ಕಾಂಗ್ರೆಸ್‌ನ `ಬಾಲಂಗೋಚಿ' ಕೆಜೆಪಿ

7

ಕಾಂಗ್ರೆಸ್‌ನ `ಬಾಲಂಗೋಚಿ' ಕೆಜೆಪಿ

Published:
Updated:
ಕಾಂಗ್ರೆಸ್‌ನ `ಬಾಲಂಗೋಚಿ' ಕೆಜೆಪಿ

ಬೆಂಗಳೂರು: ಸಿಬಿಐ ಮೂಲಕ ಕಾಂಗ್ರೆಸ್ ಹೇರಿರುವ ಒತ್ತಡಕ್ಕೆ ಮಣಿದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಅಸ್ತಿತ್ವಕ್ಕೆ ತಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಟೀಕಿಸಿದರು.ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಬೆಂಗಳೂರು ನಗರ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, `ಭ್ರಷ್ಟಾಚಾರ ಪ್ರಕರಣದಲ್ಲಿ ಅನುಕೂಲ ಪಡೆಯಲು ಯಡಿಯೂರಪ್ಪ ಅವರು ಕಾಂಗ್ರೆಸ್‌ನ ನಿರ್ದೇಶನದಂತೆ ಮುನ್ನಡೆಯುತ್ತಿದ್ದಾರೆ. ಕೆಜೆಪಿ ಕಾಂಗ್ರೆಸ್‌ನ `ಬಿ' ತಂಡವಾಗಿ ಕೆಲಸ ಮಾಡುತ್ತಿದೆ' ಎಂದು ವಾಗ್ದಾಳಿ ನಡೆಸಿದರು.`ಸಿಬಿಐ ಮೂಲಕ ಒತ್ತಡ ಹೇರಿ ಎಲ್ಲ ಕಡೆಗಳಲ್ಲೂ ಬಿ ತಂಡಗಳನ್ನು ರಚಿಸುವುದು ಕಾಂಗ್ರೆಸ್‌ಗೆ ಕರಗತವಾಗಿದೆ. ಯಡಿಯೂರಪ್ಪ ಅವರು ರೋಮ್ ಆಶ್ರಯದಲ್ಲೇ ಕೆಜೆಪಿ ಆರಂಭಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನದಂದು ಪಕ್ಷವನ್ನು ಉದ್ಘಾಟಿಸಿದ್ದಾರೆ' ಎಂದರು.ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರ ವರ್ಚಸ್ಸು ಮತ್ತು ರಾಜ್ಯದಲ್ಲಿನ ಕಾರ್ಯಕರ್ತರ ಶ್ರಮದ ಫಲವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಪಡೆದರು. ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತು, ಸಿಬಿಐ ತನಿಖೆ ಎದುರಿಸಿ ಪಕ್ಷದಿಂದ ಹೊರಹೋಗಿದ್ದಾರೆ. ಯಾರೂ ಅವರನ್ನು ಬಿಜೆಪಿಯಿಂದ ಹೊರಹಾಕಿಲ್ಲ ಎಂದು ಅನಂತಕುಮಾರ್ ಹೇಳಿದರು.30 ವರ್ಷಗಳಿಗೂ ಹೆಚ್ಚು ಕಾಲ ಹಲವರು ನಡೆಸಿದ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಪ್ರಬಲ ಶಕ್ತಿ ಬೆಳೆದಿದೆ. ಅದನ್ನು ಮಣ್ಣುಪಾಲು ಮಾಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಕೈಗೂಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರ ಎದುರಾಳಿ. ಜೆಡಿಎಸ್‌ಗೆ ನೆಲೆ ಇಲ್ಲ. ಇತರೆ ಪಕ್ಷಗಳು ಲೆಕ್ಕಕ್ಕೂ ಇಲ್ಲ. ಬಿಜೆಪಿಗೆ ಕಾರ್ಯಕರ್ತರ ಪಡೆಯ ಬೃಹತ್ ಶಕ್ತಿಯಿದೆ. ಅದನ್ನು ಮುರಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.ಕೆಜೆಪಿ ಬೊಗಳೆ ಬಿಡುವವರ, ಸುಳ್ಳಿನ ಪಕ್ಷ. ರಾಜ್ಯದ ಜನ ಅದನ್ನು ತಿರಸ್ಕರಿಸುವುದು ನಿಶ್ಚಿತ. ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಹೀನಾಯ ಸೋಲು ಅನುಭವಿಸಿರುವ ಗುಜರಾತ್ ಪರಿವರ್ತನ್ ಪಕ್ಷದ ಮುಖ್ಯಸ್ಥ ಕೇಶುಭಾಯ್ ಪಟೇಲರಿಗೆ ಆದ ಗತಿಯೇ ಯಡಿಯೂರಪ್ಪ ಅವರಿಗೂ ಆಗಲಿದೆ ಎಂದು ಲೇವಡಿ ಮಾಡಿದರು.ಆಕಾಶ, ಭೂಮಿ, ಪಾತಾಳ ಎಲ್ಲ ಕಡೆಗಳಲ್ಲೂ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. 2ಜಿ ತರಂಗಾಂತರ (ಆಕಾಶ), ಭೂ ಹಗರಣ (ಭೂಮಿ) ಮತ್ತು ಗಣಿಗಾರಿಕೆಯಲ್ಲಿನ (ಪಾತಾಳ) ಅಕ್ರಮ ಇದಕ್ಕೆ ಸ್ಪಷ್ಟ ಸಾಕ್ಷ್ಯ ಒದಗಿಸುತ್ತವೆ ಎಂದು ಆರೋಪಿಸಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ ಮಾತನಾಡಿ, `ಬಿಜೆಪಿ ಸರ್ಕಾರ ಜನರ ಪರವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಎಲ್ಲ ನಗರ ಪ್ರದೇಶಗಳಲ್ಲೂ ಜಾರಿಗೊಳಿಸುವ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಹಿರಿಯ ನಾಗರಿಕರು ಶೇಕಡ 25ರಷ್ಟು ರಿಯಾಯಿತಿ ಪಡೆಯಲು ಇರುವ ವಯೋಮಿತಿಯನ್ನು 65ರಿಂದ 60 ವರ್ಷಕ್ಕೆ ಇಳಿಕೆ ಮಾಡಲಾಗುವುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾದ ಮಂಗಳವಾರದಿಂದಲೇ ಇದು ಜಾರಿಯಾಗಲಿದೆ' ಎಂದರು.ವಿಶೇಷ ಅಧಿವೇಶನಕ್ಕೆ ಆಗ್ರಹ

ದೆಹಲಿಯಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯನ್ನು ಪ್ರಸ್ತಾಪಿಸಿದ ಅನಂತಕುಮಾರ್, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರಲು ತಕ್ಷಣ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿದರು. ಈ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದರು.

`ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆ ನಡೆದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸದಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಒತ್ತಡ ಹೇರಬೇಕು' ಎಂದು ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry