ಬುಧವಾರ, ಜನವರಿ 29, 2020
26 °C

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಲಾಬಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣ­ಕ್ಕಿಳಿಯಲು ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂದು ಸಚಿವ­ರಾದ ಟಿ.ಬಿ. ಜಯಚಂದ್ರ, ಶಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆ, ರಾಜ­­ಸ್ತಾನ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಲಾಬಿ ನಡೆಸುತ್ತಿದ್ದಾರೆ.ಮುಖಂಡರಾದ ಸಿ.ಕೆ. ಜಾಫರ್‌ ಷರೀಫ್‌, ಬಿ.ಕೆ. ಹರಿ­ಪ್ರಸಾದ್‌, ಎಚ್‌.ಟಿ. ಸಾಂಗ್ಲಿ­ಯಾನ, ಮಂಜುನಾಥ ಕುನ್ನೂರ, ಪ್ರೇಮಾ ಕಾರಿಯಪ್ಪ, ಕುಮಾರ್‌ ಬಂಗಾರಪ್ಪ ಅವರು ತಮಗೆ ಟಿಕೆಟ್‌ ಖಾತ್ರಿಪಡಿಸಿಕೊಳ್ಳಲು ಯತ್ನ ನಡೆಸಿದ್ದಾರೆ. ಷರೀಫ್‌, ಸಾಂಗ್ಲಿ­ಯಾನ, ಕಾರಿಯಪ್ಪ, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿ­ದ್ದಾರೆ. ಹರಿಪ್ರಸಾದ್‌, ಜಿ.ಸಿ. ಚಂದ್ರಶೇಖರ್‌ ಮತ್ತು ರಮೇಶ್‌ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಬಯಸಿದ್ದಾರೆ.‘ಆಧಾರ್‌’ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ರಾಜ್ಯದ ಮುಖಂಡರು ಇದಕ್ಕೆ ಸಮ್ಮತಿ ಸೂಚಿಸು­ತ್ತಿಲ್ಲ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿಯ ಅನಂತ ಕುಮಾರ್‌ ಅವರನ್ನು ಎದುರಿಸುವುದು ನಿಲೇಕಣಿ ಅವರಿಗೆ ಕಷ್ಟ ಎಂದು ಅವರು ವಾದಿಸುತ್ತಿದ್ದಾರೆ. ಆರ್‌.ವಿ. ದೇಶಪಾಂಡೆ ಪುತ್ರ ಪ್ರಶಾಂತ್‌ ದೇಶಪಾಂಡೆ, ಮಾರ್ಗರೇಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್‌ ಖಚಿತ ಎನ್ನಲಾಗಿದೆ.ಆದರೆ ಅನಾ­ರೋಗ್ಯದ ಕಾರಣದಿಂದ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಎನ್‌. ಧರ್ಮಸಿಂಗ್‌ ಅವರು ಮುಂದಾಗ­ಲಾರರು ಎನ್ನಲಾಗಿದೆ. ಜಯಚಂದ್ರ ಪುತ್ರ ಸಂತೋಷ್‌ ಅವರು ತುಮಕೂರು ಕ್ಷೇತ್ರ­ದಿಂದ ಮತ್ತು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿ­ಕಾರ್ಜುನ ಅವರು ದಾವಣ­ಗೆರೆ ಕ್ಷೇತ್ರದಿಂದ ಟಿಕೆಟ್‌ ಪಡೆಯುವ ಇಚ್ಛೆ ಹೊಂದಿ­ದ್ದಾರೆ. ಕುಮಾರ್‌ ಬಂಗಾರಪ್ಪ ಅವ­ರಿಗೆ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಬಯಕೆ ಇದೆ ಎಂದು ಗೊತ್ತಾಗಿದೆ.ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎ.ಪಿ.ಬಸವರಾಜ್ ಅವರು ಹಾಸನ ಕ್ಷೇತ್ರದ ಟಿಕೆಟ್‌ ಪಡೆಯಲು ಲಾಬಿ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)