ಗುರುವಾರ , ಜೂನ್ 17, 2021
29 °C

ಕಾಂಗ್ರೆಸ್‌ಗೆ ಪುನರ್ಜನ್ಮ ನೀಡಿದ ಪ್ರತಿಷ್ಠಿತ ಕ್ಷೇತ್ರ

ಕೆ.ಎಂ.ಸಂತೋಷ್‌ಕುಮಾರ್‌/ಎಂ.ನವೀನ್‌ಕುಮಾರ್‌/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು/ಉಡುಪಿ: ತುರ್ತು ಪರಿಸ್ಥಿತಿ ಬಳಿಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೂ ಪುನರ್ಜನ್ಮ ನೀಡಿದ ಕಾರಣಕ್ಕೆ ಇಡೀ ರಾಷ್ಟ್ರದ ಗಮನ ಸೆಳೆದ ಹೆಗ್ಗಳಿಕೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕಿದೆ.ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ನಡೆದ ಉಡುಪಿ–ಚಿಕ್ಕಮಗಳೂರು ಲೋಕಸಭಾ ಉಪ­ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಓಟಕ್ಕೂ ಮುನ್ನುಡಿ ಬರೆದ ಕ್ಷೇತ್ರವಿದು. ಈ ಗೆಲುವು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ಫೂರ್ತಿ ಕೂಡ ನೀಡಿತು. ಈಗ ಇದು ಕೂಡ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದೆನಿಸಿದೆ.ಅಪ್ಪಟ ಮಲೆನಾಡು, ಅರೆ­ಮಲೆನಾಡು, ಬಯಲು ಸೀಮೆ, ಕರಾವಳಿ ಪ್ರದೇಶ ಹೀಗೆ ವಿಭಿನ್ನ ಭೌಗೋಳಿಕ ಪರಿಸರದ ಹಿನ್ನೆಲೆಯ ಕ್ಷೇತ್ರವಿದು. ಕಾಪು–ಕಾರ್ಕಳದಿಂದ ಹಿಡಿದು ಚಿಕ್ಕಮಗಳೂರು–ತರೀಕೆರೆವರೆಗೆ ಕ್ಷೇತ್ರ ಸುತ್ತುಹಾಕುವುದು ಅಭ್ಯರ್ಥಿಗಳಿಗೆ ‘ಕೊಂಕಣ ಸುತ್ತಿ ಮೈಲಾರ’ ತಲುಪಿದಷ್ಟೆ ತ್ರಾಸದ ಕೆಲಸ.ಚಿಕ್ಕಮಗಳೂರು ಜಿಲ್ಲೆ 1967ರ ಮೊದಲು ಹಾಸನ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿಯೇ ಇತ್ತು. ನಂತರ ಚಿಕ್ಕಮಗಳೂರು ಕ್ಷೇತ್ರವಾಗಿ ಪ್ರತ್ಯೇಕಗೊಂಡು 2009ರವರೆಗೂ ಚಾಲ್ತಿ­ಯಲ್ಲಿತ್ತು. ಕ್ಷೇತ್ರ ಪುನರ್‌ ವಿಂಗಡಣೆ­ಯಿಂದ ಉಡುಪಿ–-ಚಿಕ್ಕ­ಮಗಳೂರು ಲೋಕಸಭಾ ಕ್ಷೇತ್ರ­ವಾಯಿತು. ಚಿಕ್ಕಮಗಳೂರು ಲೋಕ­ಸಭಾ ಕ್ಷೇತ್ರ ಹಿಂದೆ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ಸೇರಿ 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು.ಕ್ಷೇತ್ರ ಪುನರ್ವಿಂಗಡಣೆ ನಂತರ ಉಡುಪಿ–-ಚಿಕ್ಕಮಗಳೂರು ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಕುಂದಾಪುರ, ಕಾರ್ಕಳ, ಕಾಪು, ಉಡುಪಿ ಹಾಗೂ ಚಿಕ್ಕ­ಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಸೇರಿವೆ. ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.ಹಾಲಿ ಸಂಸದ ಎಚ್.ಡಿ.­ದೇವೇಗೌಡರು ಪ್ರತಿನಿಧಿಸುವ ಹಾಸನ ಕ್ಷೇತ್ರಕ್ಕೆ ಕಡೂರು ಸೇರಿರುವುದರಿಂದ ಇಬ್ಬರು ಮಾಜಿ ಪ್ರಧಾನಿಗಳು ಪ್ರತಿನಿಧಿ­ಸಿದ ಜಿಲ್ಲೆ ಎನ್ನುವ ಶ್ರೇಯ ಚಿಕ್ಕ­ಮಗಳೂರಿಗೆ ಸಲ್ಲುತ್ತದೆ.ಈವರೆಗೆ 15 ಸಾರ್ವತ್ರಿಕ ಚುನಾವಣೆ ಮತ್ತು 2 ಮರು ಚುನಾವಣೆಗಳಿಗೆ ಕ್ಷೇತ್ರ ಸಾಕ್ಷಿಯಾಗಿದೆ. 11 ಬಾರಿ ಕಾಂಗ್ರೆಸ್‌ಗೆ ಒಲಿದರೆ, ಬಿಜೆಪಿಗೆ 2 ಬಾರಿ, ಜೆಡಿಎಸ್‌ ಮತ್ತು ಪ್ರಜಾ ಸೋಷಲಿಸ್ಟ್‌ ಪಕ್ಷಕ್ಕೆ ತಲಾ ಒಂದು ಬಾರಿ ಒಲಿದಿದೆ.1978ರಲ್ಲಿ ಅಂದಿನ ಸಂಸದ ಡಿ.ಬಿ.ಚಂದ್ರೇಗೌಡರು ರಾಜೀನಾಮೆ ನೀಡಿ ಇಂದಿರಾ ಗಾಂಧಿಯವರ ಸ್ಪರ್ಧೆಗೆ ಅನುವು ಮಾಡಿಕೊಟ್ಟರು. ಕ್ಷೇತ್ರಕ್ಕೆ ಎದುರಾದ ಮೊದಲ ಉಪ ಚುನಾವಣೆ ಇದು. ಆಗ ಇಡೀ ರಾಷ್ಟ್ರದ ಕಣ್ಣು ಚಿಕ್ಕಮಗಳೂರು ಮೇಲೆ ನೆಡುವಂತಾ­ಯಿತು. ಆ ಚುನಾವಣೆಯಲ್ಲಿ ಇಂದಿರಾ­ಗಾಂಧಿ ಜನತಾ ಪಕ್ಷದ ಅಭ್ಯರ್ಥಿ ವೀರೇಂದ್ರ ಪಾಟೀಲರ ಎದುರು ಭರ್ಜರಿ ಗೆಲುವು ಪಡೆದು, ರಾಷ್ಟ್ರ ರಾಜಕಾರಣ­ದಲ್ಲಿ ಮಿಂಚಿದರು. ಇಂದಿರಾ ಎದುರು ಕಣದಲ್ಲಿದ್ದ 26 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು!ಆದರೆ, ಡಿ.ಬಿ.ಚಂದ್ರೇಗೌಡರು ಈ ಕ್ಷೇತ್ರದಿಂದ ಸ್ಪರ್ಧಿಸಲು ಮತ್ತೆ ಅವಕಾಶ ಸಿಗದೆ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ತಮಗಿದ್ದ ಭದ್ರ ರಾಜಕೀಯ ನೆಲೆಯನ್ನೂ ಕಳೆದುಕೊಂಡಿದ್ದು ಇತಿಹಾಸದ ವಿಪರ್ಯಾಸ.ಇದೇ ಕ್ಷೇತ್ರ ಉಡುಪಿ–ಚಿಕ್ಕ­ಮಗಳೂರು ಕ್ಷೇತ್ರವಾದ ಮೇಲೆ 2009ರ ಚುನಾವಣೆಯಲ್ಲಿ ಆಯ್ಕೆ­ಯಾಗಿದ್ದ ಬಿಜೆಪಿ ಸಂಸದ ಡಿ.ವಿ.­ಸದಾನಂದಗೌಡ 2012ರಲ್ಲಿ ರಾಜ್ಯ ರಾಜಕಾರಣದಲ್ಲಿ ಉಂಟಾದ ದಿಢೀರ್‌ ಬೆಳವಣಿಗೆಯಿಂದ ಮುಖ್ಯಮಂತ್ರಿ ಗಾದಿ­ಯೇರಿದರು. ಅವರು ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಕ್ಷೇತ್ರಕ್ಕೆ 2ನೇ ಉಪಚುನಾವಣೆ ಎದುರಾ­ಯಿತು.ಅದರಲ್ಲಿ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಗೆ ಆಗಲಿಲ್ಲ. ಕೆ.ಜಯಪ್ರಕಾಶ್‌ ಹೆಗ್ಡೆ ಗೆಲುವಿನ ಮೂಲಕ ಕಾಂಗ್ರೆಸ್‌ ಕ್ಷೇತ್ರದಲ್ಲಷ್ಟೇ ಅಲ್ಲ ರಾಜ್ಯದಲ್ಲಿ ನೆಲೆ ಕಂಡುಕೊಂಡಿತು. ಕ್ಷೇತ್ರದ ಮೇಲೆ ತಪ್ಪಿ ಹೋಗಿದ್ದ ಹಿಡಿತವನ್ನು ಮರಳಿ ಪಡೆ­ಯುವ ಜತೆಗೆ ವಿಧಾನಸೌಧದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ವಿಧಾನಸಭಾ ಚುನಾವಣೆ ಪ್ರಚಾರಕ್ಕೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಉಡುಪಿಯಿಂದಲೇ ಚಾಲನೆ ನೀಡಿ ‘ಉಡುಪಿ ಕಾಂಗ್ರೆಸ್‌ ಗೆಲುವಿನ ಹೆಬ್ಬಾಗಿಲು’ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವೂ ಆಯಿತು.ಡಿ.ವಿ.ಸದಾನಂದಗೌಡರು ಮುಖ್ಯ­ಮಂತ್ರಿ ಸ್ಥಾನದಿಂದ ಇಳಿಯುವವರೆಗೂ ಜಿಲ್ಲೆಗೆ ಬಂದಾಗಲೆಲ್ಲ ‘ನೀವು ಸಂಸತ್‌ಗೆ ಹೋಗುವಂತೆ ನನಗೆ ನೀಡಿದ ಓಟು ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿತು. ನಿಮ್ಮ ಓಟಿಗೆ ಅಷ್ಟೊಂದು ತಾಕತ್ತು’ ಇದೆ ಎಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹೇಳುತ್ತಲೇ ಇದ್ದರು. ಆದರೆ, ಈಗ ಇದೇ ಕ್ಷೇತ್ರದಲ್ಲಿ ಅವರು ನೆಲೆ ಕಳೆದು­ಕೊಂಡಿದ್ದಾರೆ. ಸ್ವಪಕ್ಷ ಟಿಕೆಟ್‌ ನೀಡಲು ಸಿದ್ಧವಿದ್ದರೂ ಸ್ಪರ್ಧಿಸಲು ಅಳುಕು ತೋರಿ, ಬೇರೆ ಕ್ಷೇತ್ರದ ಹುಡುಕಾಟ­ದಲ್ಲಿದ್ದಾರೆ.ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1952ರಲ್ಲಿ ನಡೆದ ಮೊದಲ ಚುನಾವಣೆ­ಯಲ್ಲಿ ಕಾಂಗ್ರೆಸ್‌ನ ಎಚ್.­ಸಿದ್ದನಂಜಪ್ಪ ಅವರು ಆಗಿನ ಸಮಾಜ­ವಾದಿ ಪಕ್ಷದ ಎಸ್.ಶಿವಪ್ಪ ಅವರನ್ನು ಮಣಿಸಿ ಆಯ್ಕೆಯಾಗಿದ್ದರು. 1957­ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಸಿದ್ದನಂಜಪ್ಪ ಅವಿರೋಧ ಆಯ್ಕೆ­ಯಾದರು. 1962ರ ಚುನಾವಣೆ­ಯಲ್ಲೂ ಮತ್ತೆ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.1967ರಲ್ಲಿ  ಪ್ರಜಾ ಸೋಷಲಿಸ್ಟ್‌ ಪಕ್ಷಕ್ಕೆ ಮೊದಲ ಗೆಲುವು ದೊರೆತು, ಎಂ.ಹುಚ್ಚೇಗೌಡ ಸಂಸದರಾದರು. 1971 ಮತ್ತು 1977ರಲ್ಲಿ ಡಿ.ಬಿ.­ಚಂದ್ರೇಗೌಡ ಸತತ ಎರಡು ಬಾರಿ ಆಯ್ಕೆಯಾಗಿದ್ದರು. 1978ರ ಉಪ­ಚುನಾವಣೆಯಲ್ಲಿ ಇಂದಿರಾಗಾಂಧಿ ಆಯ್ಕೆ­­ಯಾದರೆ, 1980ರಲ್ಲಿ ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡ ಗೆಲುವು ಕಂಡಿದ್ದಾರೆ, 1984ರಲ್ಲಿ ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ, 1989ರಲ್ಲಿ  ಮತ್ತೆ ಡಿ.ಎಂ.ಪುಟ್ಟೇಗೌಡ, 1991ರಲ್ಲಿ ಕಾಂಗ್ರೆಸ್‌­ನಿಂದ ಇನ್ನೊಮ್ಮೆ ಡಿ.ಕೆ.