ಕಾಂಗ್ರೆಸ್‌ನಲ್ಲಿ ಅಪಸ್ವರ, ಇತರೆ ಪಕ್ಷಗಳಲ್ಲಿ ಮೌನ

7
ಬೀದರ್ ಲೋಕಸಭೆ ಚುನಾವಣೆ: ಬಿಸಿ ಬಿಸಿ ಚರ್ಚೆ ಆರಂಭ

ಕಾಂಗ್ರೆಸ್‌ನಲ್ಲಿ ಅಪಸ್ವರ, ಇತರೆ ಪಕ್ಷಗಳಲ್ಲಿ ಮೌನ

Published:
Updated:

ಬೀದರ್: ಲೋಕಸಭೆ ಚುನಾವಣೆ ಇನ್ನೂ ಗಾವುದ ದೂರ ಇದ್ದರು ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿ ಯಾರು ಎಂಬುದು ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಸಂಸದ ಧರ್ಮ­ಸಿಂಗ್ ವಿರುದ್ಧ ಯಾರು ಎಂಬುದು ಪ್ರಶ್ನಾರ್ಥಕ ಚಿಹ್ನೆ ಆಗಿದ್ದರೂ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದೊಳಗೆ ಸಂಸದರ ವಿರುದ್ದ ಅಪಸ್ವರ ಕೇಳಿಬರುತ್ತಿದೆ.‘ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ನಾನೇ ಅಭ್ಯರ್ಥಿ’ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಧರ್ಮ­ಸಿಂಗ್ ಅವರು ಈಚೆಗೆ ಪಕ್ಷದ ಕಚೇರಿಯಲ್ಲಿ ಸ್ವತಃ ಘೋಷಿಸಿಕೊಂಡ ಹಿಂದೆಯೇ, ‘ಬೀದರ್ ಕ್ಷೇತ್ರದಿಂದ ಈ ಬಾರಿ ಸ್ಥಳೀಯರಿಗೇ ಟಿಕೆಟ್್ ಕೊಡಬೇಕು. ಹೊರಗಿನವರು ಬೇಡ’ ಎಂಬ ಮಾತುಗಳೂ ಕೇಳಿಬರುತ್ತಿವೆ.ಲೋಕಸಭಾ ಅಭ್ಯರ್ಥಿ ಆಯ್ಕೆಗೆ ಪೂರಕವಾಗಿ ಅಭಿಪ್ರಾಯ ಸಂಗ್ರಹಿಸಲು ಜಿಲ್ಲೆಗೆ ಆಗಮಿಸಿದ್ದ ವೀಕ್ಷಕರ ಎದುರು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಜಿಲ್ಲಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ ಮತ್ತು ಮಾಜಿ ಶಾಸಕ ಮಹಮ್ಮದ್ ಲೈಕೋದ್ದೀನ್ ಅವರು ನಾನೂ ಕೂಡಾ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ.ಧರ್ಮಸಿಂಗ್ ಅವರು ಸ್ಥಳೀಯರಲ್ಲ. ನೆರೆಯ ಜಿಲ್ಲೆಯವರು. ಸ್ಥಳೀಯವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬೇಗನೇ ಲಭ್ಯರಾಗುವುದಿಲ್ಲ ಎಂಬುದು ಸಂಸದರ ವಿರುದ್ಧ ಕೇಳಿಬರುತ್ತಿರುವ ದೂರು. ವೀಕ್ಷಕರ ಎದುರು ಹೆಚ್ಚಿನವರು ಧರ್ಮ­ಸಿಂಗ್್ ಹೆಸರು ಉಲ್ಲೇಖಿಸಿದ್ದರೂ, ಅವರಿಗೆ ಬೇಡ ಎಂಬ ಆಗ್ರಹವೂ ಕೇಳಿಬಂದಿದೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರಶದ್  ಅಲಿ ಅವರು, ‘ವೀಕ್ಷಕರು ಬಂದು ಹೋಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಟಿಕೆಟ್ ಕೇಳಬಹುದು. ಆದರೆ, ಕೇಳುವಾಗ ತಮ್ಮ ಅರ್ಹತೆ ತಿಳಿಸಬೇಕು. ಮುಖಂಡರ ವಿರುದ್ಧ ಟೀಕೆ ಇರಬಾರದು. ಹೈಕಮಾಂಡ್ ನಿಲುವಿಗೆ ಬದ್ದರಾಗಬೇಕು’ ಎನ್ನುತ್ತಾರೆ.‘ಧರ್ಮಸಿಂಗ್  ಜಿಲ್ಲೆಯಲ್ಲಿ ಇರುವುದಿಲ್ಲ. ಜನರಿಗೆ ಸಿಗುವುದಿಲ್ಲ  ಎಂಬ ಮಾತು ನಿಜ ಇರಬಹುದು. ಆದರೆ ಸಂಸದನಾಗಿ ನೇರ ಜನರ ಜೊತೆಗೆ ಇರುವ ಕೆಲಸ ಕಡಿಮೆ. ಕೇಂದ್ರದ ಯೋಜನೆಗಳನ್ನು ತರುವಲ್ಲಿ ಏನು ಮಾಡಿದ್ದಾರೆ ಎಂಬುದಷ್ಟೇ ಮುಖ್ಯ. ಹೀಗಾಗಿ ಹೊರಗಿನವರು ಎಂಬ ವಾದದಲ್ಲಿ ಅರ್ಥವಿಲ್ಲ ಎಂಬುದು ಅವರ ವ್ಯಾಖ್ಯಾನ.ಸಾಧನೆ ಏನು?: ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಂದ ನಿರೀಕ್ಷೆಗಳು ಬಹಳಷ್ಟು ಇದ್ದವಾ­ದರೂ, ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಈ  ಅವಧಿಯಲ್ಲಿ ಗುರುತಿಸಬಲ್ಲದಾದ ಮಹತ್ವದ ಸಾಧನೆ ಬರಲಿಲ್ಲ ಎಂಬ ಆಕ್ಷೇಪಗಳು ಇವೆ.ಜಿಲ್ಲೆಯ ಪರವಾಗಿ ಕೇಂದ್ರ ಸರ್ಕಾರದ ಎದುರು ಅನೇಕ ಪ್ರಸ್ತಾಪಗಳು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇವುಗಳ ಪೈಕಿ ಕೆಲವನ್ನಾದರೂ ಅನುಷ್ಠಾನದ ದಿಕ್ಕಿನಲ್ಲಿ ಪ್ರಗತಿ ಆಗುವಂತೆ ನೋಡಿಕೊಳ್ಳಬೇಕಾಗಿತ್ತು. ಅದೂ ಆಗಲಿಲ್ಲ ಎಂಬುದು ಹೆಸರು ಹೇಳಲು ಇಚ್ಛಿಸದ ಮುಖಂಡರ ಅನಿಸಿಕೆ.ಜಿಲ್ಲೆಯಲ್ಲಿ ಹೆಲಿಕಾಪ್ಟರ್  ಘಟಕದ ಸ್ಥಾಪನೆ, ಮೌಲಾನಾ ಅಜಾದ್್ ಉರ್ದು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು, ಎಫ್್.ಎಂ.­ರೇಡಿಯೋ, ದೂರದರ್ಶನ ಮರು ಪ್ರಸಾರ ಕೇಂದ್ರಕ್ಕೆ ಚಾಲನೆ, ಪ್ರವಾಸೋದ್ಯಮ ಅಭಿವೃದ್ಧಿ, ವನ್ಯಜೀವಿ ರಕ್ಷಣಾ ವಲಯದ ಅಭಿವೃದ್ಧಿ ಈ ಪೈಕಿ ಕೆಲವು.ಈ ಪೈಕಿ ಬಹುತೇಕ ಪ್ರಸ್ತಾಪಗಳು ಪ್ರಗತಿ ಕಾಣುವುದು ಇರಲಿ; ಯಾವ ಹಂತದಲ್ಲಿ ಇದೆ ಎಂಬುದರ ಸ್ಪಷ್ಟತೆಯೂ ಇಲ್ಲ. ಸಂಸದರಾಗಿ ಧರ್ಮಸಿಂಗ್್ ಅವಧಿಯಲ್ಲಿ ಬೀದರ್–ಹೈದ­ರಾಬಾದ್ ನಡುವಣ  ಇಂಟರ್ಸಿ ಸಿಟಿ ರೈಲು, ಬೀದರ್– ಬೆಂಗಳೂರು ನೇರ ರೈಲು ಸೇವೆ ಆರಂಭವಾಯಿತು ಎನ್ನು­ವುದು ಗೋಚರವಾಗುವ ಸಾಧನೆ. ಈ ಪೈಕಿ ಬೆಂಗಳೂರು –-- ಬೀದರ್್ ನಡುವಣ ರೈಲು ಸಂಪರ್ಕದ ಶ್ರೇಯ ಧರ್ಮಸಿಂಗ್ ಅವರಿಗಿಂತಲೂ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ.ಈ ಎಲ್ಲದರ ನಡುವೆಯೂ ಧರ್ಮಸಿಂಗ್ ಹೊರಗಿನವರು ಎಂಬ ಆಕ್ಷೇಪವಿದ್ದರೂ ಪ್ರಸ್ತುತ ಸಂದರ್ಭಕ್ಕೆ ಧರ್ಮಸಿಂಗ್ ಅವರ ಹೆಸರೇ ಮಂಚೂಣಿಯಲ್ಲಿ ಇದೆ ಎಂಬುದು ಪಕ್ಷದ ಒಂದು ಮೂಲದ ಅಭಿಪ್ರಾಯ.ಕೇಂದ್ರದಲ್ಲಿ ತೃತೀಯ ಬಾರಿಗೆ ಯುಪಿಎ ಅಧಿಕಾರಕ್ಕೆ ತರಲು ಕಾಂಗ್ರೆಸ್ ಯತ್ನಿಸುತ್ತಿರುವ ಸಂದರ್ಭದಲ್ಲಿ ಒಂದೊಂದು ಸ್ಥಾನವು ಮಹತ್ವದ್ದೇ ಆಗಿರುತ್ತದೆ. ಇಂಥ ಸ್ಥಿತಿಯಲ್ಲಿ ಸ್ಥಳೀಯ­ವಾಗಿ ಎದ್ದಿರುವ ವಿರೋಧದ ಅಲೆಗೆ ಮಾನ್ಯತೆ ನೀಡಿ ಹೊಸ ಅಭ್ಯರ್ಥಿಗೆ ಮಣೆ ಹಾಕುವ ಸಾಹಸವನ್ನು ಪಕ್ಷ ಮಾಡುತ್ತದಾ ಎಂಬುದು ಈಗಿನ ಪ್ರಶ್ನೆ.ಇನ್ನೊಂದೆಡೆ, ಕಾಂಗ್ರೆಸ್ಸೇತರ ಪಕ್ಷಗಳು ಈಗ ಅಭ್ಯರ್ಥಿ ಆಯ್ಕೆಗೂ ಮಿಗಿಲಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿವೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಆಗಿ ಆಯ್ಕೆ ಮಾಡಿರುವ ಬಿಜೆಪಿ, ಜಿಲ್ಲೆಯ ಮಟ್ಟಿಗೆ ಇನ್ನೂ ಗ್ರಾಮ ಮಟ್ಟದಿಂದ ಪಕ್ಷ ಬಲಪಡಿಸುವ ಮಾತು ಆಡುತ್ತಿದೆ.ಈ ಕುರಿತ ಪ್ರಶ್ನೆಗೆ ಶಾಸಕ ರಘುನಾಥರಾವ್್ ಮಲ್ಕಾಪುರೆ ಅವರ ಒಂದು ಸಾಲಿನ ಉತ್ತರ: ‘ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ಇನ್ನೂ ಚಾಲನೆ ನೀಡಿಲ್ಲ’. ಅತ್ತ ಜೆಡಿಎಸ್್ ಪಕ್ಷದಿಂದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅಭ್ಯರ್ಥಿ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅವರನ್ನು ಸಂಪರ್ಕಿ­ಸಿದಾಗ, ‘ಅನೇಕ ಆತ್ಮೀಯರು ಒತ್ತಾಯ ಹೇರುತ್ತಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ’ ಎನ್ನುತ್ತಾರೆ.ಈ ಎಲ್ಲದರ ನಡುವೆ, ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ಬಿಜೆಪಿಯ ಹಿನ್ನಡೆಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಕರ್ನಾಟಕ ಜನತಾ ಪಕ್ಷದ, ಮುಖ್ಯವಾಗಿ ಆ ಪಕ್ಷದ ಮುಖಂ­ಡ, ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಲುವು ಏನು ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry