ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಲು ಕಸರತ್ತು!

7

ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಲು ಕಸರತ್ತು!

Published:
Updated:

ಬಂಗಾರಪೇಟೆ: ತಾಲ್ಲೂಕಿನಲ್ಲಿ ತೆರವಾಗಿರುವ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳ ಇನ್ನಿಲ್ಲದ ಕಸರತ್ತು ನಡೆದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಪಟ್ಟಣಕ್ಕೆ ಭೇಟಿ ನೀಡಿರುವ ಬೆನ್ನಿಗೇ ಈ ಕಸರತ್ತು ಬಿರುಸು ಪಡೆದಿದೆ. ಪ್ರತಿಯೊಬ್ಬ ಆಕಾಂಕ್ಷಿಯೂ ಟಿಕೆಟ್‌ಗಾಗಿ ಈಗಾಗಲೇ ಪ್ರಭಾವ ಬೀರಲು ಪ್ರಯತ್ನ ನಡೆಸಿದ್ದಾರೆ.ವಿಧಾನಸಭಾ ಕ್ಷೇತ್ರದಲ್ಲಿ ಈವರೆವಿಗೂ ಆಯ್ಕೆಯಾದ ಬಹುತೇಕ ಎಲ್ಲಾ ಕಾಂಗ್ರೆಸ್ ಶಾಸಕರು ಭೋವಿ ಜಾತಿಗೆ ಸೇರಿದವರು. ಅದಕ್ಕೆ ಅಪವಾದ ಎಂಬಂತೆ ಒಂದು ಬಾರಿ ಮಾತ್ರ ಆದಿ ಕರ್ನಾಟಕ ಜನಾಂಗದ ಬಿಜೆಪಿ ಅಭ್ಯರ್ಥಿ ಬಿ.ಪಿ.ವೆಂಕಟಮುನಿಯಪ್ಪ ಗೆದ್ದಿದ್ದಾರೆ. ಹೀಗಾಗಿ ಭೋವಿ ಜನಾಂಗದವರಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ಸಾಧ್ಯ ಎಂಬ ಪ್ರಚಾರವೂ ನಡೆದಿದೆ.  ಆದರೆ ಕಾಂಗ್ರೆಸ್ ಭದ್ರ ಕೋಟೆಯೇ ಆಗಿದ್ದ ತಾಲ್ಲೂಕಿನಲ್ಲಿ ಈ ಬಾರಿ ನಡೆದ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದೆ. ಆದರೆ ತಾಲ್ಲೂಕಿನ 7 ಜಿ.ಪಂ.ಕ್ಷೇತ್ರಗಳ ಪೈಕಿ ಬೇತಮಂಗಲ, ಬೂದಿಕೋಟೆ, ಪಾರಾಂಡಹಳ್ಳಿ ಕಾಂಗ್ರೆಸ್ ಪರವಾಗಿದೆ. ಹಾಗೆಯೇ ದೊಡ್ಡೂರು ಕರಪನಹಳ್ಳಿ, ಕಾಮಸಮುದ್ರ, ಕ್ಯಾಸಂಬಳ್ಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಗಳಿಸಿದೆ. ಪಕ್ಷದ ಆಂತರಿಕ ರಾಜಕಾರಣ ಈ ಸ್ಥಾನಗಳಲ್ಲಿ ಪಕ್ಷ ಮುಳುವಾಗಲು ಕಾರಣವಾಗಿದೆ ಎಂಬ ಗಂಭೀರ ಆರೋಪವೂ ಇದೆ. ಹೀಗಾಗಿ ಈ ಬಾರಿ ಬಂಗಾರಪೇಟೆ ಕ್ಷೇತ್ರದಲ್ಲಿ ಗೆಲ್ಲುವುದೇ ಜಿಲ್ಲೆ, ತಾಲ್ಲೂಕು ಮುಖಂಡರ ಉಳಿವು ಗೆಲುವಿನ ಪ್ರಶ್ನೆಯಾಗಿದೆ. ಹೀಗಾಗಿ ಸಮರ್ಥ ಅಭ್ಯರ್ಥಿಗಾಗಿ ಡಾ.ಪರಮೇಶ್ವರ್ ತೀವ್ರ ಶೋಧನೆ ನಡೆಸಿದ್ದಾರೆ.ಈವರೆಗಿನ ವಿಧಾನಸಭೆ ಚುನಾವಣೆಗಳಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ.ನಾರಾಯಣಸ್ವಾಮಿ, ಜಿ.ಪಂ.ಸದಸ್ಯ ರಾಮಚಂದ್ರ, ಜೆ.ಸಿ.ಬಿ.ನಾರಾಯಣಪ್ಪ, ಮಾಜಿ ಶಾಸಕ ಸಿ.ವೆಂಕಟೇಶಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ನೀಡಿದ್ದರು. ರಾಮಚಂದ್ರ ಎರಡು ಬಾರಿ ಸ್ಪರ್ಧಿಸಿ ಆಂತರಿಕ ರಾಜಕಾರಣಕ್ಕೆ ಬಲಿಯಾಗಿ ಅಂಚಿನಲ್ಲಿ ಪರಾಜಿತರಾದರು. ವೆಂಕಟೇಶಪ್ಪ ಒಮ್ಮೆ ಪಕ್ಷೇತರರಾಗಿ, ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಒಮ್ಮೆ 75 ಸಾವಿರ ಮತಗಳಿಸಿ ದಾಖಲೆಯೂ ನಿರ್ಮಿಸಿದ್ದರು. ಆದರೆ ಅವರ ಓತಪ್ರೋತ ಮಾತುಗಾರಿಕೆಯೇ ಅವರಿಗೆ ಮುಳುವಾಯಿತು. ಹೀಗಾಗಿ ಬೇರೆ ಪಕ್ಷದಿಂದ ಸೇರ್ಪಡೆಯಾದ ಎಂ.ನಾರಾಯಣಸ್ವಾಮಿಗೆ ಅವಕಾಶ ಸಿಕ್ಕಿತು. ಅವರೂ ಪಕ್ಷಕ್ಕೆ ಕೈಕೊಟ್ಟು ಬಿಜೆಪಿಗೆ ಸೇರ್ಪಡೆಯಾದ ಪರಿಣಾಮ ಇದೀಗ ಮರುಚುನಾವಣೆ ಎದುರಾಗಿದೆ. ಅವರ ನಿರ್ಗಮನದಿಂದ ಉಳಿದ ಆಕಾಂಕ್ಷಿಗಳ ಕನಸುಗಳು ಮತ್ತೆ ಗರಿಗೆದರಿವೆ.ಕ್ಷೇತ್ರದಲ್ಲಿ ಪ್ರಸ್ತುತ ಕೆ.ಎಂ.ನಾರಾಯಣಸ್ವಾಮಿ, ರಾಮಚಂದ್ರರ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ. ನಾರಾಯಣಸ್ವಾಮಿ ಅಂತರರಾಜ್ಯ, ರಾಷ್ಟ್ರ ಮಟ್ಟದ ಪ್ರಮುಖ ರಾಜಕಾರಣಿಗಳ ಸಖ್ಯ ಹೊಂದಿದ್ದಾರೆ. ಖ್ಯಾತಿಯ ಜೊತೆ ಹಣಬಲವೂ ಇರುವ ಅವರ ಹೆಸರನ್ನು ಸೂಚಿಸುವ ಬಹಳಷ್ಟು ನಾಯಕರೂ ಕ್ಷೇತ್ರದಲ್ಲಿದ್ದಾರೆ. ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಅಧ್ಯಕ್ಷರಾದ ಶಂಶುದ್ದೀನ್‌ಬಾಬು, ಪಾರ್ಥಸಾರಥಿ, ಕಿಶೋರ್‌ಕುಮಾರ್, ಕ್ಷೇತ್ರದ ಸಾಕಷ್ಟು ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ಹಾಲಿ, ಮಾಜಿ ಅಧ್ಯಕ್ಷ, ಸದಸ್ಯರ ಉತ್ತಮ ಒಡನಾಟವಿದೆ.ಇನ್ನೊಬ್ಬ ಅಭ್ಯರ್ಥಿ ರಾಮಚಂದ್ರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದವರು. ಅವರ ಬೆಂಬಲಿಗರಲ್ಲಿ ಬಹಳಷ್ಟು ಜನ ಗ್ರಾ.ಪಂ., ತಾ.ಪಂ. ಸದಸ್ಯರಾಗಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಜಾತಿ ಮತದಾರರನ್ನು ಹೊಂದಿದ್ದಾರೆ. ಅವರಿಗೆ ಬೆಂಬಲವಾಗಿ ತಾ.ಪಂ.ಮಾಜಿ ಅಧ್ಯಕ್ಷ ಭಾರತಿ ಭೀಮಣ್ಣ, ಜಿ.ಪಂ. ಮಾಜಿ ಸದಸ್ಯ ಮುನಿರಾಜು, ಅಪ್ಪಿರೆಡ್ಡಿ ಬೆಂಬಲವಿದೆ. ಮೇಲಾಗಿ ಅವರು ಕೇಂದ್ರ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಕಟ್ಟಾ ಅನುಯಾಯಿ. ಹೀಗಾಗಿ ಮುನಿಯಪ್ಪ ಕೃಪಾಕಟಾಕ್ಷ ಅವರತ್ತ ಹರಿಯುವ ಸಾಧ್ಯತೆಯೂ ಇದೆ.ಆದರೆ ತಮ್ಮ ಜಾತಿಯವರಿಗೆ ಅವಕಾಶ, ಅಧಿಕಾರ ಕೊಡುವಲ್ಲಿ ಹೆಚ್ಚು ಆಸಕ್ತರಾಗುವ ಆರೋಪ ಹೊತ್ತಿರುವ ಕೆ.ಎಚ್.ಮುನಿಯಪ್ಪ ತಮ್ಮ ಜಾತಿ ಅಭ್ಯರ್ಥಿ ಕೊರತೆ ಇದ್ದಲ್ಲಿ ಆದಿಕರ್ನಾಟಕ ಅಭ್ಯರ್ಥಿಗೆ ಅವಕಾಶ ಕಲ್ಪಿಸಿ ತಮಗೇ ಪೈಪೋಟಿ ನಿರ್ಮಿಸಿಕೊಳ್ಳುವ ಬದಲಾಗಿ ಭೋವಿ ಜಾತಿ ಅಭ್ಯರ್ಥಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.ಅದರೊಂದಿಗೆ ಸಿ.ವೆಂಕಟೇಶಪ್ಪ ಅವರತ್ತ ಸಚಿವರಿಗೆ ಒಲವಿದೆ ಎಂಬುದು ಗುರುವಾರ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಅವರ ಭಾಷಣದಲ್ಲಿ ವ್ಯಕ್ತವಾಯಿತು. ಹೀಗಾಗಿ ಯಾರ ಚಿತ್ತ ಎತ್ತ ಹರಿದಿದೆ ಎಂಬುದು ಅಭ್ಯರ್ಥಿ ಆಕಾಂಕ್ಷಿಗಳ ಹಣೆಬರಹ ನಿರ್ಧರಿಸಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry