ಶುಕ್ರವಾರ, ಮೇ 20, 2022
23 °C

ಕಾಂಗ್ರೆಸ್‌ಗೆ ಮುಖಭಂಗ, ಕುಲದೀಪ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ಗೆ ಮುಖಭಂಗ, ಕುಲದೀಪ್‌ಗೆ ಜಯ

ಹಿಸ್ಸಾರ್ (ಪಿಟಿಐ): ಹರಿಯಾಣದಲ್ಲಿನ ಪ್ರತಿಷ್ಠಿತ ಹಿಸ್ಸಾರ್ ಲೋಕಸಭಾ ಉಪಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಎಚ್‌ಜೆಸಿ- ಬಿಜೆಪಿ ಮಿತ್ರಕೂಟ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ಜಯ ಗಳಿಸಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.ಕಾಂಗ್ರೆಸನ್ನು ಶತಾಯಗತಾಯ ಮೂಲೆಗುಂಪಾಗಿಸಲು ಅಣ್ಣಾ ತಂಡವು ಇಲ್ಲಿ ತೀವ್ರ ಆಂದೋಲನ ನಡೆಸಿತ್ತು.

ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿದ್ದು ಅವರ ಪುತ್ರ ಬಿಷ್ಣೋಯಿ (42) ಹರಿಯಾಣ ಜನಹಿತ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಉಳಿಸಿಕೊಟ್ಟಿದ್ದಾರೆ. ಇವರು ತಮ್ಮ ಸಮೀಪ ಪ್ರತಿಸ್ಪರ್ಧಿ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಅವರ ಪುತ್ರ ಐಎನ್‌ಎಲ್‌ಡಿಯ ಅಜಯ್‌ಸಿಂಗ್ ಚೌತಾಲ (50) ಅವರನ್ನು ಮತ ಚಲಾವಣೆಯಾದ ಒಟ್ಟು 9 ಲಕ್ಷದ ಪೈಕಿ 6,323 ಮತಗಳ ಅಂತರದಿಂದ ಸೋಲಿಸಿದ್ದಾರೆ.ಆಡಳಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಹಿಸ್ಸಾರ್‌ನಿಂದ ಮೂರು ಬಾರಿ ಸಂಸದರಾಗಿರುವ ಮಾಜಿ ಕೇಂದ್ರ ಸಚಿವ ಜೈ ಪ್ರಕಾಶ್ (58) ಮೂರನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಿಂದ ಇವರು ಈ ಹಿಂದೆ 2004ರಲ್ಲಿ ಚುನಾಯಿತರಾಗಿದ್ದರು.ಹರಿಯಾಣ ಜನಹಿತ್ ಕಾಂಗ್ರೆಸ್ (ಎಚ್‌ಜೆಸಿ) ಮತ್ತು ಬಿಜೆಪಿಯೊಂದಿಗೆ ಮೈತ್ರಿಕೂಟದ ಅಭ್ಯರ್ಥಿ ಬಿಷ್ಣೋಯಿ 3,55,941 ಮತಗಳನ್ನು ಪಡೆದರೆ, ಚೌತಾಲ ಅವರು 3,49,618 ಮತಗಳನ್ನು ಹಾಗೂ ಜೈ ಪ್ರಕಾಶ್ 1,49,785 ಮತಗಳನ್ನು ಗಳಿಸಿದ್ದಾರೆ.ಒಟ್ಟು 13.32 ಲಕ್ಷ ಮತದಾರರು ಮತ್ತು 40 ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಲ್ಲಿ ಅಕ್ಷರಶಃ ತ್ರಿಕೋನ ಸ್ಪರ್ಧೆ ಇತ್ತು.ಅಣ್ಣಾ ತಂಡದ ಕಾಂಗ್ರೆಸ್ ವಿರೋಧಿ ಪ್ರಚಾರವು ತಮ್ಮ ಗೆಲುವಿನಲ್ಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ಬಿಷ್ಣೋಯಿ ಹೇಳಿದ್ದರೆ, ಹಿಸ್ಸಾರ್ ಕ್ಷೇತ್ರವು ರಾಜ್ಯದಲ್ಲಿನ ಕೆಲ ಗುಂಪುಗಳ ಭದ್ರ ಕೋಟೆ ಆಗಿದೆ. ಇದು ಉತ್ತಮ ಹೋರಾಟವನ್ನು ನೀಡಿತ್ತು ಎಂದು ಕಾಂಗ್ರೆಸ್ ತಿಳಿಸಿದೆ.ಹಿಸ್ಸಾರ್‌ನವರೇ ಆದ ಅಣ್ಣಾ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಅವರು, `ಇದು ಜನಲೋಕಪಾಲ್ ಮಸೂದೆ ಕುರಿತ ಜನಮತ ಸಂಗ್ರಹ~. ಕಾಂಗ್ರೆಸ್ ಪಾಠ ಕಲಿತು ಈಗ ಜನಲೋಕಪಾಲ್ ಮಸೂದೆ ಅಂಗೀಕರಿಸಬೇಕು. ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಬಿಷ್ಣೋಯಿ ಗೆಲುವಿನಿಂದ ಅಣ್ಣಾ ತಂಡಕ್ಕೆ ಏನೂ ಆಗಬೇಕಿಲ್ಲ ಎಂದಿದ್ದಾರೆ.ಬಿಷ್ಣೋಯಿ ಅವರ ತಂದೆ ಭಜನ್‌ಲಾಲ್ 2009ರಲ್ಲಿ ಹಿಸ್ಸಾರ್ ಲೋಕಸಭಾ ಕ್ಷೇತ್ರದಲ್ಲಿ 6,983 ಮತಗಳ ಅಂತರದಿಂದ ತಮ್ಮ ಸಮೀಪಸ್ಪರ್ಧಿ ಐಎನ್‌ಎಲ್‌ಡಿಯ ಸಂಪತ್ ಸಿಂಗ್ ಅವರನ್ನು ಸೋಲಿಸಿದ್ದರು. ಸಂಪತ್ ನಂತರದಲ್ಲಿ ಕಾಂಗ್ರೆಸ್ ಸೇರಿದ್ದರು. ಜೈಪ್ರಕಾಶ್ ಅವರು ಆಗ ಮೂರನೇ ಸ್ಥಾನದಲ್ಲಿದ್ದರು.ಮುಂದುವರಿಯುವ ಮೈತ್ರಿ- ಸುಷ್ಮಾ: ಬಿಜೆಪಿ- ಎಚ್‌ಜೆಸಿ ಮೈತ್ರಿಕೂಟವನ್ನು ಬೆಂಬಲಿಸಿದ್ದಕ್ಕಾಗಿ ಹರಿಯಾಣದ ವಿಶೇಷವಾಗಿ ಹಿಸ್ಸಾರ್ ಕ್ಷೇತ್ರದ ಮತದಾರರಿಗೆ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. `ಬಿಜೆಪಿ- ಎಚ್‌ಜೆಸಿ~ ಮೈತ್ರಿ ಮುಂದೆಯೂ ಮುಂದುವರಿಯುವುದು ಎಂದಿದ್ದಾರೆ.ಬಿಷ್ಣೋಯಿ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿ, `ಜನರು ಮೈತ್ರಿಕೂಟಕ್ಕೆ ಮತ ಹಾಕಿದ್ದಾರೆ. ಈ ಮೈತ್ರಿ ದೀರ್ಘ ಕಾಲದವರೆಗೆ ಮುಂದುವರಿಯಲಿದೆ.  ಭವಿಷ್ಯದಲ್ಲಿ ರಾಜ್ಯದಲ್ಲಿ ಎಚ್‌ಜೆಸಿ- ಬಿಜೆಪಿ ಸರ್ಕಾರ ರಚನೆಗೆ ಈ ಗೆಲುವು ಅಡಿಗಲ್ಲು~ ಎಂದು ಹೇಳಿದ್ದಾರೆ.ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಅವರು, ಭ್ರಷ್ಟಾಚಾರ ನಿವಾರಿಸುವಲ್ಲಿನ ಕಾಂಗ್ರೆಸ್ ನೀತಿಗಳ ವಿರುದ್ಧ ಜನರು ಮತ ಹಾಕಿದ್ದಾರೆ. `ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ~ ಎಂದು ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ಪ್ರತಿಕ್ರಿಯೆ: `ಯಾವುದೇ ಚುನಾವಣೆಯಲ್ಲಿ ಸೋಲು ವಿಷಾದಕರ.  ನಾವು ಈ ಸ್ಥಾನ ಯಾಕೆ ಕಳೆದುಕೊಂಡೆವು ಮತ್ತು ಇದಕ್ಕೆ ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಯಬೇಕಿದೆ~ ಎಂದು ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ. ಈ ತಿಂಗಳ 13ರಂದು ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.