­ತಾರಾದೇವಿ ಆಯ್ಕೆಯಾಗಿದ್ದರು.1996ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ಗೆ ಗೆಲುವು ಸಿಕ್ಕಿ, ಬಿ.ಎಲ್.­ಶಂಕರ್ ಸಂಸದರಾದರು. 1998, 1999 ಹಾಗೂ 2004ರ ಚುನಾವಣೆ­ಯಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2009ರಲ್ಲಿ ಬಿಜೆಪಿಯಿಂದ ಡಿ.ವಿ.­ಸದಾನಂದಗೌಡ ಆಯ್ಕೆ­ಯಾದರು. ಅವರ ರಾಜೀನಾಮೆಯಿಂದ 2012­ರಲ್ಲಿ ಎದುರಾದ ಉಪಚುನಾವಣೆ­ಯಲ್ಲಿ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆಗೆ ಗೆಲುವು ಒಲಿದಿದೆ.ಮೊದಲಿತ್ತು ಉಡುಪಿ ಕ್ಷೇತ್ರ: ಕ್ಷೇತ್ರ ಪುನರ್‌ ವಿಂಗಡಣೆಗೂ ಮೊದಲು ಉಡುಪಿ ಲೋಕಸಭಾ ಕ್ಷೇತ್ರವೂ ಅಸ್ತಿತ್ವ­ದಲ್ಲಿತ್ತು. ಮಂಗಳೂರಿನ ಬಂಟ್ವಾಳ, ಸುರತ್ಕಲ್‌, ಮೂಲ್ಕಿ– ಮೂಡುಬಿದಿರೆ ಹಾಗೂ ಉಡುಪಿ ಜಿಲ್ಲೆಯ ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು.ಉಡುಪಿ ಕ್ಷೇತ್ರಕ್ಕೆ ನಡೆದಿರುವ 13 ಚುನಾವಣೆಗಳಲ್ಲಿ 10 ಬಾರಿ (1957, 1962, 1971, 1977, 1980, 1984, 1989, 1991, 1996, 1999) ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಕ್ಷೇತ್ರದ ಮತದಾರರು ಆಯ್ಕೆ ಮಾಡಿ­ದ್ದಾರೆ. ಬಿಜೆಪಿಗೆ ಎರಡು ಬಾರಿ (1998, 2004) ಒಲಿದಿದೆ. ಸ್ವರಾಜ್ಯ ಪಕ್ಷದ (ಎಸ್‌ಡಬ್ಲ್ಯುಎ) ಅಭ್ಯರ್ಥಿ ಜೆಎಂಎಲ್‌ ಪ್ರಭು ಒಮ್ಮೆ (1967) ಗೆಲುವು ಕಂಡಿದ್ದಾರೆ.ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಆಸ್ಕರ್‌ ಫರ್ನಾಂಡಿಸ್‌ ಅವರು 1980ರಿಂದ 1996ರ ವರೆಗೆ ಸತತ ಐದು ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. 1998ರಲ್ಲಿ ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ ಅವರು ಆಸ್ಕರ್‌ಗೆ ಸೋಲಿನ ರುಚಿ ತೋರಿಸಿದರು. ಇದು ಈ ಕ್ಷೇತ್ರದಲ್ಲಿ ಬಿಜೆಯ ಮೊದಲ ಗೆಲುವು. ಆ ನಂತರ ಆಸ್ಕರ್‌ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಮನೋರಮಾ ಮಧ್ವರಾಜ್‌ ಅವರು 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಈ ಸಲ ಪ್ರಮುಖ ಪಕ್ಷಗಳ ಜತೆ ಆಮ್‌ ಆದ್ಮಿ ಪಕ್ಷ, ಜೆಡಿಯು, ಬಿಎಸ್‌ಪಿ ಸೂಕ್ತ ಅಭ್ಯರ್ಥಿಗಳ ಶೋಧದಲ್ಲಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.