ ನಡವಳಿಕೆ ಹೇಗಿರಬೇಕು ಎಂಬ ಕುರಿತು ಸಾಕಷ್ಟು ನಿಯಮ ರೂಪಿಸಿರುವ ಚುನಾವಣಾ ಆಯೋಗ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಗ್ಗೆ ಯಾವುದೇ ನಿಯಮ ರೂಪಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.ತನಿಖೆ ಎದುರಿಸಲು ಸಿದ್ಧ

ಬೆಂಗಳೂರು: `
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಈ ಕುರಿತು ತನಿಖೆ ಎದುರಿಸಲು ನಾವು ಸಿದ್ಧರಾಗಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, `ಅಭ್ಯರ್ಥಿಗಳ ಆಯ್ಕೆಯ ಎಲ್ಲ ಹಂತಗಳಲ್ಲೂ ಪಾರದರ್ಶಕವಾಗಿಯೇ ಮುನ್ನಡೆದಿದ್ದೇವೆ. ಎಲ್ಲಿಯೂ ಅಕ್ರಮ ನಡೆದಿಲ್ಲ' ಎಂದರು.ಟಿಕೆಟ್ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಎಐಸಿಸಿ ಪ್ರತ್ಯೇಕ ಸಮಿತಿ ನೇಮಿಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದಲ್ಲಿ ಎಐಸಿಸಿ ಶಿಸ್ತು ಸಮಿತಿ ಇದೆ. ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಯಾರಾದರೂ ದೂರು ನೀಡಿದರೆ ಶಿಸ್ತು ಸಮಿತಿ ಅದನ್ನು ಪರಿಶೀಲಿಸಲೂಬಹುದು ಎಂದು ತಿಳಿಸಿದರು.`ಅಕ್ರಮ ನಡೆದಿರುವುದಕ್ಕೆ ಪಕ್ಷದ ಕಾರ್ಯಕರ್ತರ ಬಳಿ ಸಾಕ್ಷ್ಯಾಧಾರಗಳಿದ್ದರೆ ದೂರು ನೀಡಬಹುದು. ಬಹಿರಂಗ ಹೇಳಿಕೆ ನೀಡುವ ಪಕ್ಷದ ಕಾರ್ಯಕರ್ತರ ವಿರುದ್ಧ ಶಿಸ್ತು ಸಮಿತಿ ಸೂಕ್ತ ಕ್ರಮ ಜರುಗಿಸುತ್ತದೆ. ಪಕ್ಷದ ಹೊರಗಿನವರು ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ' ಎಂದು ಎಚ್ಚರಿಸಿದರು.ಗೂಗಲ್ ಹ್ಯಾಂಗ್ ‌ಔಟ್- drgparameshwara.com

ಫೇಸ್‌ಬುಕ್- karnata­kapcc

ಟ್ವಿಟರ್- kpcckarnataka

ಯೂಟ್ಯೂಬ್- kpcc­karnataka

ಪ್ರತಿಕ್ರಿಯಿಸಿ (+)