ಬುಧವಾರ, ನವೆಂಬರ್ 13, 2019
24 °C
ಚುನಾವಣೆ: ಸ್ಪರ್ಧೆಗಾಗಿ ಪಕ್ಷದ್ಲ್ಲಲೇ ಹಣಾಹಣಿ

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ರಂಪಾಟ

Published:
Updated:

ನವದೆಹಲಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲರಾದವರು ಕಣ್ಣೀರಿಡುವುದು, ನಾಯಕರಿಗೆ ಹಿಡಿಶಾಪ ಹಾಕುವುದು, ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಕೆಲವು ದಿನಗಳಿಂದ ಸಾಮಾನ್ಯವಾಗಿದೆ.ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಳೆದು ತೂಗಿ ಅಂಕಿತ ಹಾಕಿರುವ ರಾಜ್ಯದ ಬಹುತೇಕ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟಣೆಗೆ ಸಿದ್ಧತೆ ನಡೆದಿರುವಾಗಲೇ, ಟಿಕೆಟ್ ದೊರೆಯದೆ ಹತಾಶರಾದ ಅನೇಕರು ಅತ್ತು, ಕರೆದು ರಂಪ ಮಾಡುತ್ತಿದ್ದಾರೆ.ಕಾಂಗ್ರೆಸ್ ಮುಖಂಡರಾದ ವಿ.ಎಸ್.ಉಗ್ರಪ್ಪ ಚಳ್ಳಕರೆಯಿಂದ ಅರ್ಜಿ ಹಾಕಿದ್ದಾರೆ. ಇವರಿಗೆ ಟಿಕೆಟ್ ಸಿಗುವುದು ಅನುಮಾನ. ಪರಿಷತ್ ಸದಸ್ಯರಾಗಿ, ಪಕ್ಷದ ವಕ್ತಾರರಾಗಿ ದುಡಿದಿರುವ ಉಗ್ರಪ್ಪ ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಅಸಮಾಧಾನಗೊಂಡಿದ್ದಾರೆಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ. ಈ ಕ್ಷೇತ್ರದಲ್ಲಿ ರಘುಮೂರ್ತಿ ಅವರನ್ನು ಕಣಕ್ಕಿಳಿಸುವ ಸಂಭವವಿದೆ.ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಕುರಿತು ವಿಚಾರಣೆ ನಡೆಸಿದ್ದ ವಿ.ಆರ್.ಸುದರ್ಶನ್ ಜಯನಗರದಿಂದ ಕಣಕ್ಕಿಳಿಯಲು ಯತ್ನಿಸಿ ಸೋತಿದ್ದಾರೆ. ಪರಿಷತ್ ಚುನಾವಣೆಗೆ ಟಿಕೆಟ್ ಕೇಳಿದ್ದ ಸುದರ್ಶನ್‌ಗೆ ವಿಧಾನಸಭೆಗೆ ಸ್ಪರ್ಧಿಸುವಂತೆ ಪಕ್ಷ ಹೇಳಿತ್ತು ಎನ್ನಲಾಗಿದೆ. ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿಖಾನ್ ಇದೇ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, ವೇಣುಗೋಪಾಲ್ ಅವರಿಗೆ ಟಿಕೆಟ್ ಬಹುತೇಕ ಗ್ಯಾರಂಟಿ.ಮುಖಂಡರಿಗೆ ಅಸಮಾಧಾನ: ರಾಣಿ ಸತೀಶ್, ವಿ.ಎಸ್.ಕೌಜಲಗಿ ಹಾಗೂ ಅಲ್ಲಂ ವೀರಭದ್ರಪ್ಪ ರಾಜಾಜಿ ನಗರದಲ್ಲಿ ಟಿಕೆಟ್ ಕೇಳಿ ನಿರಾಶರಾಗಿದ್ದಾರೆ. ಈ ಕ್ಷೇತ್ರದಲ್ಲಿ ಮಂಜುಳಾ ನಾಯ್ಡು ಹೆಸರು ಅಂತಿಮಗೊಂಡಿದೆ. ಪಕ್ಷದ ಟಿಕೆಟ್ ಹಂಚಿಕೆ ವಿಧಾನದಿಂದ ಹಿರಿಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಹೆಬ್ಬಾಳದಿಂದ ಟಿಕೆಟ್ ಕೇಳಿದ್ದ ಎಚ್.ಎಂ.ರೇವಣ್ಣ ಅವರಿಗೂ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸುವ ಕೊನೆಯ ಗಳಿಗೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ದೆಹಲಿಯಲ್ಲಿ `ಲಾಬಿ' ಮಾಡಿದ್ದರಿಂದ ರೇವಣ್ಣ ಅವರಿಗೆ ಟಿಕೆಟ್ ಅನುಮಾನ. ಇದರಿಂದ ನೊಂದ ರೇವಣ್ಣ ಶರೀಫ್ ಮುಂದೆ ಕಣ್ಣೀರು ಹಾಕಿದ್ದಾರೆನ್ನಲಾಗಿದೆ.ಹೆಬ್ಬಾಳದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಎಲ್.ಶಂಕರ್‌ಗೆ ದಾಸರಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ. ದಾವಣಗೆರೆ ದಕ್ಷಿಣದಿಂದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಮತ್ತು ಉತ್ತರದಿಂದ ಇವರ ಪುತ್ರ ಮಲ್ಲಿಕಾರ್ಜುನ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ, 2008ರ ವಿಧಾನಸಭೆ ಚುನಾವಣೆ `ಬಿ ಫಾರಂ' ಅವಾಂತರದಿಂದ ಶ್ಯಾಮನೂರು ಕುಟುಂಬದ ಮೇಲೆ ಸಿಟ್ಟಾಗಿರುವ ಹೈಕಮಾಂಡ್ ಒಂದು ಕ್ಷೇತ್ರವನ್ನು ಮಾತ್ರ ಈ ಕುಟುಂಬಕ್ಕೆ ನೀಡಲಿದೆಯಂತೆ.ನಿಗೂಢ: ಅಲ್ಪಸಂಖ್ಯಾತರು ಅಧಿಕವಾಗಿರುವ ದಾವಣಗೆರೆ ಉತ್ತರದಲ್ಲಿ ಸಯ್ಯದ್ ಸೈಫುಲ್ಲಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಚನ್ನಗಿರಿಯಿಂದ ಮಾಜಿ ಮುಖ್ಯ ಮಂತ್ರಿ ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್ ಹಾಗೂ ಮಾಜಿ ಶಾಸಕ ವಡ್ನಾಳ್ ರಾಜಣ್ಣ ನಡುವೆ ತೀವ್ರ ಪೈಪೋಟಿ ನಡೆದಿದೆ. ಪರಮೇಶ್ವರ್, ಮಹಿಮಾ  ಪರ ಮತ್ತು ಸಿದ್ದರಾಮಯ್ಯ ವಡ್ನಾಳ್ ರಾಜಣ್ಣ ಪರ ನಿಂತಿದ್ದು, ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ನಿಗೂಢವಾಗಿದೆ.ಪರಮೇಶ್ವರ ಸಿಟ್ಟಿಗೆ ಕೊಂಡಯ್ಯ: ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಅನಿಲ್ ಲಾಡ್, ಕೆ.ಸಿ. ಕೊಂಡಯ್ಯ ಹಾಗೂ ದಿವಾಕರ ಬಾಬು ನಡುವೆ ಹಣಾಹಣಿ ನಡೆದಿದೆ. ಅನಿಲ್ ಲಾಡ್ ರಾಜ್ಯಸಭೆ ಸದಸ್ಯ. ಕೇಂದ್ರ ಕಾರ್ಮಿಕ ಸಚಿವ ಖರ್ಗೆ ಅವರಿಗೆ ಕೊಂಡಯ್ಯ ಅವರಿಗೆ ಆತ್ಮೀಯರು. ಆದರೆ, ಕೊಂಡಯ್ಯ ಅನೇಕ ಸಂದರ್ಭಗಳಲ್ಲಿ ಪರಮೇಶ್ವರ್ ವಿರುದ್ಧ ಟೀಕೆ ಮಾಡಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಬೇಕೆಂದು ಆಗ್ರಹಿಸಲು ಹೈಕಮಾಂಡ್ ಬಳಿಗೆ ತೆರಳಿದ್ದ ನಿಯೋಗದಲ್ಲಿ ಕೊಂಡಯ್ಯ ಸಕ್ರಿಯರಾಗಿದ್ದರು. ಇದರಿಂದ ಪರಮೇಶ್ವರ್ ಸಿಟ್ಟಿಗೆ ಗುರಿಯಾಗಿದ್ದಾರೆ.ಅಂಬರೀಷ್ ಅವರಿಗೆ ಮಂಡ್ಯ, ರುದ್ರೇಶಗೌಡ ಅವರಿಗೆ ಬೇಲೂರಿನಿಂದ ಟಿಕೆಟ್ ನೀಡಲು ಪಕ್ಷ ಆಲೋಚಿಸಿದೆ. ಮಡಿಕೇರಿಯಲ್ಲಿ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷದ ಅಭ್ಯರ್ಥಿ ಸೋಲಿಸುವುದಾಗಿ ಈಚೆಗೆ ಆಸ್ಕರ್ ಅವರಿಗೆ ಬೆದರಿಕೆ ಹಾಕಿದ ಅರುಣ ಮಾಚಯ್ಯನವರ `ಬ್ಲಾಕ್ ಮೇಲ್' ತಂತ್ರಕ್ಕೆ ಮಣಿಯದಿರಲು ಪಕ್ಷ ತೀರ್ಮಾನಿಸಿದೆ. ಇಲ್ಲಿಂದ ವೀಣಾ ಅಚ್ಚಯ್ಯ ಪ್ರಬಲ ಆಕಾಂಕ್ಷಿ ಆಗಿದ್ದಾರೆ.ಅರಕಲಗೂಡು ಹಾಲಿ ಶಾಸಕ ಎ. ಮಂಜು ಅವರಿಗೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವುದು ಹೆಚ್ಚುಕಡಿಮೆ ಖಚಿತವಾಗಿದೆ. ಈ ಕ್ಷೇತ್ರದಿಂದ ನಿವೃತ್ತ ಅಧಿಕಾರಿ ಪುಟ್ಟಸ್ವಾಮಿ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ. ನಾಗಮಂಗಲದಿಂದ ಹಾಲಿ ಶಾಸಕ ಸುರೇಶ್‌ಗೌಡ ಅವರಿಗೆ ಟಿಕೆಟ್ ಸಿಗಲಿದೆ. ಬೆಂಗಳೂರಿನ ಮಹಾದೇವ ಪುರದಿಂದ ಎ.ಎಸ್. ಶ್ರೀನಿವಾಸ್ ಹೆಸರಿದೆ. ಆದರೆ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ಕುಮಾರ್ ಮನೋಳಿ ಪ್ರಯತ್ನ ನಡೆಸಿದ್ದಾರೆ.ಚಿಕ್ಕಬಳ್ಳಾಪುರದಿಂದ ಡಾ. ಸುಧಾಕರ, ಶಿವಮೊಗ್ಗ ನಗರದಿಂದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಹೆಸರು ಪ್ರಬಲವಾಗಿವೆ. ಕೇಂದ್ರ ಸಚಿವರ ಮಕ್ಕಳ ಟಿಕೆಟ್ ಗೊಂದಲ ಇನ್ನೂ ಪರಿಹಾರ ಕಂಡಿಲ್ಲ. ಒಟ್ಟಾರೆ ಸುಮಾರು 24 ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಂಬಂಧ ಬಿಕ್ಕಟ್ಟು ತಲೆದೋರಿದ್ದು ಸೋನಿಯಾ ಸ್ವದೇಶಕ್ಕೆ ಮರಳಿದ ಬಳಿಕ ಪರಿಹಾರ ಸಿಗಬಹುದು ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಸೇಡಿನ ರಾಜಕಾರಣ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಆರೋಪ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)