ಸೋಮವಾರ, ನವೆಂಬರ್ 18, 2019
23 °C

ಕಾಂಗ್ರೆಸ್‌ನಲ್ಲಿ ಮರು ಚಿಂತನೆ

Published:
Updated:

ಇನ್ನೊಂದೇ ವರ್ಷದಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗಾಗಿ ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿರುವುದು ಕುತೂಹಲಕರವಾಗಿದೆ.ರಾಹುಲ್‌ಗಾಂಧಿಯವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿ, ಯುವಜನರ ಕೈಗೆ ಅಧಿಕಾರ ಕೊಡುವ ಪ್ರಕ್ರಿಯೆಗೆ  ಕಾಂಗ್ರೆಸ್ ಚಾಲನೆ ನೀಡಿದಾಗಲೇ ಕಾಂಗ್ರೆಸ್ ಸಂಪೂರ್ಣ ಪರಿವರ್ತನೆಯ ಹಾದಿ ಹಿಡಿದಿರುವ ಸೂಚನೆ ಸಿಕ್ಕಿತ್ತು. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಧರಿಸಿಕೊಂಡಿರುವ ಯುಪಿಎ ಸರ್ಕಾರದಲ್ಲಿ ಒಂಬತ್ತು ವರ್ಷಗಳಿಂದ ಸತತವಾಗಿ ಪ್ರಧಾನಿಯಾಗಿರುವ, ಆರ್ಥಿಕ ತಜ್ಞರೆಂದೂ ಹೆಸರು ಮಾಡಿರುವ ಮನಮೋಹನ ಸಿಂಗ್ ಅವರ ವ್ಯಕ್ತಿತ್ವ ಕುಸಿದಿರುವುದು, ಜಾಗತಿಕ ವಲಯದಲ್ಲಿ ಅವರನ್ನು `ದುರ್ಬಲ ಪ್ರಧಾನಿ' ಎಂದು ಬಿಂಬಿಸಿರುವುದು ಕಾಂಗ್ರೆಸ್ ಪರ್ಯಾಯ ನಾಯಕತ್ವದತ್ತ ಮುಖಹಾಕಲು ಕಾರಣವಾಯಿತು. ಸೂಕ್ತ ಕಾಲಕ್ಕಾಗಿ ಕಾಯುತ್ತಿದ್ದ ರಾಹುಲ್ ಪ್ರವೇಶಕ್ಕೆ ಇದು ಪ್ರಶಸ್ತ ಸಮಯ ಅನ್ನಿಸಿದ್ದೂ ಇದೇ ಕಾರಣಕ್ಕೆ.ರಾಹುಲ್ ಅವರನ್ನು ಮುಂಚೂಣಿಗೆ ತರುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ರಾಹುಲ್ ಬಣ ಸೃಷ್ಟಿಯಾಗಿ ಅವರ ಸುತ್ತ ಒಂದು ಬಳಗವೇ ಬೆಳೆಯುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ದಿಗ್ವಿಜಯಸಿಂಗ್ ಅವರ ಹೇಳಿಕೆಯೇ ಸಾಕ್ಷಿ. ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪ್ರಧಾನಿ ಮನಮೋಹನಸಿಂಗ್ `ಎರಡು ಅಧಿಕಾರ ಕೇಂದ್ರ ವ್ಯವಸ್ಥೆ'ಯಾಗಿದ್ದು, ಇದು ಸರಿದಾರಿಯಲ್ಲಿ ಸಾಗುತ್ತಿಲ್ಲವಾದ ಕಾರಣ ಮುಂದಿನ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದರೆ ರಾಹುಲ್ ನಾಯಕತ್ವ ವಹಿಸಿಕೊಳ್ಳಬೇಕು ಎಂದು ದಿಗ್ವಿಜಯ ಸಿಂಗ್ ಒತ್ತಾಯಿಸಿದ್ದಾರೆ. ಇಂದಿರಾಗಾಂಧಿ, ರಾಜೀವ್‌ಗಾಂಧಿ ಸುತ್ತಲೂ ಇಂತಹ ಭಟ್ಟಂಗಿಗಳಿದ್ದರು ಎನ್ನುವುದು ಕಾಂಗ್ರೆಸ್ ಸಂಸ್ಕೃತಿಯನ್ನು ಅರಿತವರಿಗೆ ಗೊತ್ತೇ ಇದೆ.ಆದರೆ ರಾಹುಲ್‌ಗಾಂಧಿ ಅವರನ್ನು ಮುನ್ನೆಲೆಗೆ ತರುವ ಬಗ್ಗೆ ಕಾಂಗ್ರೆಸ್ ಮರು ಚಿಂತನೆ ನಡೆಸುತ್ತಿದೆ ಎನ್ನುವುದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಮನಮೋಹನಸಿಂಗ್ ಮತ್ತು ಸೋನಿಯಾಗಾಂಧಿ ನಡುವಿನ ಹೊಂದಾಣಿಕೆ ವಿಶಿಷ್ಟವಾದುದು. ಇಂತಹ ಹೊಂದಾಣಿಕೆ ಭವಿಷ್ಯದ ದೃಷ್ಟಿಯಿಂದ  ಆದರ್ಶವಾದ ಹೊಂದಾಣಿಕೆ ಎಂದು ಹೇಳಿರುವ ದ್ವಿವೇದಿ, ಮುಂದಿನ ಪ್ರಧಾನಿ ಯಾರು ಎನ್ನುವುದು ಚುನಾವಣೆಯ ನಂತರವೇ ನಿರ್ಧಾರವಾಗುತ್ತದೆ ಎಂದು ಹೇಳುವ ಮೂಲಕ ಮನಮೋಹನ ಸಿಂಗ್ ಅವರ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಸೂಚಿಸುವ ಮೂಲಕ  ರಾಜಕೀಯ ದಾಳ ಉರುಳಿಸಿದ್ದಾರೆ.ಇದು ಕಾಂಗ್ರೆಸ್ ತಂತ್ರಗಾರಿಕೆಯೂ ಹೌದು. ಇತ್ತೀಚೆಗೆ ಕಾರ್ಯಕಾರಿಣಿಯಲ್ಲಿ ಭಾರೀ ಬದಲಾವಣೆ ಮಾಡುವ ಮೂಲಕ ಬಿಜೆಪಿ ಚುನಾವಣಾ ತಂತ್ರ ರೂಪಿಸುತ್ತಿರುವುದು, ನರೇಂದ್ರಮೋದಿಯವರನ್ನು ಮುಂಚೂಣಿಗೆ ತಂದು ನಿಲ್ಲಿಸಿರುವುದು ಕಾಂಗ್ರೆಸ್ ಹಾದಿಯಲ್ಲಿ ಪ್ರತಿತಂತ್ರ ಹೂಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ನೆಹರೂ ವಂಶಪಾರಂಪರ್ಯ ಆಡಳಿತಕ್ಕೆ ಕಾಂಗ್ರೆಸ್ ಜೋತುಬಿದ್ದಿದೆ ಎನ್ನುವ ಆಪಾದನೆ ಬಾರದಂತೆ ನೋಡಿಕೊಳ್ಳುವ ಎಚ್ಚರಿಕೆಯೂ ಇದರಲ್ಲಿದೆ.ನೆಹರೂ,ಗಾಂಧಿ ಕುಟುಂಬ ಹಾಗೂ ನರೇಂದ್ರಮೋದಿಯ ನಡುವೆ ಯುದ್ಧ ಸೀಮಿತವಾಗಬಾರದು ಎನ್ನುವ ಚುನಾವಣಾ ತಂತ್ರವೂ ಇದರ ಹಿಂದೆ ಇರುವುದನ್ನು ಮರೆಮಾಚಲಾಗದು. ಈಗಾಗಲೇ ರಾಷ್ಟ್ರೀಯ ಪಕ್ಷ ಎನ್ನುವ ವರ್ಚಸ್ಸಿನಿಂದ ದೂರಾಗಿರುವ ಕಾಂಗ್ರೆಸ್, ಪ್ರಧಾನಿ ಅಭ್ಯರ್ಥಿಯತ್ತಲೇ ಗಮನ ಕೇಂದ್ರೀಕರಿಸುವುದಕ್ಕಿಂತ ಪಕ್ಷದ ಪುನಶ್ಚೇತನಕ್ಕೆ ಮಾರ್ಗಗಳನ್ನು ಹುಡುಕುವುದೂ ಸೂಕ್ತವಾದೀತು.

ಪ್ರತಿಕ್ರಿಯಿಸಿ (+)