ಸೋಮವಾರ, ಮೇ 16, 2022
30 °C

ಕಾಂಗ್ರೆಸ್‌ನಿಂದ ಪ್ರಜಾಸತ್ತಾತ್ಮಕ ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹದಿನಾಲ್ಕು ತಿಂಗಳಿಂದ ನಗರಸಭೆಯ ಆಡಳಿತ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಯಾವುದೇ ರೀತಿ ದುರಾಡಳಿತ ನಡೆಸಿಲ್ಲ. ಮಲತಾಯಿ ಧೋರಣೆ, ಅವ್ಯವಹಾರದ ಆರೋಪ ಮಾಡಿರುವ ಜೆಡಿಎಸ್ ಸದಸ್ಯ ಬಿ ತಿಮ್ಮಾರೆಡ್ಡಿ ಆರೋಪ ಸತ್ಯಕ್ಕೆ  ದೂರವಾದುದು ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಅಧಿಕಾರವಹಿಸಿಕೊಂಡ ಬಳಿಕ ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದೆ. ಜೆಡಿಎಸ್, ಬಿಜೆಪಿ ಎಲ್ಲ ಪಕ್ಷದ ಸದಸ್ಯರಿಗೂ ಸಮಾನ ಗೌರವ. ಅಭಿವೃದ್ಧಿ ಕಾರ್ಯದಲ್ಲಿ ಸಮಾನತೆ ಮಾರ್ಗ ಅನುಸರಿಸಿಕೊಂಡು ಬರಲಾಗಿದೆ ಎಂದು ಹೇಳಿದರು.ನಗರಸಭೆ ಮಹಾಸಭೆ ನಡೆಸಿಲ್ಲ. ಸ್ಥಾಯಿ ಸಮಿತಿ ನಿರ್ಲಕ್ಷಿಸಲಾಗಿದೆ. ಲೇಔಟ್‌ಗಳಿಗೆ ಅಕ್ರಮ ಪರವಾನಗಿ ನೀಡಲಾಗುತ್ತಿದೆ. ಸ್ವಚ್ಛತಾ ಕಾರ್ಯದ ಹೆಸರಿನಲ್ಲಿ ಹಣ ಪಡೆಯಲಾಗಿದೆ. ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ.ಜೆಡಿಎಸ್ ಪಕ್ಷದ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಬಳಿಕ ಬೆಂಬಲ ಕೊಟ್ಟ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬುದು ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇವೆಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದರು.ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿದಾಗ ಜೆಡಿಎಸ್ ಪಕ್ಷವೂ ಬೆಂಬಲಕ್ಕೆ  ಸಜ್ಜಾಗಿತ್ತು. ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿ ಮಾತುಕತೆ ನಡೆದು ಅಂತಿಮವಾಗಿ ಕಾಂಗ್ರೆಸ್ ಅಧಿಕಾರ  ಹಿಡಿದಿದೆ. ಜೆಡಿಎಸ್ ಬೆಂಬಲ ಕೊಟ್ಟಿರುವುದನ್ನೂ ಕಾಂಗ್ರೆಸ್ ಅಲ್ಲಗಳೆಯುವುದಿಲ್ಲ. ಆದರೆ ಜೆಡಿಎಸ್‌ನಿಂದ ಬೆಂಬಲ ಕೊಟ್ಟ ಸದಸ್ಯರು ಕೇವಲ ಇಬ್ಬರು ಮಾತ್ರ. ಒಬ್ಬರು ಶ್ರೀಮತಿ ಮುಕ್ರಂ ಹಾಗೂ ಬಿ ತಿಮ್ಮಾರೆಡ್ಡಿ ಅವರು.

ಶ್ರೀಮತಿ ಮುಕ್ರಂ ಆಡಳಿತದೊಂದಿಗೆ ಇದ್ದಾರೆ. ಆಡಳಿತ ತೊಂದರೆ, ಸಮಸ್ಯೆ ಎಂಬ ಕಾರಣದಿಂದ ತಿಮ್ಮಾರೆಡ್ಡಿ ಮುನಿಸಿಕೊಂಡಿದ್ದರೆ ಅವರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಲು ಸಿದ್ಧ ಇರುವುದಾಗಿ ಹೇಳಿದರು.ಮುಖ್ಯಮಂತ್ರಿ ನಿಧಿಯಡಿ 30 ಕೋಟಿ, ಎಸ್‌ಎಫ್‌ಸಿ ನಿಧಿ 11 ಕೋಟಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಗಂಭೀರ ವಿಷಯಗಳ ಬಗ್ಗೆ ಆರೋಪಿಸುವಾಗ ಕನಿಷ್ಠ ಆ ಕುರಿತು ಮಾಹಿತಿ, ಕಾರ್ಯಗಳನ್ನು ಅರಿತಿರಬೇಕು. ಆ ಕೆಲಸ ತಿಮ್ಮಾರೆಡ್ಡಿ ಮಾಡಿಲ್ಲ. ಸಿಎಂ ನಿಧಿಯಡಿ 30 ಕೋಟಿ ಘೋಷಣೆ ಆಗಿದ್ದರೂ ಬಂದಿದ್ದು ಮಾತ್ರ 10 ಕೋಟಿ. ಸರ್ಕಾರದ ಹಣವನ್ನು ಮನಬಂದಂತೆ ದುರ್ಬಳಕೆ ಮಾಡಿಕೊಳ್ಳಲು ನಗರಸಭೆ ಬೇಜವಾಬ್ದಾರಿ ಖಾಸಗಿ ಸಂಸ್ಥೆಯಲ್ಲ ಎಂದು ತಿಳಿಸಿದರು.ಸರ್ಕಾರದ ಅನುದಾನ ದೊರಕಿಲ್ಲ. ಕ್ರೀಡಾಂಗಣ ಅಭಿವೃದ್ಧಿಗೆ ನಗರಸಭೆಯಿಂದ 5 ಕೋಟಿ ಜಿಲ್ಲಾಡಳಿತ ಪಡೆದಿತ್ತು. ಆ ಹಣವನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಮರಳಿ ನಗರಸಭೆ ಆಡಳಿತ ಮಂಡಳಿ ಪಡೆದು ರಸ್ತೆ ದುರಸ್ತಿಗೆ ಬಳಸಿದೆ. ಎಸ್‌ಎಫ್‌ಸಿ ಯೋಜನೆಯ 11 ಕೋಟಿಯಲ್ಲಿ 7.43 ಕೋಟಿ ಕ್ರಿಯಾ ಯೋಜನೆ ಮಾಡಲಾಗಿದೆ. ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗಳು ಆರಂಭಗೊಂಡಿದ್ದರೂ ಬಿಲ್ ಆಗದೇ ಗುತ್ತಿಗೆದಾರರ ಕೆಲಸ ನಿಲ್ಲಿಸುವ ಸ್ಥಿತಿ ಬಂದಿದೆ ಎಂದು ವಿವರಿಸಿದರು.ಖಾಸಗಿ ನಿವೇಶನ ಮಂಜೂರಾತಿ ವಿಷಯದ ಬಗೆಗಿನ ಆರೋಪ ಸುಳ್ಳು. ನಿವೇಶನಗಳಿಗೆ ಜಿಲ್ಲಾಡಳಿತ ಬಿನ್‌ಶೇತ್ಕಿ ಪ್ರಮಾಣಪತ್ರ ನೀಡಿದ್ದಾರೆ. ಆರ್‌ಡಿಎ ನಿವೇಶನ ಮಂಜೂರಾತಿ ನೀಡಿದೆ. ಬಳಿಕವಷ್ಟೇ ನಗರಸಭೆ ಆಡಳಿತಾತ್ಮಕ ಅನುಮೋದಿಸಿದೆ. ಇದರಲ್ಲಿ ಯಾವ ಅಕ್ರಮವಿದೆ ಎಂದು ಪ್ರಶ್ನಿಸಿದರಲ್ಲದೆ, ಪ್ರತಿ ಅನುಮೋದನೆಯನ್ನು ನಂತರದ ಮಹಾಸಭೆಯಲ್ಲಿ ದೃಢೀಕರಿಸಲಾಗಿದೆ. ಆಗ ತಿಮ್ಮಾರೆಡ್ಡಿ ಅವರು ಆಕ್ಷೇಪ ಮಾಡಬಹುದಿತ್ತು.  ಈಗ ನಿರಾಧಾರ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.ಸ್ಥಾತಿ ಸಮಿತಿಯನ್ನೂ ಎಂದೂ ನಿರ್ಲಕ್ಷಿಸಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 20 ಸಾವಿರದ ಒಳಗಿನ ಕಡತಗಳಿಗೆ ಅನುಮತಿ ನೀಡುವ ಅಧಿಕಾರ ಕಾನೂನು ಪ್ರಕಾರ ಇದೆ. ಇದಕ್ಕೆ ಸಾಮಾನ್ಯ ಸಭೆಯಲ್ಲಿ ಅಂಗೀಕಾರ ಪಡೆಯಬೇಕು. ಅವರ ಕೆಲಸ ಕಾರ್ಯಕ್ಕೆ, ಅವರಿಗೆ ಅಸಹಕಾರ ತೋರಲು ತಾವೆಂದೂ ಅಧಿಕಾರಿಗಳಿಗೆ ಸೂಚಿಸಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರಾದ ತಿಮ್ಮಾರೆಡ್ಡಿ ಯಾವ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವ ಅಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಿ ಪರಿಶೀಲಿಸಿದ್ದಾರೆ ಎಂದು ಪ್ರಶ್ನಿಸಿದರು.ಬೇನಾಮಿ ಗುತ್ತಿಗೆದಾರರ ಹೆಸರಲ್ಲಿ ನಗರ ಸ್ವಚ್ಛತೆ ಕಾರ್ಯ ನಡೆದಿದೆ. ಮನಬಂದಂತೆ ಹಣ ಖರ್ಚು ಮಾಡಿಲ್ಲ. ನಾಗಿರೆಡ್ಡಿ, ಬಸವರಾಜ ಅತ್ತನೂರ, ತಾಯಣ್ಣಗೌಡ ಅವರೇ ನಗರ ಸ್ವಚ್ಛತೆ ಅಧಿಕೃತ ಗುತ್ತಿಗೆದಾರರಾಗಿದ್ದಾರೆ. 12 ಲಕ್ಷ ಅವರಿಗೆ ಪಾವತಿಸಲಾಗುತ್ತದೆ ಎಂದು ಹೇಳಿದರು.ಪೈಪ್‌ಲೈನ್ ದುರಸ್ತಿ, ಪಂಪ್ ದುರಸ್ತಿ ಹೀಗೆ ಕೆಲ ಕಾಮಗಾರಿ ಕುರಿತು ಅಧ್ಯಕ್ಷರ ನಿರೀಕ್ಷಣೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಮಹಾಸಭೆ ಒಪ್ಪಿಗೆ ಪಡೆದು ಕಾಮಗಾರಿ ಆರಂಭವಾಗಬೇಕಾದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ನಡೆಸುತ್ತಿದೆ. ನಗರಸಭೆ ಆಡಳಿತ ಮಂಡಳಿ ಕರೆದಾಗ ತೆರಳಿ ಭೇಟಿ ಕೊಡುವ ಅಧಿಕಾರ ಪಕ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ ಅವರಿಗೆ ನೀಡಿದೆ. ಅಧ್ಯಕ್ಷರ ಕೊಠಡಿಗಾಗಲಿ, ಸಭೆಗಾಗಲಿ ಬಂದಿಲ್ಲ ಎಂದು ಹೇಳಿದರು.ನಗರಸಭೆ ಹಿರಿಯ ಸದಸ್ಯರಾದ ಶಾಂತಪ್ಪ, ಜೆ ಶಿವಮೂರ್ತಿ, ನಗರ ಘಟಕದ ಅಧ್ಯಕ್ಷ ಜಿ ಬಸವರಾಜರೆಡ್ಡಿ, ನಗರಸಭೆ ಸದಸ್ಯ ಶಶಿರಾಜ, ಈಶಪ್ಪ, ತಾಯಣ್ಣ ಗೋಷ್ಠಿಯಲ್ಲಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.