ಸೋಮವಾರ, ಡಿಸೆಂಬರ್ 9, 2019
25 °C

ಕಾಂಗ್ರೆಸ್‌ಗೆ ಪಕ್ಷದ ಧ್ವಜವೇ ಆಸ್ತಿ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ಗೆ ಪಕ್ಷದ ಧ್ವಜವೇ ಆಸ್ತಿ: ಡಿಕೆಶಿ

ಮಂಡ್ಯ: ‘ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಯುವಶಕ್ತಿಯೇ ಸಾಕು. ಯಾರದೇ ನಾಯಕತ್ವ ಅಗತ್ಯವಿಲ್ಲ. ಕೃಷ್ಣ ಅವರನ್ನೋ, ಅಂಬರೀಶ್ ಅವರನ್ನು ನಂಬಿ ಕೂರಬೇಡಿ. ಪಕ್ಷದ ಧ್ವಜ ನಿಮ್ಮ ಆಸ್ತಿ. ಅದನ್ನು ಹಿಡಿದು ಪಕ್ಷವನ್ನು ಬಲಪಡಿಸಿ’ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ ಕರೆ ಇದು. ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಪಕ್ಷಕ್ಕೆ ಯುವ ಕಾಂಗ್ರೆಸ್ ಘಟಕ ಮೂಲ ಅಡಿಪಾಯ. ಇದನ್ನು ಭದ್ರಪಡಿಸುವ ಉದ್ದೇಶದಿಂದಲೇ ಯುವ ಮುಖಂಡ ರಾಹುಲ್‌ಗಾಂಧಿ  ಬೂತ್ ಹಂತದಲ್ಲಿಯೂ ಚುನಾವಣೆ ಮೂಲಕವೇ ಆಯ್ಕೆ ನಡೆಯಬೇಕು ಎಂದು ಸೂಚಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ನಾಯಕತ್ವ ಕೊಡಿ ಎಂಬ ಹಾಲಹಳ್ಳಿ ರಾಮಲಿಂಗಯ್ಯ ಅವರ ಸಲಹೆಯನ್ನು ತಳ್ಳಿಹಾಕಿದ ಅವರು, ಪಕ್ಷ, ಪಕ್ಷದ ಧ್ವಜವೇ ನಮ್ಮ ಆಸ್ತಿ. ಅದು ತಾಯಿ ಇದ್ದ ಹಾಗೆ. ಅದನ್ನು ಕೈಬಿಡಬೇಡಿ. ಹೀಗೆ ಪಕ್ಷ ಬಿಟ್ಟವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಪಕ್ಷ ಬಿಟ್ಟವರೆಲ್ಲಾ ಹಳೇ ಗಂಡನ ಪಾದವೇ ಗತಿ ಎಂದು ಮರಳುವ ಕಾಲವು ದೂರವಿಲ್ಲ ಎಂದರು.ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು, ಇದು ಪರಿವರ್ತನೆಯ ಕಾಲ. ಜಿಲ್ಲೆಯಲ್ಲಿ ಈ ಸಭೆಯ ಮೂಲಕ ಅಂಥದೊಂದು ಪರಿವರ್ತನೆ ಆರಂಭವಾಗಿದೆ. ಪಕ್ಷಕ್ಕೆ ಮತ್ತೆ ತನ್ನ ಹಿಂದಿನ ನೆಲೆಕಂಡು ಕೊಳ್ಳುವ ಪರಿವರ್ತನೆಯೂ ಆಗಲಿ ಎಂದರು. ಕೆಪಿಸಿಸಿ ಸದಸ್ಯ ಡಾ. ಸಿ.ಕೆ. ರವಿಶಂಕರ್ ಮಾತನಾಡಿ, ಮುಖಂಡ ಹಾಲಹಳ್ಳಿ ರಾಮಲಿಂಗಯ್ಯ ಅವರು, ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಸ್ಪಷ್ಟ ನಾಯಕತ್ವದ ಅಗತ್ಯವಿದೆ. ಈ ಮೂಲಕ ಹಿಂದಿನಂತೆ ನೆಲೆ ಕಂಡುಕೊಳ್ಳಬೇಕಾಗಿದೆ ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎಸ್.ಚಿದಂಬರ್ ಅವರನ್ನು ಸನ್ಮಾನಿಸಲಾಯಿತು. ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಶ್ವಜಿತ್ ವಿಶ್ವಾಸ್, ಶಾಸಕ ಸುರೇಶ್‌ಗೌಡ, ಮಾಜಿ ಶಾಸಕ ಮಧು ಜಿ.ಎಂ., ಜಿಲ್ಲಾ ವೀಕ್ಷಕರಾದ ರುಕ್ಮಿಣಿ, ಮುಖಂಡರಾದ ಕೃಷ್ಣೇಗೌಡ, ಗುರುಚರಣ್, ವೈ.ಸಿದ್ಧರಾಜು  ಇದ್ದರು.

ಪ್ರತಿಕ್ರಿಯಿಸಿ (+)