ಕಾಂಗ್ರೆಸ್‌, ಕೆಜೆಪಿ ದೋಸ್ತಿ; ಜೆಡಿಎಸ್‌ಗೆ ಆಶಾಭಂಗ

7
ಮಹಿಳಾ ಮಣಿಗಳ ಕೈಗೆ ನಗರಸಭೆ

ಕಾಂಗ್ರೆಸ್‌, ಕೆಜೆಪಿ ದೋಸ್ತಿ; ಜೆಡಿಎಸ್‌ಗೆ ಆಶಾಭಂಗ

Published:
Updated:

ತುಮಕೂರು: ಬಹುಮತ ಇಲ್ಲದಿದ್ದರೂ ಕೆಜೆಪಿ, ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್‌ ನಗರಸಭೆಯಲ್ಲಿ ಅಧಿಕಾರಕ್ಕೇರಿತು. ತಾಂತ್ರಿಕ­ವಾಗಿ ಇನ್ನೂ ಬಿಜೆಪಿಯಲ್ಲಿರುವ ಸಂಸದ ಜಿ.ಎಸ್‌.ಬಸವರಾಜ್‌ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿ ನಗೆ ಬೀರಿದರು.ಪಕ್ಷೇತರರಾಗಿ ಗೆಲುವು ಸಾಧಿಸಿ ಕಾಂಗ್ರೆಸ್‌ ಸೇರಿದ್ದ ಗೀತಾ ರುದ್ರೇಶ್‌ (17ನೇ ವಾರ್ಡ್‌) ಅಧ್ಯಕ್ಷೆಯಾಗಿ ಹಾಗೂ ಕಾಂಗ್ರೆಸ್‌ನ ಧನಲಕ್ಷ್ಮೀ ರವಿ (33ನೇ ವಾರ್ಡ್‌) ಉಪಾಧ್ಯಕ್ಷೆಯಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಉಪವಿಭಾಗಾಧಿಕಾರಿ ನಕುಲ್‌ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸ­ಲಾ­ಗಿತ್ತು. ಕೈ ಎತ್ತುವ ಮೂಲಕ ಆಯ್ಕೆ ನಡೆಯಿತು.‘ಮ್ಯಾಜಿಕ್‌’ ನಡೆಯಲಿದೆ ಎಂದು ನಿರೀಕ್ಷಿಸಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಆರ್‌.ಜಯಲಕ್ಷ್ಮೀ (28ನೇ ವಾರ್ಡ್‌), ಉಪಾಧ್ಯಕ್ಷ ಸ್ಥಾನದ ಎಚ್‌.ರವಿ­ಕುಮಾರ್‌ (22ನೇ ವಾರ್ಡ್‌) ಮುಖಭಂಗ ಅನುಭವಿಸಿದರು. ಬಿಜೆಪಿ ಬೆಂಬಲ ನೀಡಿದರೂ ಅದು ಅವರನ್ನು ಗೆಲುವಿನ ದಡ ಮುಟ್ಟಿಸಲಿಲ್ಲ.ಕಾಂಗ್ರೆಸ್‌ನ 12, ಕೆಜೆಪಿ 5, ಇಬ್ಬರು ಪಕ್ಷೇತರರು, ಶಾಸಕ ಡಾ.ರಫೀಕ್ ಅಹಮ್ಮದ್‌, ಸಂಸದ ಜಿ.ಎಸ್‌.ಬಸವರಾಜು ಮತ ಸೇರಿ ಗೀತಾ ಹಾಗೂ ಧನಲಕ್ಷ್ಮೀ  ತಲಾ 21 ಮತ ಪಡೆದು ಗೆಲುವಿನ ನಗೆ ಚೆಲ್ಲಿದರು.ಜೆಡಿಎಸ್‌ ಅಭ್ಯರ್ಥಿಗಳು ಪಕ್ಷದ 13 ಸದಸ್ಯರು, ಬಿಜೆಪಿ ಮೂವರು ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಆರ್‌.­ಹುಲಿ­ನಾಯ್ಕರ್‌ ಅವರ ಒಂದು ಮತ ಸೇರಿದಂತೆ 17 ಮತಗಳನ್ನು ಪಡೆದರು.ಬಿಜೆಪಿ ಜೊತೆಗೂಡಿ ಅಧಿಕಾರ ಹಿಡಿಯಲು ಕೊನೆವರೆಗೂ ಜೆಡಿಎಸ್‌ ನಡೆಸಿದ ತಂತ್ರ ಫಲಿಸಲಿಲ್ಲ. ಚುನಾವಣೆ ಘೋಷಣೆಯಾದ ಬಳಿಕವೂ ಕೆಲ ಕಾಂಗ್ರೆಸ್‌ ಸದಸ್ಯರ ಮುಖದಲ್ಲಿ ಆತಂಕ ಕಾಣುತ್ತಿತ್ತು.ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್‌ 13, ಕಾಂಗ್ರೆಸ್‌ 12, ಕೆಜೆಪಿ 5, ಬಿಜೆಪಿ 3 ಹಾಗೂ ಇಬ್ಬರು ಪಕ್ಷೇತರರಿದ್ದಾರೆ.

ನ್ಯಾಯ ಒದಗಿಸಲಾಗಿದೆ: ವಿಧಾನಸಭಾ ಚುನಾವಣೆ­ಯಲ್ಲಿ ಗೀತಾ ರುದ್ರೇಶ್‌ ಕಾಂಗ್ರೆಸ್‌ ಪರ ಕೆಲಸ ಮಾಡಿದ್ದರು. ಅಲ್ಲದೆ ಕಳೆದ ಅವಧಿಯಲ್ಲಿ ಕೆಲವೇ ದಿನಗಳ ಕಾಲ ಕಾಂಗ್ರೆಸ್‌ ಬೆಂಬಲದೊಂದಿಗೆ ಅಧ್ಯಕ್ಷೆಯಾಗಿದ್ದರು. ಆ ಅನ್ಯಾಯವನ್ನು ಈಗ ಸರಿಪಡಿಸಲಾಗಿದೆ ಎಂದು ಶಾಸಕ ಡಾ.ರಫೀಕ್‌ ಅಹಮ್ಮದ್‌ ಈ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು.ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಫೀಕ್, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಇರಲಿಲ್ಲವೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲ. ನಗರದ ಅಭಿವೃದ್ಧಿಗೆ ಈ ಆಯ್ಕೆ ಅನಿವಾರ್ಯವಾಗಿತ್ತು. ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್‌ಗೆ ಕೆಜೆಪಿ ಬೆಂಬಲ ನೀಡಿದೆ ಎಂದರು.ಚುನಾವಣೆ ನಡೆಯದಂತೆ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನೊಂದು ಚುನಾವಣೆ ಬೇಡ ಎಂದರು.ಅಭ್ಯರ್ಥಿಗಳೇ ಇಲ್ಲ: ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ದರೆ ಅವರಿಗೆ ಮತ ಹಾಕುತ್ತಿದ್ದೆ. ಅಭ್ಯರ್ಥಿಗಳನ್ನು ಹಾಕದ ಕಾರಣ ಕಾಂಗ್ರೆಸ್‌ ಸದಸ್ಯರಿಗೆ ಮತ ಹಾಕಿದ್ದಾಗಿ ಸಂಸದ ಜಿ.ಎಸ್‌.ಬಸವರಾಜ್ ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ­ಯೂರಪ್ಪ ಬಿಜೆಪಿಗೆ ಸೇರಿದರೂ ತಾವು ವಾಪಸ್‌ ಹೋಗುವುದಿಲ್ಲ ಎಂದ ಅವರು ಕಾಂಗ್ರೆಸ್‌ ಸೇರ್ಪಡೆ ಕುರಿತು ಏನನ್ನು ಹೇಳಲಿಲ್ಲ.ಎಲ್ಲ ಸದಸ್ಯರು ಪಕ್ಷಾತೀತವಾಗಿ ನಗರದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಕಳೆದ ಅವಧಿಯ ಆಡಳಿತದ ಕಹಿ ಅನುಭವ ಮರೆತು ಅಭಿವೃದ್ಧಿಯ ಹೊಸ ಶಕೆ ಆರಂಭಿಸಬೇಕು. ಎಲ್ಲಾ ವಾರ್ಡ್ಗಳಿಗೂ ಸಮಾನ ಅನುದಾನ ಬಿಡುಗಡೆ  ಮಾಡಬೇಕು ಎಂದರು.ಉತ್ಸಾಹ, ಕೇಕೆ: ಕಾಂಗ್ರೆಸ್‌ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸಾಹ ಆಚರಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್‌.ರಾಜೇಂದ್ರ, ವಿಜಯಪ್ರಕಾಶ್‌ ಮಿರ್ಜಿ ಇನ್ನಿತರ ಮುಖಂಡರು ಹಾಜರಿದ್ದರು. ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದದ್ದು ವಿಶೇಷವಾಗಿತ್ತು.ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಕೆಜೆಪಿ ಮುಖಂಡ ಜ್ಯೋತಿ ಗಣೇಶ್‌ ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry