ಗುರುವಾರ , ಜೂನ್ 17, 2021
23 °C

ಕಾಂಗ್ರೆಸ್‌ಗೆ ಷರೀಫ್‌ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರು ಜೆಡಿಎಸ್‌ ಸೇರುವುದು ಬಹುತೇಕ ಖಚಿತವಾಗಿದೆ. ಅವರನ್ನು ಮೈಸೂರು ಕ್ಷೇತ್ರದಿಂದ ಕಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ.ಷರೀಫ್‌ ಅವರು ಮಂಗಳವಾರ ಕೂಡ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರಿನಿಂದ ಷರೀಫ್‌ ಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ಮುಖಂಡರು ಆಸಕ್ತಿ ತೋರಿದ್ದು, ಅದಕ್ಕೆ ಪೂರಕವಾಗಿ ಷರೀಫ್‌ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.ಆದರೆ, ಷರೀಫ್‌ ಕುಟುಂಬದವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಉತ್ತಮ ಎನ್ನುವ ಅಭಿಪ್ರಾಯ ಹೊಂದಿದ್ದಾರೆ.

ಮುಗಿದ ಅಧ್ಯಾಯ: ‘ಕಾಂಗ್ರೆಸ್‌ ಜತೆ­ಗಿನ ನನ್ನ ಸಂಬಂಧ ಮುಗಿದ ಅಧ್ಯಾಯ’ ಎಂದು ಷರೀಫ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಹೀಗೆ ಹೇಳುವುದರ ಮೂಲಕ ಪಕ್ಷ ಬಿಡುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.‘ಲೋಕಸಭಾ ಚುನಾವಣೆಗೂ ಸ್ಪರ್ಧಿಸುತ್ತೇನೆ’ ಎಂದು ಹೇಳಿದ ಅವರು ಕ್ಷೇತ್ರ ಯಾವುದು ಎಂಬುದನ್ನು ಮೆಕ್ಕಾ ಪ್ರವಾಸದ ನಂತರ ತಿಳಿಸಲಾಗುವುದು ಎಂದರು.‘ಚಿಕ್ಕಬಳ್ಳಾಪುರ, ಬೀದರ್‌ ಸೇರಿದಂತೆ ಹಲವು ಕಡೆಯಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ. ಆದರೆ, ನನಗೆ ಮೈಸೂರಿನ ಕಡೆಗೇ ಹೆಚ್ಚು ಒಲವು. ಕಾರಣ ನಾನು ರೈಲ್ವೆ ಮಂತ್ರಿಯಾಗಿದ್ದಾಗ  ಬೆಂಗಳೂರು– ಮೈಸೂರು ನಡುವೆ ಬ್ರಾಡ್‌ಗೇಜ್‌ ಮಾರ್ಗ ನಿರ್ಮಾಣ ಆಯಿತು. ಇದಲ್ಲದೆ, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಮೈಸೂರಿನಿಂದ ಸ್ಪರ್ಧಿಸುವ ಇಚ್ಛೆ ಇದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.