ಸೋಮವಾರ, ನವೆಂಬರ್ 18, 2019
23 °C

ಕಾಂಗ್ರೆಸ್‌ನಲ್ಲಿ ಇನ್ನೂ ಮೂಡದ ಒಮ್ಮತ

Published:
Updated:

ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರವೂ ಪ್ರಕಟವಾಗಲಿಲ್ಲ. ವಿದೇಶಕ್ಕೆ ಹೋಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಗೆ ಮರಳಿದ ಬಳಿಕ ಕಗ್ಗಂಟಾಗಿರುವ 47 ಕ್ಷೇತ್ರಗಳ ಪಟ್ಟಿ ಬಿಡುಗಡೆ ಆಗಲಿದೆ. ಅಂತಿಮ ಪಟ್ಟಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದ ಆಕಾಂಕ್ಷಿಗಳ ಮುಖದ ಮೇಲೆ ನಿರಾಶಾಭಾವ ಮೂಡಿದೆ.ಸೋನಿಯಾ ಜತೆ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶದಿಂದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಬೆಳಿಗ್ಗೆ ಇಲ್ಲಿಗೆ ಬಂದಿದ್ದರು.ಈ ಮಧ್ಯೆ, ಬಳ್ಳಾರಿ ಸಾಮಾನ್ಯ ಕ್ಷೇತ್ರ ಒಳಗೊಂಡಂತೆ ಕಗ್ಗಂಟಾಗಿರುವ ಕೆಲವು ಕ್ಷೇತ್ರಗಳ ಆಕಾಂಕ್ಷಿಗಳನ್ನು ಕೂರಿಸಿಕೊಂಡು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಆರಂಭಿಸಿದೆ.ಗಾಂಧಿ ಕುಟುಂಬಕ್ಕೆ ಆತ್ಮೀಯರಾದ `ಕೇಂದ್ರ ಚುನಾವಣಾ ಸಮಿತಿ' ಸದಸ್ಯ ಆಸ್ಕರ್ ಫರ್ನಾಂಡಿಸ್ ಕೆಲವು ಅಭ್ಯರ್ಥಿಗಳ ಜತೆ ಖುದ್ದು ಮಾತುಕತೆ ನಡೆಸುತ್ತಿದ್ದಾರೆ.ಬಳ್ಳಾರಿ ಸಾಮಾನ್ಯ ಕ್ಷೇತ್ರದ ಆಕಾಂಕ್ಷಿಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಕೆ.ಸಿ. ಕೊಂಡಯ್ಯ, ದಿವಾಕರ ಬಾಬು, ಪಂಪಾಪತಿ ಮತ್ತಿತರರ ಜತೆ ಬೆಂಗಳೂರು ರಾಜಾಜಿನಗರದಿಂದ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದ ಅಲ್ಲಂ ವೀರಭದ್ರಪ್ಪನವರ ಹೆಸರೂ ಆಕಾಂಕ್ಷಿಗಳ ಸಾಲಿಗೆ ಸೇರಿದೆ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಸೇರಿದ್ದ ಸಭೆಯಲ್ಲಿ ಲಾಡ್ ಹಾಗೂ ಪಂಪಾಪತಿ ನಡುವೆ ಮಾತಿನ ಚಕಮಕಿಯೂ ನಡೆಯಿತು ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.`ಗಣಿ ಉದ್ಯಮಿಗಳಿಗೆ ಟಿಕೆಟ್ ಕೊಡಬಾರದು' ಎಂದು ಪಂಪಾಪತಿ ಆಗ್ರಹಪಡಿಸಿದರು. ಇದರಿಂದ ಸಿಟ್ಟಿಗೆದ್ದ ಲಾಡ್, ಪಂಪಾಪತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳ್ಳಾರಿ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪುನರ್ ಪರಿಶೀಲಿಸುವಂತೆ ಅನಿಲ್ ಲಾಡ್ ಒತ್ತಡ ಹೇರುತ್ತಿದ್ದಾರೆ. ಈಗ ಟಿಕೆಟ್ ಕೊಟ್ಟಿರುವ ಅಭ್ಯರ್ಥಿಗಳು ಗೆಲ್ಲುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ಅವರು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಅವರೂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪರ್ಧಿಸಿರುವ ಹುಬ್ಬಳ್ಳಿ ಸೆಂಟ್ರಲ್‌ನಿಂದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅವರನ್ನು ಕಣಕ್ಕಿಳಿಸುವ ಉದ್ದೇಶ ಹೈಕಮಾಂಡ್‌ಗಿದೆ. ಎಚ್.ಕೆ.ಪಾಟೀಲರ ಆತ್ಮೀಯ ವಲಯದಲ್ಲಿ ಹಿಂಡಸಗೇರಿ ಅವರಿದ್ದು, ಸ್ಪರ್ಧೆಗೆ ಮನವೊಲಿಸುವ ಹೊಣೆಯನ್ನು ಅವರಿಗೇ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)