ಭಾನುವಾರ, ನವೆಂಬರ್ 17, 2019
28 °C

ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಗೊಂದಲ ಏನೂ ಅಲ್ಲ: ಶೆಟ್ಟರ್

Published:
Updated:

ಹುಬ್ಬಳ್ಳಿ:`ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲಕ್ಕೆ ಹೋಲಿಸಿದರೆ ಬಿಜೆಪಿಯಲ್ಲಿರುವ ಗೊಂದಲ ಏನೂ ಅಲ್ಲ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೊಂಡರು.ಕೇಶ್ವಾಪುರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, `ಕೆಜೆಪಿಯಿಂದ ಬಿಜೆಪಿ ಅಸ್ತಿತ್ವಕ್ಕೆ ಯಾವುದೇ ಪೆಟ್ಟು ಬಿದ್ದಿಲ್ಲ. ಬಿಜೆಪಿಯಿಂದ ಹೆಚ್ಚು ನಾಯಕರು ಕೆಜೆಪಿಗೆ ಹೋಗಿಲ್ಲ. ಬಿಜೆಪಿಯಲ್ಲಿ ಅಂತರಿಕ ಗೊಂದಲಗಳಿದ್ದರೂ ಅದನ್ನು ಪಕ್ಷದೊಳಗೆ ಸರಿಪಡಿಸಿಕೊಳ್ಳಲಾಗುವುದು. ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನಿಂದಾಗಿ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಕೂಡಾ ಸದ್ಯದಲ್ಲೇ ನಿವಾರಣೆ ಆಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಕೆಜೆಪಿ ಸೇರುವಂತೆ ಬಿಜೆಪಿ ನಾಯಕರ ಮೇಲೆ ಬಿ.ಎಸ್.ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ' ಎಂದ ಅವರು, `ಸಚಿವ ಮುರುಗೇಶ ನಿರಾಣಿ ಜಮಖಂಡಿಯಿಂದ ಟಿಕೆಟ್ ಕೇಳುತ್ತಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಸಚಿವ ಆನಂದ ಸಿಂಗ್ ಇನ್ನೂ ಅಧಿಕೃತವಾಗಿ ಬಿಜೆಪಿ ಬಿಟ್ಟಿಲ್ಲ' ಎಂದರು.`ಬಿಜೆಪಿಯ ಮೊದಲ ಪಟ್ಟಿಯನ್ನು ಇದೇ 5ರಂದು ಅಂತಿಮಗೊಳಿಸಲಾಗುವುದು. ಎರಡನೇ ಪಟ್ಟಿ 8ರಂದು ಪ್ರಕಟವಾಗಲಿದೆ. ಪಕ್ಷದ ಪರ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರಲಿದ್ದಾರೆ' ಎಂದರು.ಬೆಳಗಾವಿ ಭಾಗದವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಭಾಕರ ಕೋರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, `ಅದು ಅವರ ವೈಯಕ್ತಿಕ ಅಭಿಪ್ರಾಯ. ಬೆಳಗಾವಿ ಭಾಗದಿಂದ 18 ಮಂದಿ ಶಾಸಕರಿದ್ದಾರೆ. ಅಲ್ಲಿನವರು ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪಿಲ್ಲ' ಎಂದರು.ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ಮನೆಗೆ ಬಂದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅಲ್ಲಿ ಶೆಟ್ಟರ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರೊಂದಿಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕೆಲಹೊತ್ತು ಮಾತುಕತೆ ನಡೆಸಿದರು. ನಂತರ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಬಾಗಲಕೋಟೆಗೆ ತೆರಳಿದರು.

ಪ್ರತಿಕ್ರಿಯಿಸಿ (+)