ಸೋಮವಾರ, ಜೂನ್ 14, 2021
26 °C
ಆಯಾರಾಂ ಗಯಾರಾಂ...

ಕಾಂಗ್ರೆಸ್‌ಗೆ ಜಗದಾಂಬಿಕಾ ಪಾಲ್‌ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, ಲಖನೌ (ಪಿಟಿಐ): ಕಾಂಗ್ರೆಸ್‌ನ ಹಿರಿಯ ಮುಖಂಡ, ಸಂಸದ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯ­ಮಂತ್ರಿ ಜಗದಾಂಬಿಕಾ ಪಾಲ್‌ ಅವರು ಲೋಕಸಭೆ ಸದಸ್ವತ್ವಕ್ಕೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಪಾಲ್‌ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.‘ಬಾಡಿಗೆದಾರರಾಗಿ ಬಂದವರು ಮನೆಯ ಮಾಲೀಕ­ರಾ­ಗಿ­ದ್ದಾರೆ. ನನ್ನಂಥವರು ಬಾಡಿಗೆದಾರ­ರಾಗಿದ್ದಾರೆ. ನನ್ನಂತಹ ಹಿರಿಯ ವ್ಯಕ್ತಿ ಕಾಂಗ್ರೆಸ್‌ಗೆ ಬೇಡವಾಗಿದ್ದಾರೆ ಅನಿಸು­ತ್ತದೆ’ ಎಂದು ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಲಖನೌದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಬಿಜೆಪಿಯತ್ತ ಜೆಎಂಎಂ ಸಂಸದ ಕಾಮೇಶ್ವರ

ಮೇದಿನಿನಗರ್‌/ಜಾರ್ಖಂಡ್‌ (ಪಿಟಿಐ):
ಸಂಸದ ಕಾಮೇಶ್ವರ ಬೈಠಾ ಅವರು ಶುಕ್ರವಾರ ಜಾರ್ಖಂಡ್‌ ಮುಕ್ತಿ ಮೋರ್ಚಾಕ್ಕೆ (ಜೆಎಂಎಂ) ರಾಜೀನಾಮೆ ನೀಡಿ ಬಿಜೆಪಿ ಸದಸ್ಯತ್ವ ಕೋರಿದ್ದಾರೆ.  ‘ಅರ್ಜುನ್‌ ಮುಂಡಾ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ ಬಳಿಕ ಬಿಜೆಪಿ ಸದಸ್ಯತ್ವ ಕೋರಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆ­ಯ­ಲ್ಲಿದ್ದೇನೆ’ ಎಂದು ಬೈಠಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೈಠಾ ಅವರು 2009ರ ಚುನಾವಣೆಯಲ್ಲಿ ಜೆಎಂಎಂನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.ರಾಂಚಿ ವರದಿ: ಪಕ್ಷದ ಕಾರ್ಯ ವೈಖರಿಗೆ ಅತೃಪ್ತಿ ವ್ಯಕ್ತಪಡಿಸಿ  ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಹೇಮಲಾಲ್ ಮುರ್ಮು ಶುಕ್ರವಾರ ಪಕ್ಷ ತೊರೆದಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ರಾಜಮಹಲ್‌ ಕ್ಷೇತ್ರದಿಂದ ಸ್ಪರ್ಧಿಸಲು ಮುರ್ಮು ಬಯಸಿದ್ದರು. ಆದರೆ ಪಕ್ಷವು ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್‌ ನೀಡಲು ನಿರ್ಧರಿಸಿದೆ ಎಂದು ಜೆಎಂಎಂ ಮೂಲಗಳು ಹೇಳಿವೆ.ಎನ್‌ಸಿಪಿ ತೊರೆದ ನಾಗಮಣಿ

ನವದೆಹಲಿ (ಪಿಟಿಐ):
ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬಿಹಾರ ರಾಜ್ಯ ಘಟಕದ ಅಧ್ಯಕ್ಷ ನಾಗಮಣಿ ಅವರು ಪಕ್ಷ ತೊರೆದಿದ್ದಾರೆ.ನಾಗಮಣಿ ಅವರು ಬಿಹಾರದ ಹಿಂದುಳಿದ ವರ್ಗದ ಜನಪ್ರಿಯ ನಾಯಕ ಜಗದೇವ್‌ ಪ್ರಸಾದ್‌ ಅವರ ಪುತ್ರ.ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಎನ್‌ಸಿಪಿ ಮಧ್ಯೆ ಮೈತ್ರಿ ಏರ್ಪಟ್ಟಿದೆ. ಎರಡು ಸ್ಥಾನಗಳನ್ನು ಎನ್‌ಸಿಪಿಗೆ ಬಿಟ್ಟುಕೊಟ್ಟಿದ್ದು, ಒಂದರಲ್ಲಿ ನಾಗಮಣಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರು ಪಕ್ಷ ತೊರೆದಿದ್ದಾರೆ.‘ಕಳೆದ ಎರಡು ತಿಂಗಳಿಂದ ಸತತವಾಗಿ ಬಿಜೆಪಿ ಸಂಪರ್ಕದಲ್ಲಿದ್ದು, ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ’ ಹೇಳುವ ಮೂಲಕ  ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.