ಕಾಂಗ್ರೆಸ್‌ನಲ್ಲಿ ಜಾತಿ ಕಿತ್ತಾಟ: ಈಶ್ವರಪ್ಪ

7

ಕಾಂಗ್ರೆಸ್‌ನಲ್ಲಿ ಜಾತಿ ಕಿತ್ತಾಟ: ಈಶ್ವರಪ್ಪ

Published:
Updated:

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಪರ ಶಾಮನೂರು ಶಿವಶಂಕರಪ್ಪ ಹಾಗೂ ದಲಿತರ ಪರ ಜಿ.ಪರಮೇಶ್ವರ್ ಗುಂಪುಗಾರಿಕೆ ನಡೆಸಿ ರಾಜ್ಯವನ್ನು ಜಾತಿ ಆಧಾರದಲ್ಲಿ ಒಡೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಪಕ್ಷದ ಯುವಮೋರ್ಚಾ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಜಾತಿವಾದ ಹಾಗೂ ಒಳಜಗಳಗಳಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ರಾಜ್ಯದ ಬಗ್ಗೆ ಕೇಂದ್ರದ ಯುಪಿಎ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾವೇರಿ ವಿವಾದದ ಕುರಿತು ಚರ್ಚಿಸಲು ಪ್ರಧಾನಿ ಬಳಿಗೆ ತೆರಳಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಭೇಟಿ ನಿರಾಕರಿಸಿದ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ವರ್ತನೆಯೇ ಇದಕ್ಕೆ ಸಾಕ್ಷಿ ಎಂದರು. ಕೇಂದ್ರದಲ್ಲಿ ಯುಪಿಎ ದುರಾಡಳಿತವನ್ನು ತೊಲಗಿಸಲು ತುರ್ತು ಪರಿಸ್ಥಿತಿ ಸಂದರ್ಭದ ಮಾದರಿಯ ಮತ್ತೊಂದು ಹೋರಾಟಕ್ಕೆ ರಾಜ್ಯದ ಯುವಜನತೆ ಸಜ್ಜಾಗುವಂತೆ ಕರೆ ನೀಡಿದರು.ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ವಿ.ಸುನೀಲ್‌ಕುಮಾರ್ ಮಾತನಾಡಿ, ನವೆಂಬರ್ 10ರ ವರೆಗೆ ಯುವ ಮೊರ್ಚಾ ವತಿಯಿಂದ ರಾಜ್ಯದ ಎಲ್ಲಾ ವಿಧಾನಸಭೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ `ಕಾಂಗ್ರೆಸ್ ತೊಲಗಿಸಿ, ದೇಶ ಉಳಿಸಿ~ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಮುರುಗೇಶ ನಿರಾಣಿ ಮಾತನಾಡಿದರು.ಚಪ್ಪಲಿ ಸಾಕ್ಷಿ!: ಪತ್ರಕರ್ತರ ಪ್ರಶ್ನೆಯಿಂದ ತಾಳ್ಮೆ ಕಳೆದುಕೊಂಡ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ್ ತಮ್ಮ ಚಪ್ಪಲಿ ಬಿಚ್ಚಿ ಅದರೊಳಗಿನ ಹೊಲಿಗೆಗಳನ್ನು ತೋರಿಸಿದ ಘಟನೆ ಸಮಾವೇಶದ ವೇಳೆ ನಡೆಯಿತು.`ಸಂಘದ ಸಂಸ್ಕಾರದಿಂದ ಬಂದ ಸಂತೋಷ್ ವಿಲಾಸಿ ಜೀವನ ನಡೆಸುತ್ತ್ದ್ದಿದಾರೆ~ ಎಂದು ವಿ.ಧನಂಜಯ ಕುಮಾರ್ ಮಾಡಿದ್ದ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, `ಆ ಬಗ್ಗೆ ನಾನು ಉತ್ತರಿಸುವುದಿಲ್ಲ. ಪಕ್ಷದ ವಕ್ತಾರರನ್ನು ಕೇಳಿ~ ಎಂದರು. `ವ್ಯಕ್ತಿಗತವಾಗಿ ನಿಮ್ಮ ಮೇಲೆ ಆರೋಪ ಬಂದಿದ್ದು, ನೀವೇ ಉತ್ತರಿಸಿ~ ಎಂದು ಪತ್ರಕರ್ತರು ಕೇಳಿದಾಗ, ಕೂಡಲೇ ಚಪ್ಪಲಿ ಕಳಚಿ ನಿಂತ ಸಂತೋಷ್ ಅದರೊಳಗಿನ 12 ಹೊಲಿಗೆಗಳನ್ನು ತೋರಿಸಿ, ತಾವು ಇಷ್ಟು ಸರಳ ಜೀವನ ನಡೆಸುತ್ತಿರುವುದಾಗಿ ಹೇಳಿದರು.

 

ದನಿಯಿಲ್ಲದ ರಣಕಹಳೆ

ಸಮಾವೇಶದ ಉದ್ಘಾಟನೆ ದ್ಯೋತಕವಾಗಿ ಧರ್ಮೇಂದ್ರ ಪ್ರಧಾನ್, ಈಶ್ವರಪ್ಪ, ಜಗದೀಶ ಶೆಟ್ಟರ್ ರಣ ಕಹಳೆ ಊದಿದರಾದರೂ ಅದರಿಂದ ಧ್ವನಿ ಹೊರಡದೇ ಮುಜುಗರಕ್ಕೀಡಾದರು. ಕೊನೆಗೆ ವೃತ್ತಿಪರ ಕಹಳೆ ಊದುವವರ ಸಹಾಯ ಪಡೆಯಲಾಯಿತು.ನರೇಂದ್ರ ಮೋದಿ ದೇಶದ ಮುಂದಿನ ಪ್ರಧಾನಿಯಾಗಲು ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಸಮಾವೇಶದಲ್ಲಿ ಸಚಿವ ಸಿ.ಟಿ.ರವಿ ಮನವಿ ಮಾಡಿದರು. ಇಲ್ಲಿ ಬಹುತೇಕ ನಾಯಕರು ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ನೆನಪು ಮಾಡಿಕೊಂಡರು. ಸಮಾವೇಶದಲ್ಲಿ ಎಲ್ಲಿಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಕಂಡು ಬರಲಿಲ್ಲ. ಬದಲಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದರಾದ ಅನಂತ ಕುಮಾರ್, ಪ್ರಹ್ಲಾದ ಜೋಶಿ, ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರ ಭಾವಚಿತ್ರ ರಾರಾಜಿಸಿದವು.ಯಡಿಯೂರಪ್ಪ ಬೆಂಬಲಿಗರು ಗೈರು

ಸಮಾವೇಶಕ್ಕೆ ಬಿಎಸ್‌ವೈ ಬರಲಿಲ್ಲ. ಬೆಂಬಲಿಗ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಉಮೇಶ ಕತ್ತಿ ಹಾಗೂ ಪ್ರಭಾಕರ ಕೋರೆ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಯಡಿಯೂರಪ್ಪ ಅವರ ಬೀಗರಾದ ಕುಂದಗೋಳ ಶಾಸಕ ಎಸ್. ಐ.ಚಿಕ್ಕನಗೌಡ್ರ ಸಮಾವೇಶದಲ್ಲಿ ಸಕ್ರಿಯರಾಗಿದ್ದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೊರತುಪಡಿಸಿ ಪಕ್ಷದ ಯಾವುದೇ ಮುಖಂಡರೂ ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry