ಭಾನುವಾರ, ನವೆಂಬರ್ 17, 2019
21 °C

ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರ್ಕಾರ: ವಿಶ್ವಾಸ

Published:
Updated:

ನಾಪೋಕ್ಲು: ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಮತ್ತು ದಕ್ಷ ಆಡಳಿತ ನೀಡಲು ಸಾಧ್ಯ ಎಂದು ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಹೇಳಿದರು.

ನಾಪೋಕ್ಲು ಪಟ್ಟಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರವನ್ನು, ರಾಜ್ಯವನ್ನು ಪ್ರತಿನಿಧಿಸುವ ನಾಯಕರು ಸಾಮೂಹಿಕವಾಗಿ ಆಯ್ಕೆಯಾಗುವ ವ್ಯಕ್ತಿಯಾಗಿರಬೇಕು. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದು ಲೇವಡಿ ಮಾಡಿದರು.ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಮಾತನಾಡಿದರು. ಮಾತನಾಡಿ, ನಾನು ಜಯಿಸಿದರೆ ಕೊಡಗಿನ ಜ್ವಲಂತ ಸಮಸ್ಯೆಗಳಾದ ಗ್ರಾಮೀಣ ರಸ್ತೆಗಳು, ಪಡಿತರ ಚೀಟಿ ಮತ್ತಿತರ ಅವ್ಯವಸ್ಥೆಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವೀಣಾ ಅಚ್ಚಯ್ಯ, ಹಿಂದುಳಿದ ವರ್ಗದ ಅಧ್ಯಕ್ಷ ಸರ ಚಂಗಪ್ಪ, ಅಬ್ದುಲ್ ರಹಿಮಾನ್, ನೆರವಂಡ ಉಮೇಶ್, ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿದರು.`ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ'

ಸಿದ್ದಾಪುರ: ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭ ರಾಜ್ಯದ ಆಡಳಿತ ವ್ಯವಸ್ಥೆ ಅರಾಜಕತೆಗೆ ಸಿಲುಕಿದ್ದನ್ನು ಮತದಾರರು ಮರೆಯಲು ಸಾಧ್ಯವಿಲ್ಲ. ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದ್ದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಸುಸ್ಥಿರ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ  ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ಸಿ. ವೇಣುಗೋಪಾಲ್ ಹೇಳಿದರು.ಸಿದ್ದಾಪುರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತದ ಬದಲಾವಣೆಯನ್ನು ಬಯಸಿದ ರಾಜ್ಯದ ಜನರಿಗೆ ಬಿಜೆಪಿ ವಂಚಿಸಿದೆ. ದಕ್ಷಿಣ ಭಾರತದಲ್ಲಿ ಅಧಿಕಾರ ರಚಿಸಲು ಸಿಕ್ಕಿದ ಪ್ರಥಮ ಅವಕಾಶದಲ್ಲಿಯೇ ಮುಗ್ಗರಿಸಿ ಬಿದ್ದ ಬಿಜೆಪಿಯ ಆಡಳಿತ ವ್ಯವಸ್ಥೆ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಯೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿದೆ ಎಂದು ಅವರು ಹೇಳಿದರು.ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಮಾತನಾಡಿ, ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಅನೈತಿಕ ಚಟುವಟಿಕೆಗಳೇ ಬಿಜೆಪಿ ಸಾಧನೆ ಎಂದರು.

ಕಾಂಗ್ರೆಸ್ ಅಭ್ಯಾರ್ಥಿ ಬಿ.ಟಿ. ಪ್ರದೀಪ್, ಮಾಜಿ ಸಚಿವೆ ಸುಮಾ ವಸಂತ್, ಮುಖಂಡರಾದ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ವೆಂಕಟೇಶ್, ಸಿ.ಎಂ. ಕಾವೇರಪ್ಪ, ಬ್ಲಾಕ್ ಕಾಂಗ್ರೆಸ್ ಮುಖಂಡ ಕೆ.ಉಸ್ಮಾನ್ ಹಾಜಿ, ಪಿ.ಸಿ. ಹಸೈನಾರ್, ಎಂ.ಎಚ್. ಮೂಸಾ ಬ್ಯಾರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)