ಕಾಂಗ್ರೆಸ್‌ಗೆ ಮಧ್ಯಮ ವರ್ಗದ `ಭೀತಿ'

7

ಕಾಂಗ್ರೆಸ್‌ಗೆ ಮಧ್ಯಮ ವರ್ಗದ `ಭೀತಿ'

Published:
Updated:

ನವದೆಹಲಿ: ಗೃಹಸಾಲದ ಬಡ್ಡಿದರ ಹೆಚ್ಚಳ, ತೈಲ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಮಧ್ಯಮ ವರ್ಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರದಿಂದ ವಿಮುಖವಾಗಬಹುದು ಎಂಬ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ.ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ, ತೆರಿಗೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಸುವ ಮೂಲಕ ಮಧ್ಯಮ ವರ್ಗಕ್ಕೆ ಆರ್ಥಿಕ ಸಂಕಷ್ಟವನ್ನುಂಟು ಮಾಡಿದೆ. ಬಡವರನ್ನು ಗುರಿಯಾಗಿರಿಸಿಕೊಂಡು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು, ತಮ್ಮನ್ನು ನಿರ್ಲಕ್ಷಿಸುತ್ತಿದೆ ಎಂಬ ಭಾವನೆ ಮಧ್ಯಮ ವರ್ಗಕ್ಕೆ ಬರುತ್ತಿದೆ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಮಧ್ಯಮವರ್ಗದ ಮತದಾರರು ಕಾಂಗ್ರೆಸ್ ಪರ ಮತ ಚಲಾಯಿಸದೇ, ಇತರ ಪಕ್ಷಗಳಿಗೆ ಬೆಂಬಲ ಸೂಚಿಸಬಹುದು ಎಂಬ ಭಾವನೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರಲ್ಲಿ ಮೂಡುತ್ತಿದೆ.ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಯ ಗೊಂದಲಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಸರ್ಕಾರದ ಭವಿಷ್ಯ ಮಧ್ಯಮ ವರ್ಗದ ಮತದಾರರ ಕೈಯಲ್ಲಿದೆ. ಎರಡು ಬಾರಿ ಅಧಿಕಾರದ ಗದ್ದುಗೆ ಏರಿರುವ ಯುಪಿಎ ಸರ್ಕಾರ, ಮೂರನೇ ಬಾರಿಯೂ ಈ ಗದ್ದುಗೆ ಏರಲು ಮಧ್ಯಮವರ್ಗದ ಮತದಾರರ ಪಾತ್ರ ನಿರ್ಣಾಯಕವಾಗಲಿದೆ. ಈ ಅಂಶ ಯುಪಿಎ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.ಪುಣೆ ಮತ್ತು ಹೈದರಾಬಾದ್‌ನಂತಹ  ನಗರಗಳಲ್ಲಿ ಬಿಜೆಪಿಯ `ಪ್ರಧಾನಿ ಅಭ್ಯರ್ಥಿ', ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ರಾಜಕೀಯ ರ‌್ಯಾಲಿಗಳು ಕಾಂಗ್ರೆಸ್ಸನ್ನು ಚಿಂತೆಗೀಡು ಮಾಡಿವೆ.ಆದರೆ, ಹಿಂದುಳಿದ ವರ್ಗಗಳ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರ ಲೋಕಸಭಾ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಆಶಾದಾಯಕವಾಗಿದೆ. ಏಕೆಂದರೆ, ಬಡವರು ಮತ್ತು ಹಿಂದುಳಿದ ವರ್ಗದವರನ್ನೇ ಗುರಿಯಾಗಿರಿಸಿಕೊಂಡಿರುವ ಆಹಾರ ಭದ್ರತಾ ಕಾಯ್ದೆ ಹಾಗೂ ಭೂಸ್ವಾಧೀನ ಮಸೂದೆ ಈ ಎರಡೂ ರಾಜ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಲೋಕಸಭೆಯ 120 ಸ್ಥಾನಗಳಲ್ಲಿ ಬಹುಪಾಲು ಕಾಂಗ್ರೆಸ್‌ಗೆ ದಕ್ಕುವ ಬಗ್ಗೆ ಸಂಶಯವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ವಿಶ್ಲೇಷಿಸುತ್ತಾರೆ.2004ರ ಚುನಾವಣೆಗೆ ಹೋಲಿಸಿದಲ್ಲಿ 2009ರ ಚುನಾವಣೆಯಲ್ಲಿ ಕಾಂಗ್ರೆಸ್ 61 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿತ್ತು. ಶೇ 2.1 ರಷ್ಟು ಮಾತ್ರ ಮತದಾನದ ಪ್ರಮಾಣ ಹೆಚ್ಚಿತ್ತು. ಕಾಂಗ್ರೆಸ್ ಕೇವಲ 28.6ರಷ್ಟು ಪ್ರಮಾಣದ ಅಂತರದಲ್ಲಿ  ಎನ್‌ಡಿಎ ವಿರುದ್ಧ ಗೆಲುವು ಸಾಧಿಸಿತ್ತು.ಇತ್ತೀಚೆಗೆ ಸಿಎನ್‌ಎನ್ ಐಬಿಎನ್-ಸಿಎಸ್‌ಡಿಎಸ್ ಮತ್ತು `ದಿ ಹಿಂದು' ಪತ್ರಿಕೆ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 139 ಸ್ಥಾನಗಳನ್ನು ಗಳಿಸಬಹುದು ಎನ್ನಲಾಗಿದೆ. 2004ರ ಚುನಾವಣೆಯಲ್ಲಿ ಕಾಂಗ್ರೆಸ್ 145 ಸ್ಥಾನಗಳನ್ನು ಗಳಿಸಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.ಆಹಾರ ಭದ್ರತಾ ಕಾಯ್ದೆ, ಭೂಸ್ವಾಧೀನ ಮಸೂದೆಯನ್ನು ನವೆಂಬರ್‌ನಲ್ಲಿ ದೆಹಲಿ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ತಾನ ಮತ್ತು ಮಿಜೋರಾಂ ಸರ್ಕಾರಗಳು ಜಾರಿಗೆ ತರಲಿವೆ.ಈ ರಾಜ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಲಿಗೆ ಆಶಾದಾಯಕವಾಗಿ ಪರಿಣಮಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry