ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಇಲ್ಲವೇ ನಾನು ಇರಬೇಕು

7

ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಇಲ್ಲವೇ ನಾನು ಇರಬೇಕು

Published:
Updated:

ಚಿಂತಾಮಣಿ: `ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ, ಕೆಪಿಸಿಸಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ಅವರ ಕಿರಿಕಿರಿ, ಕಾಟ ಸಹಿಸುವುದಿಲ್ಲ. ಅವರ ವಿರುದ್ಧ ನೇರ ಸಮರ ಸಾರಿದ್ದೇನೆ.ಕಾಂಗ್ರೆಸ್ ಪಕ್ಷದಲ್ಲಿ ಅವರು ಇರಬೇಕು, ಇಲ್ಲವೇ ನಾನು ಮತ್ತು ನನ್ನ ಬೆಂಬಲಿಗರು ಇರಬೇಕು~ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಎಚ್ಚರಿಕೆ ನೀಡುವ ಮೂಲಕ ಮುಖಂಡರ ವಿರುದ್ಧ ತೊಡೆತಟ್ಟಿದ್ದಾರೆ.ದಿವಂಗತ ಎಂ.ಸಿ.ಆಂಜನೇಯರೆಡ್ಡಿ ಪುಣ್ಯತಿಥಿ ಅಂಗವಾಗಿ ನಗರದ ಮಾಳಪಲ್ಲಿ ಬಳಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, `ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೆ.ಎಚ್.ಮುನಿಯಪ್ಪ, ವಿ.ಮುನಿಯಪ್ಪ ಮತ್ತು ನಂದನವನ ಶ್ರೀರಾಮರೆಡ್ಡಿ ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಇಲ್ಲವಾದರೆ ನಾನು ಮತ್ತು ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ~ ಎಂದರು.`ನಾನು ರಾಜೀನಾಮೆ ನೀಡಿದರೆ ನನ್ನೊಂದಿಗೆ 15 ಸಾವಿರ ಮಂದಿ ಕಾಂಗ್ರೆಸ್ ಸದಸ್ಯರು, 2600 ಮಂದಿ ಭೂತ್ ಸಮಿತಿ ಪದಾಧಿಕಾರಿಗಳು ಮತ್ತು ಯುವ ಕಾಂಗ್ರೆಸ್‌ನ 2400 ಮಂದಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರವಾದ ಮುಜುಗರ ಮತ್ತು ಪೆಟ್ಟು ಅನುಭವಿಸಬೇಕಾಗುತ್ತದೆ~ ಎಂದು ಅವರು ಎಚ್ಚರಿಕೆ ನೀಡಿದರು.`ಜನರಲ್ಲಿ ಜಾತಿ ವಿಷ ಬೀಜ ಬಿತ್ತಿ ಸ್ವಾರ್ಥ ರಾಜಕಾರಣದ ಮೂಲಕ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳುಗೆಡವಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಇತರರು ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅಂತಹದ್ದೇ ಕೃತ್ಯ ನಡೆಸುತ್ತಿದ್ದಾರೆ. ಜಾತೀಯ ವಿಷ ಬೀಜ ಬಿತ್ತುವುದನ್ನೇ ರಾಜಕಾರಣವೆಂದು ಭಾವಿಸಿದ್ದು, ರಾಜಕೀಯ ಅಂತ್ಯ ಸಮೀಪಿಸಿದೆ. ಇದಕ್ಕಾಗಿ ಸಿದ್ಧತೆಯೂ ನಡೆದಿದೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.`ಸುಮಾರು 20 ವರ್ಷಗಳ ಕಾಲ ಡಿಸಿಸಿ ಮತ್ತು ಕೆಪಿಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ ಮಾಲೂರು ನಾಗರಾಜ್, ಶ್ರೀನಿವಾಸಪುರದ ಜಿ.ಕೆ.ವೆಂಕಟಶಿವಾರೆಡ್ಡಿ, ಬಂಗಾರಪೇಟೆ ನಾರಾಯಣಸ್ವಾಮಿ, ಕೆಜಿಎಫ್‌ನ ಶ್ರೀನಿವಾಸ್, ಮುಳುಬಾಗಿಲಿನ ಎಂ.ವಿ.ವೆಂಕಟಪ್ಪ, ನಮ್ಮ ತಂದೆ ಚೌಡರೆಡ್ಡಿ ಸೇರಿದಂತೆ ಪಕ್ಷದ ಹಿರಿಯರನ್ನು ಕಾಂಗ್ರೆಸ್‌ನಿಂದ ಹೊರಹಾಕುವ ಮೂಲಕ ಕೆ.ಎಚ್.ಮುನಿಯಪ್ಪ ಬಿಜೆಪಿಯನ್ನು ಪರೋಕ್ಷವಾಗಿ ಬೆಳೆಸುತ್ತಿದ್ದಾರೆ.ಬಂಗಾರಪೇಟೆಯಲ್ಲಿ ತಮ್ಮ ಹಿಂಬಾಲಕರಾಗಿದ್ದ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ತಮ್ಮ ಬೆಂಬಲಿಗ ರಾಮಚಂದ್ರ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಬಿಜೆಪಿ ಮುನಿವೆಂಕಟಪ್ಪ ಗೆಲ್ಲುವಂತೆ ಮಾಡಿದರು. ಇದಕ್ಕೆಲ್ಲ ಕೆ.ಎಚ್.ಮುನಿಯಪ್ಪ ಅವರೇ ಕಾರಣ~ ಎಂದು ಅವರು ಟೀಕೆಗಳ ಸುರಿಮಳೆ ನಡೆಸಿದರು.`ರಾಜಕೀಯದ ದುರಾಸೆಗಾಗಿ ಯಾರನ್ನು ಬೇಕಾದರೂ, ಯಾವ ಸಮಯದಲ್ಲಾದರೂ ಬಲಿ ತೆಗೆದುಕೊಳ್ಳುವ ಕೆ.ಎಚ್.ಮುನಿಯಪ್ಪ ಅವರು ವೇದಿಕೆಗಳ ಮೇಲೆ ಹಿಂದುಳಿದ, ದೀನದಲಿತರ ಮತ್ತು ಅಲ್ಪಸಂಖ್ಯಾತರ ಪರ ಮಾತನಾಡುತ್ತಾರೆಯೇ ಹೊರತು ಅವರ ಸಾಧನೆ ಏನು ಇಲ್ಲ.ಇದೀಗ ಅಲ್ಪಸಂಖ್ಯಾತರನ್ನು ನನ್ನ ವಿರುದ್ಧ ಎತ್ತಿಕಟ್ಟಿ ರಾಜಕಾರಣ ಮಾಡಲು ಹೊರಟಿರುವ ಅವರ ಉದ್ದೇಶ ಈಡೇರುವುದಿಲ್ಲ. 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಮುಗ್ದ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಿ ಜಾತಿಕಾರಣ ಮಾಡಲು ಹೋಗಿ ಕೈಸುಟ್ಟು ಕೊಂಡರು~ ಸುಧಾಕರ್ ಆರೋಪಿಸಿದರು.ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry