ಕಾಂಗ್ರೆಸ್‌ನಿಂದ ಮಾತ್ರ ಬಡವರ ಉದ್ಧಾರ

7

ಕಾಂಗ್ರೆಸ್‌ನಿಂದ ಮಾತ್ರ ಬಡವರ ಉದ್ಧಾರ

Published:
Updated:

ಮಾನ್ವಿ: ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಇತಿಹಾಸ ಹೊಂದಿದೆ. ದೇಶದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ, ದೀನ ದಲಿತರ ಉದ್ಧಾರ ಸಾಧ್ಯ. ಕಾರಣ ಕಾಂಗ್ರೆಸ್ ಪಕ್ಷ ಜಾರಿಗೆ ತಂದಂತಹ ಜನಪರ ಯೋಜನೆಗಳ ಕುರಿತು ಜನರಲ್ಲಿ ಪಕ್ಷದ ಕಾರ್ಯಕರ್ತರು ತಿಳಿವಳಿಕೆ ಮೂಡಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎನ್.ಎಸ್.ಬೋಸರಾಜು ಹೇಳಿದರು.ಭಾನುವಾರ ತಾಲ್ಲೂಕಿನ ಹರವಿ ಗ್ರಾಮದಲ್ಲಿ ಸಿರವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ `ಕಾಂಗ್ರೆಸ್‌ನೊಂದಿಗೆ ಬನ್ನಿ ಬದಲಾವಣೆ ತನ್ನಿ~ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲಾ ಕಾಂಗ್ರೆಸ್ಸೇತರ ಪಕ್ಷಗಳು ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಆದರೆ ಕಾಂಗ್ರೆಸ್ ಪಕ್ಷವು ದೇಶದ ಸಮಗ್ರತೆಗೆ ಆಡಳಿತ ನಡೆಸಿದೆ. ರಾಜ್ಯದಲ್ಲಿ ಮೊದಲ ಸಲ  ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟಾಚಾರ ಹಾಗೂ ಸರ್ಕಾರ ನಾಡಿನ ಸಂಪತ್ತನ್ನೂ ಲೂಟಿ ಮಾಡಿ ಮತದಾರರಿಗೆ ದ್ರೋಹ ಎಸಗಿದೆ. ಇಂತಹ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಜೆಡಿಎಸ್ ಪಕ್ಷದ ವಚನ ಭ್ರಷ್ಟತೆ ಹಾಗೂ ಬಿಜೆಪಿಯೊಂದಿಗಿನ ಅನೈತಿಕ ಮೈತ್ರಿ ಕಾರಣ. ಮತದಾರರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತಿತರ ಹೊಸ ಪಕ್ಷಗಳನ್ನು ತಿರಸ್ಕರಿಸುವಂತೆ ಬೋಸರಾಜು ಕರೆ ನೀಡಿದರು.ಕೆಲವು ಮುಖಂಡರು ಕಾಂಗ್ರೆಸ್ ಪಕ್ಷದಿಂದ ಶಾಸಕ, ಸಚಿವ ಸ್ಥಾನ, ಸಂಸತ್ ಸದಸ್ಯ ಸ್ಥಾನ ಮತ್ತಿತರ ಅಧಿಕಾರಗಳನ್ನು ಪಡೆದು ಈಗ ಬೇರೆ ಪಕ್ಷ ಸೇರಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಅವರು ಪ್ರಶ್ನಿಸಿದರು.ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, `ಆಪರೇಷನ್ ಕಮಲ~ದ ಮೂಲಕ ಶಾಸಕರಿಗೆ ಆಮಿಷ, ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ತೊಲಗಿಸುವುದು ಅಗತ್ಯ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಅಸ್ಲಮ್‌ಪಾಷ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಸಿರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ ಜಂಬಲದಿನ್ನಿ, ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರೆಡ್ಡೆಪ್ಪ ಬಾಗಲವಾಡ, ಜಿಪಂ ಸದಸ್ಯರಾದ ಹನುಮೇಶ ಮದ್ಲಾಪುರ ಹಾಗೂ ಗಂಗಣ್ಣ ಸಾಹುಕಾರ, ತಾಪಂ ಅಧ್ಯಕ್ಷ ಪಾರ್ವತಿ ಗುರಪ್ಪ ಬಾಗಲವಾಡ, ಉಪಾಧ್ಯಕ್ಷ ರಾಜಾ ವಸಂತ ನಾಯಕ, ಸದಸ್ಯರಾದ ಗೌಡಪ್ಪಗೌಡ ಹಾಗೂ ದಾನುಗೌಡ ಸಿರವಾರ, ಎಪಿ ಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಯಾದವ್, ಮುಖಂಡರಾದ ಎಮ್.ಈರಣ್ಣ, ಹರವಿ ಶರಣಬಸವ, ಮಲ್ಲಿಕಾರ್ಜುನಗೌಡ, ಗಫೂರ್‌ಸಾಬ, ಚುಕ್ಕಿ ಶಿವಾನಂದ, ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಚಂದಾ, ಪುರಸಭೆ ಉಪಾಧ್ಯಕ್ಷ ಸಬ್ಜಲಿಸಾಬ, ಪುರಸಭೆ ಸದಸ್ಯ ರೌಡೂರು ಮಹಾಂತೇಶ ಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಕುರ್ಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಖಾಲೀದ್ ಖಾದ್ರಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತ್ತರ್ ಬಂಗ್ಲೆವಾಲೆ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry