ಬುಧವಾರ, ಜೂನ್ 16, 2021
23 °C

ಕಾಂಗ್ರೆಸ್‌ ಭ್ರಷ್ಟಾಚಾರದ ತವರು ಮನೆ: ಬಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ‘ರಾಷ್ಟ್ರದಲ್ಲಿ ಸುದೀರ್ಘ ದುರಾಡಳಿತ ನಡೆಸಿರುವ ಕಾಂಗ್ರೆಸ್‌ಅನ್ನು ಬೇರು ಸಹಿತ ಕಿತ್ತೊಗೆಯಬೇಕಾದ ಅನಿ­ವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಜ್ಞಾವಂತ ಮತದಾರರು ಉತ್ಸುಕ­ರಾಗಿದ್ದಾರೆ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಜಿ.ಕೆ.ಬಂಡಿ ಗಾರ್ಡ್‌ನಲ್ಲಿ ಆಯೋಜಿಸಲಾಗಿದ್ದ ರೋ ಣ ಮತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವಾಗಿ ಆಳ್ವಿಕೆ ನಡೆಸಿದ ಕೀರ್ತಿ ಕೇಂದ್ರ ಕಾಂಗ್ರೆಸ್‌  ಯುಪಿಎ ಕಾಂಗ್ರೆಸ್‌ ಸರ್ಕಾರಕ್ಕಿದೆ. ರಾಷ್ಟ್ರದ ಜನ ಹಿತವನ್ನು ಗಾಳಿಗೆ ತೂರಿ ಮನಬಂದಂತೆ ಆಳ್ವಿಕೆ ನಡೆಸಿದ ಕೇಂದ್ರ ಸರ್ಕಾರ ತನ್ನ ಸ್ವಾರ್ಥ ಚಿಂತನೆಗಳ ಸಾಫಲ್ಯತೆಗಾಗಿ ಮಿತಿ–ಮೀರಿದ ಭ್ರಷ್ಟಾಚಾರದಲ್ಲಿ ತೊಡಗಿ ಶ್ರೀಸಾಮಾನ್ಯನ ಜತೆಗೆ ರಾಷ್ಟ್ರ ಹಿತವನ್ನು ಬಲಿಕೊಟ್ಟಿದೆ’ ಎಂದು ಚುಚ್ಚಿದರು.‘ಕಾಂಗ್ರೆಸ್‌ ಭ್ರಷ್ಟಾಚಾರದ ತವರು ಮನೆ. ತನ್ನ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ­ಯುಕ್ತ ದುರಾಡಳಿತವನ್ನು ನೀಡಿ ಸ್ವಾರ್ಥಪರ ಚಿಂತನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ ಪಕ್ಷದ ಜನ ವಿರೋಧಿ ನೀತಿ ಹಾಗೂ ಭ್ರಷ್ಟಾಚಾರಯುಕ್ತ ಆಡಳಿತದಿಂದ ಜಾಗೃತ­ಗೊಂಡಿರುವ ರಾಷ್ಟ್ರದ ಜನತೆ ಪ್ರಸ್ತುತ ಲೋಕ­ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರ್ಮೂಲನೆ ಮಾಡಲು ನಿರ್ಧರಿಸಿದ್ದಾರೆ’ ಎಂದರು.ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ,‘ವಾಜಪೇಯಿ ಅವರು ಪ್ರಧಾನಿ­ಯಾಗಿದ್ದ ಅವಧಿಯಲ್ಲಿ ರಾಷ್ಟ್ರದಾದ್ಯಂತ ಗುಣಮಟ್ಟದ ವ್ಯವಸ್ಥಿತ ರಸ್ತೆಗಳು ನಿರ್ಮಾಣ­ಗೊಂಡವು. ಮತ್ತೊಂದು ಅವಧಿಗೆ ವಾಜಪೇಯಿ ಅವರು ಪ್ರಧಾನಿಯಾಗಿದ್ದರೆ, ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಜೋಡಣೆ ಮಾಡುವ ಗುರಿಯನ್ನು ಹೊಂದಿ­ದ್ದರು. ಈ ಯೋಜನೆಗಾಗಿ 6 ಲಕ್ಷ ಕೋಟಿ ವೆಚ್ಚವನ್ನು ಸಹ ಅಂದಾಜಿಸಲಾಗಿತ್ತು. ಆದರೆ, ವಾಜಪೇಯಿ ಅವರು ಅಧಿಕಾರದಿಂದ ಕೆಳಗಿಳಿ­ಯುತ್ತಿ­­ದ್ದಂತೆ ಕಾಂಗ್ರೆಸ್‌್ ನದಿ ಜೋಡಣೆ ಯೋಜ­ನೆಗೆ ತಣ್ಣೀರೆರಚಿತು’ ಎಂದು ಕಿಡಿಕಾರಿದರು.‘ಕೆಲ ಸಮುದಾಯಗಳ ಮತಗಳನ್ನು ಪಡೆಯುವುದಕ್ಕಾಗಿ ಕಾಂಗ್ರೆಸ್‌ ರಾಷ್ಟ್ರದ ಸರ್ವಾಂಗೀಣ ಹಿತವನ್ನು ಬಲಿಕೊಟ್ಟಿದೆ. ರಾಷ್ಟ್ರದ ಗಡಿ ಸಮಸ್ಯೆ ಉಲ್ಬಗೊಂಡಾಗ ಕೇಂದ್ರ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸಲಿಲ್ಲ. ಕೇಂದ್ರ ಸರ್ಕಾರದ ಹೇಡಿತನದ ನಿಲುವಿನಿಂದಾಗಿ ರಾಷ್ಟ್ರದ ಗಡಿ ಕಾಯುವ ಸೈನಿಕರ ರುಂಡ–ಮುಂಡಗಳನ್ನು ಭಯೋತ್ಪಾದಕರು, ಪಾಕಿಸ್ತಾನದ ಸೈನಿಕರು ಚಂಡಾಡಿದರೂ ಕೇಂದ್ರ ಸರ್ಕಾರ ಮೌನ­ವಹಿಸಿತ್ತು. ಇದರಿಂದಾಗಿ ಕಾಂಗ್ರೆಸ್‌ ಸರ್ಕಾರ ರಾಷ್ಟ್ರದ ಹಿತ ಕಾಯುವಲ್ಲಿ, ಪಕ್ಷದ ಹಿತ ಕಾಯು­ವಲ್ಲಿ ತೆಗೆದುಕೊಂಡ ನಿಲುವು–ನಿರ್ಧಾರಗಳ ಬಗ್ಗೆ ರಾಷ್ಟ್ರ ಜನತೆ ತೀರ್ಮಾಣ ತೆಗೆದುಕೊಳ್ಳ­ಲಿದ್ದಾರೆ’ ಎಂದು ವ್ಯಂಗ್ಯವಾಡಿದರು.ಜಿ.ಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಗಜೇಂದ್ರಗಡ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಮಾಜಿ ತಾ.ಪಂ ಅಧ್ಯಕ್ಷೆ ಲಲಿತಾ ಪೂಜಾರ, ಬಿಜೆಪಿ ಮುಖಂಡರಾದ ಎಂ.ಎಸ್‌.ಕರಿಗೌಡರ, ಎಸ್‌.ಬಿ.ಸಂಕಣ್ಣನವರ, ಅಶೋಕ ನವಲಗುಂದ, ಮುತ್ತಣ್ಣ ಗುಗ್ಗರಿ (ಮೆಣಸಿನಕಾಯಿ), ಮುತ್ತಣ್ಣ ಲಿಂಗನಗೌಡ್ರ, ಬಸವಂತಪ್ಪ ತಳವಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.