ಸೋಮವಾರ, ನವೆಂಬರ್ 18, 2019
28 °C

ಕಾಂಗ್ರೆಸ್‌ನಿಂದ ಮತ್ತೆ ಶಾಶ್ವತ ನೀರಾವರಿ ಜಪ

Published:
Updated:

ಕೋಲಾರ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಜಿ ಸ್ಪೀಕರ್, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶಕುಮಾರ್ ಭರವಸೆ ನೀಡಿದರು.ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಯಲುಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹಣ ಎಷ್ಟೇ ಖರ್ಚಾದರೂ ಲೆಕ್ಕಕ್ಕಿಡುವುದಿಲ್ಲ ಎಂದರು.ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಲಾಗುವುದು. ಬೆಲೆನಷ್ಟವಾಗುವ ಸಂದರ್ಭದಲ್ಲಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.ರೈತರು ನೀಡುವ ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿರುವ ಬೆಂಬಲ ಬೆಲೆಯನ್ನು ರೂ 2ರಿಂದ 4ಕ್ಕೆ ಹೆಚ್ಚಿಸಲಾಗುವುದು ಎಂದರು.

ಐದು ವರ್ಷದ ಹಿಂದೆ ಕ್ಷೇತ್ರದ ಶಾಸಕರಾಗಿ ವರ್ತೂರು ಪ್ರಕಾಶ್ ಅವರನ್ನು ಆಯ್ಕೆ ಮಾಡಿದ ಪರಿಣಾಮ ಏನಾಗಿದೆ ಎಂಬುದನ್ನು ಬಹುತೇಕರು ಅರಿತಿದ್ದಾರೆ.ಅದರ ಪರಿಣಾಮವಾಗಿಯೇ ಇಂದು ಹಲವು ಸಂಖ್ಯೆಯಲ್ಲಿ ವರ್ತೂರರನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ರಮೇಶಕುಮಾರ್ ಅವರ ಮಾತನ್ನೇ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೋಲಾರ ಕ್ಷೇತ್ರದ ಅಭ್ಯರ್ಥಿ ನಸೀರ್ ಅಹ್ಮದ್, ಮಾಜಿ ಸಚಿವ ನಿಸಾರ್ ಅಹ್ಮದ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಂ ಮತ್ತೆ ಹೇಳಿದರು.ಜೆಡಿಎಸ್ ರಾಜ್ಯದಲ್ಲಿ ಬಹುಮತವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅದಕ್ಕೆ ಮತ ಹಾಕುವುದರಲ್ಲೂ ಪ್ರಯೋಜನವಿಲ್ಲ ಎಂದೂ ಮುಖಂಡರು ಪ್ರತಿಪಾದಿಸಿದರು.ಸೇರ್ಪಡೆ: ಸಚಿವ ಆರ್.ವರ್ತೂರು ಪ್ರಕಾಶ್ ಅವರೊಡನೆ ಗುರುತಿಸಿಕೊಂಡಿದ್ದ ನಗರ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶಕುಮಾರ್, ನಗರಸಭೆ ಸದಸ್ಯ ರೌತ್ ಶಂಕರಪ್ಪ ಸೇರಿದಂತೆ ಹಲವರು ಇದೇ ವೇಳೆ ಕಾಂಗ್ರೆಸ್ ಸೇರಿದರು. ಸಾ.ಮಾ. ರಂಗಪ್ಪ ಕೂಡ ಸೇರ್ಪಡೆಯಾದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್, ನಗರಸಭೆ ಸದಸ್ಯರಾದ ಪ್ರಸಾದ್‌ಬಾಬು, ಎ.ರಮೇಶ್, ಸಿ.ಗಂಗಾಧರ್, ಮುಖಂಡರಾದ ಜನ್ನಘಟ್ಟ ವೆಂಕಟಮುನಿಯಪ್ಪ, ಊರುಬಾಗಿಲು ಶ್ರೀನಿವಾಸ್, ಗೋಪಾಲಕೃಷ್ಣ, ಕೆ.ಜಯದೇವ, ಜಯರಾಂ, ರಾಮಯ್ಯ, ಶಿವಕುಮಾರ್, ಲಾಲ್‌ಬಹಾದೂರ್ ಶಾಸ್ತ್ರಿ, ಅಂಚೆ ಅಶ್ವಥ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)