`ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರರಿಗೆ ನ್ಯಾಯ'

7

`ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರರಿಗೆ ನ್ಯಾಯ'

Published:
Updated:

ಬೆಳಗಾವಿ: ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ತಮ್ಮ ಸಂವಿಧಾನಾತ್ಮಕ ರಕ್ಷಿಸಲು ಮುಂದಾಗಬೇಕು ಎಂದು ಅಲ್ಪಸಂಖ್ಯಾತ ಸಮುದಾಯಗಳಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನಾಯಕರು ಮನವಿ ಮಾಡಿದರು.ಇಲ್ಲಿನ ಎ.ಎಂ.ಶೇಖ್ ಹೋಮಿಯೋಪಥಿಕ್ ಕಾಲೇಜಿನ ಆವಣರದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕ ಭಾನುವಾರ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಅಲ್ಪಸಂಖ್ಯಾತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ನಾಯಕರೆಲ್ಲರೂ, ಜಾತ್ಯತೀತವಾದಿಗಳು ಎಂದು ಹೇಳಿಕೊಳ್ಳುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ಬಡವರ, ಅಲ್ಪಸಂಖ್ಯಾತರ, ಶೋಷಿತರ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.ಕೇಂದ್ರದ ಕಾರ್ಮಿಕ ಇಲಾಖೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕು. ಯಾವುದೇ ಆಮಿಷಕ್ಕೆ ಒಳಗಾಗಬಾರದು, ಭರವಸೆಗಳಿಗೆ ಕಿವಿಗೊಡಬಾರದು. ಮುಸ್ಲಿಂ ಸಮಾಜದ ರಕ್ಷಣೆಗೆ ಕಂಗ್ರೆಸ್ ಬದ್ಧವಿದೆ. ಈ ಸಮಾಜದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದೆ.

ಮುಸ್ಲಿಂ ಮತಗಳನ್ನು ವಿಭಜಿಸಲು ಇತರೆ ಪಕ್ಷಗಳು ತಂತ್ರ ನಡೆಸಿದ್ದು, ಅವರ ಮಾತುಗಳಿಗೆ ಮರುಳಾಗಬಾರದು ಎಂದು ಸಲಹೆ ನೀಡಿದರು.`50 ಕೋಟಿ ಮಕ್ಕಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಹಣ ಮೀಸಲಿಡಲಾಗಿದೆ. ಇದರಲ್ಲಿ 3000 ಐಟಿಐ ಹಾಗೂ 5000 ಕೌಶಲ ಅಭಿವೃದ್ಧಿ ಕೇಂದ್ರ ಆರಂಭಿಸಲಾಗುವುದು.ಅಲ್ಪಸಂಖ್ಯಾತರರು ಇದರ ಪ್ರಯೋಜನ ಪಡೆಯಬೇಕು'. ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತರಲಾಗಿದ್ದು, ಮುಸ್ಲಿಂ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು. ಬಿಜೆಪಿ ಸರ್ಕಾರ ರಾಜಕೀಯ ಬಲಕ್ಕಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ಮುಸ್ಲಿಂ ಸಮಾಜದವರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ `ಜಾತ್ಯತೀತತೆ ಕಾಪಾಡಿಕೊಂಡು ಬಂದಿರುವ ಏಕೈಕ ಪಕ್ಷ ಕಾಂಗ್ರೆಸ್. ಎಲ್ಲ ಧರ್ಮದವರನ್ನು, ಜಾತಿಯವರನ್ನು ಒಂದುಗೂಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ. ಆದರೆ ಧರ್ಮ, ಜಾತಿ ಹೆಸರಿನಲ್ಲಿ ಬಿಜೆಪಿ ದೇಶವನ್ನು ಒಡೆಯುತ್ತಿದೆ' ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿರಲಿಲ್ಲ. ಆದರೆ ಆರ್‌ಎಸ್‌ಎಸ್ ಕಾರ್ಯಕ್ರಮದಂತೆ ಬಿಜೆಪಿ ತಿದ್ದುಪಡಿ ತರುವ ಮೂಲಕ ಅಲ್ಪಸಂಖ್ಯಾತರ ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ. 1964ರಲ್ಲಿಯೇ ಈ ಮಸೂದೆ ಜಾರಿಗೆ ತರಲಾಗಿದ್ದು, ಗೋವುಗಳ ರಕ್ಷಣೆ ಮಾಡಲಾಗುತ್ತಿದೆ. ಆದರೆ ಮುಸ್ಲಿಂ ಸಮಾಜದವರಿಗೆ ಕಿರುಕುಳ ನೀಡಬೇಕು ಎಂಬ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಲಾಗುವುದು ಎಂದ ಅವರು, ಜೆಡಿಎಸ್ ಜಾತ್ಯತೀತತೆ ಎಂಬ ಸೋಗಲಾಡಿತನ ಮಾಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮತ ಪಡೆಯಲು ಏನು ಬೇಕಾದರೂ ಹೇಳುತ್ತಾರೆ, ಇವರ ಮಾತುಗಳನ್ನು ನಂಬಬೇಡಿ. ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡುವ ಕೆಲಸ ಈ ನಾಯಕರು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗ ಮಸೀದಿಗಳಿಗೆ ಹೋಗುತ್ತಿದ್ದಾರೆ. ಇಂಥ ಢೋಂಗಿಗಳ ಮಾತುಗಳಿಗೆ ಮರುಳಾಗಬೇಡಿ. ಇವರಲ್ಲಿ ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಹಾಗೂ ಆರ್‌ಎಸ್‌ಎಸ್ ರಕ್ತ ಹರಿಯುತ್ತಿದೆ ಎಂದರು.ಭಯೋತ್ಪಾದನೆ ಕಿತ್ತುಹಾಕುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ನಿರಪರಾಧಿ ಯುವಕರ ಮೇಲೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಸಿಂದಗಿಯಲ್ಲಿ ಶ್ರೀರಾಮಸೇನಾ, ಆರ್‌ಎಸ್‌ಎಸ್ ಕಾರ್ಯಕರ್ತರೇ ಪಾಕಿಸ್ತಾನದ ಧ್ವಜ ಹಾರಿಸಿ ಮುಸ್ಲಿಂ ಯುವಕರ ಮೇಲೆ ಗೂಬೆ ಕೂಡಿಸಲು ಯತ್ನಿಸಲಾಗಿತ್ತು. ಪೊಲೀಸರು ಸಹ ಆರ್‌ಎಸ್‌ಎಸ್ ಕಾರ್ಯಕರ್ತರಂತಾಗಿದ್ದಾರೆ ಎಂದು ಆಪಾದಿಸಿದರು.ಟಿಪ್ಪು ಸುಲ್ತಾನ್ ಬಗ್ಗೆ ಡಾ. ಚಿದಾನಂದ ಮೂರ್ತಿ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ಧರಾಮಯ್ಯ, ಚಿದಾನಂದ ಮೂರ್ತಿ ಅವರು ಹಿಂದೂ ವಿರೋಧಿ ಎಂದು ದೂರಿದ ಅವರು, ರಾಜ್ಯದಲ್ಲಿ ವೀರಶೈವರ ನಂತರ ಮುಸ್ಲಿಂ ಜನಸಂಖ್ಯೆ ಎರಡನೇ ಸ್ಥಾನದಲ್ಲಿದೆ ಎಂದರು.ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಕೆ.ರೆಹಮಾನಖಾನ್ ಮಾತನಾಡಿ, ಮುಸ್ಲಿಂ ಸಮಾಜದವರಿಗೆ ಸಂವಿಧಾನಾತ್ಮಕ ಹಕ್ಕುಗಳು ಸಿಗಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ. ಶೇ. 15 ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮಾಜದವರು ಒಂದೇ ವೇದಿಕೆಯಲ್ಲಿ ಬರಬೇಕು. ಒಗ್ಗಟ್ಟಿನಿಂದ ಇದ್ದರೆ ತಮ್ಮ ಹಕ್ಕು ಪಡೆಯಬಹುದು ಎಂದರು.ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜಾತ್ಯತೀತೆ ಎಂಬ ಸೋಗನ್ನು ಹಾಕಿ ಕೊಂಡಿವೆ. ಮುಸ್ಲಿಂ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡು ತ್ತಿರುವ ಪಕ್ಷಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂದರು.`ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ತಿಳಿಸಲಾಗುವುದು. ಅಲ್ಪಸಂಖ್ಯಾತರ ಆರ್ಥಿಕ ಸದೃಢತೆ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಾಸನ ಸಮಿತಿಯೊಂದು ರಚಿಸುವ ಅಗತ್ಯವಿದೆ' ಎಂದು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹೇಳಿದರು.ಶಾಸಕ ಫಿರೋಜ್ ಶೇಠ್ ಮಾತ    ನಾಡಿ, ಮೌಲಾನಾ ಅಜಾದ್ ಅವರ ಹೆಸರಿನಲ್ಲಿ ವಸತಿ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಆರ್.ವಿದೇಶಪಾಂಡೆ, ಕೆ.ಬಿ. ಕೋಳಿವಾಡ, ಎ.ಎಂ.ಹಿಂಡಸಗೇರಿ, ಎಸ್.ಆರ್.ಮೋರೆ, ರೋಶನ ಬೇಗ್, ವೀರಕುಮಾರ ಪಾಟೀಲ, ನಫೀಸ್ ಫಜಲ್, ಪ್ರಕಾಶ ಹುಕ್ಕೇರಿ, ಶಾಸಕರಾದ ಬಿ.ಸಿ.ಪಾಟೀಲ, ಮಹಾಂತೇಶ ಕೌಜಲಗಿ, ಶ್ರೀನಿವಾಸ ಮಾನೆ, ತನ್ವೀರ್ ಸೇಠ್, ಎನ್.ಎ.ಹ್ಯಾರಿಸ್, ಅಶೋಕ ಪಟ್ಟಣ, ವೀರಣ್ಣ ಮತ್ತಿಕಟ್ಟಿ, ರಾಜ್ಯ ಯುವ ಘಟಕದ ಅಧ್ಯಕ್ಷ ರಿಜ್ವಾನ್ ಅರ್ಷದ್, ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ನಸೀರ್ ಅಹಮ್ಮದ್ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry