ಬುಧವಾರ, ಜೂನ್ 23, 2021
29 °C

ಕಾಂಗ್ರೆಸ್‌ ವಿರುದ್ಧವೇ ಕಾಂಗ್ರೆಸ್‌ಗೆ ಅಚ್ಚರಿಯ ಗೆಲುವು

ಪ್ರಜಾವಾಣಿ ವಾರ್ತೆ/ ಪ್ರವೀಣ್‌ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಾಂಗ್ರೆಸ್‌ ಪಕ್ಷವೇ 1.20 ಲಕ್ಷಕ್ಕೂ ಅಧಿಕ ಮತಗಳ ಅಂತದಿಂದ ಸೋಲಿಸಿದ ಅಪರೂಪದ ಸಂದರ್ಭಕ್ಕೆ 1971ರ ಮಹಾ­ಚುನಾವಣೆ ಸಾಕ್ಷಿಯಾಯಿತು. ಈ ಸುದ್ದಿ ಇಂದಿನ ಪೀಳಿಗೆಯವರಿಗೆ ಅಚ್ಚರಿ ಉಂಟುಮಾಡಬಹುದು. ಆದರೂ ಈ ಮಾತು ಸತ್ಯ.1969ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕರಾದ ಕಾಮರಾಜ್‌, ಮೊರಾರ್ಜಿ ದೇಸಾಯಿ ಅವರಂತಹ ದಿಗ್ಗಜ ನಾಯಕರು ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸೆಟೆದು ನಿಂತರು. ಇಂದಿರಾ ಗಾಂಧಿಯನ್ನೇ ಪಕ್ಷದಿಂದ ಉಚ್ಛಾಟಿಸುವ ಪ್ರಯತ್ನವೂ ನಡೆಯಿತು. ಆದರೆ, ಆಡಳಿತ ಯಂತ್ರವನ್ನು ಅದಾಗಲೇ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದ್ದ ಇಂದಿರಾ ಗಾಂಧಿ ಈ ಬಂಡಾಯಕ್ಕೆ ಸೊಪ್ಪುಹಾಕಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹೆಚ್ಚಿನ ಸದಸ್ಯರು ಅವರ ಪರ ನಿಂತರು. ಹಾಗಾಗಿ ರಾಷ್ಟ್ರೀಯ ಕಾಂಗ್ರೆಸ್‌ (ಆರ್ಗನೈಸೇಷನ್‌) ಪಕ್ಷವು ಸ್ಥಾಪನೆಗೊಂಡಿತು.1971ರ ಮಹಾಚುನಾವಣೆಯಲ್ಲಿ ಚುನಾವಣಾ ಆಯೋಗವು ಇಂದಿರಾ ನೇತೃತ್ವದ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ಮನ್ನಣೆ ನೀಡಿತು. ಕಾಂಗ್ರೆಸ್‌ (ಐ) ಸಮಾಜವಾದಿ ಸಿದ್ಧಾಂತವನ್ನು ನೆಚ್ಚಿಕೊಂಡರೆ, ಕಾಂಗ್ರೆಸ್‌ (ಒ) ಬಲಪಂಥೀಯ ಚಿಂತನೆಯತ್ತ ಹೊರಳಿತು. ಸ್ವತಂತ್ರ ಪಾರ್ಟಿಯೂ ಕಾಂಗ್ರೆಸ್‌ (ಒ) ಜತೆ ಹೊಂದಾಣಿಕೆ ಮಾಡಿಕೊಂಡಿತು. ಹಾಗಾಗಿ 1971ರ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನೇರ ಪೈಪೋಟಿ ಇದ್ದುದು ಕಾಂಗ್ರೆಸ್‌ (ಐ) ಹಾಗೂ ಕಾಂಗ್ರೆಸ್‌ (ಒ) ನಡುವೆ.‘ಶ್ರೀಮಂತ ವರ್ಗಕ್ಕೆ ಸೇರಿದ ಕಾಂಗ್ರೆಸ್‌ ನಾಯಕರೆಲ್ಲ ಕಾಂಗ್ರೆಸ್‌ (ಒ)ನತ್ತ ವಾಲಿದ್ದರು. ಮಂಗಳೂರಿನ ಸಂಸದರಾಗಿದ್ದ ಸಿ.ಎಂ.ಪೂಣಚ್ಚ ಅವರೂ ಕಾಂಗ್ರೆಸ್‌ (ಒ)ಗೆ ಸೇರಿದರು. ಆಗ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವುದಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಯುತ್ತಿತ್ತು. ಇಂದಿರಾ ಕಾಂಗ್ರೆಸ್‌ಗೆ ಕೆ.ಕೆ.ಶೆಟ್ಟಿ ಎಂಬ ಸೂಕ್ತ ಅಭ್ಯರ್ಥಿಯೂ ಸಿಕ್ಕರು’ ಎಂದು ಸ್ಮರಿಸುತ್ತಾರೆ ಬಸ್ತಿ ವಾಮನ ಶೆಣೈ.ಆ ವರ್ಷ ಕಾಂಗ್ರೆಸ್‌ನಿಂದ ಕೆ.ಕೆ.ಶೆಟ್ಟಿ, ಕಾಂಗ್ರೆಸ್‌ (ಒ)ನಿಂದ ಸಿ.ಎಂ.ಪೂಣಚ್ಚ, ಸಿಪಿಎಂನಿಂದ ಎಂ.ಎಚ್‌.ಕೃಷ್ಣಪ್ಪ, ಪ್ರಜಾ ಸೊಷಿಯಲಿಸ್ಟ್‌ ಪಾರ್ಟಿಯಿಂದ ಈಶ್ವರ ಭಟ್‌ ಸರ್ಪಕಜೆ ಹಾಗೂ ಎಸ್‌.ಎನ್‌.ವಾಸುದೇವ ರಾವ್‌ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಕರಾವಳಿಯಲ್ಲಿ ಕಮ್ಯುನಿಸ್ಟ್‌ ಪ್ರಭಾವ ತೀರಾ ಕಡಿಮೆಯಾಗಿತ್ತು. ಈ ಚುನಾವಣೆಯಲ್ಲಿ ನಿಜವಾದ ಪೈಪೋಟಿ ಇದ್ದುದು ಕಾಂಗ್ರೆಸ್‌  ಹಾಗೂ ಕಾಂಗ್ರೆಸ್‌ (ಒ) ನಡುವೆ ಮಾತ್ರ.‘ಕಾಂಗ್ರೆಸ್‌ ಅಭ್ಯರ್ಥಿ ಕೆ.ಕೆ.ಶೆಟ್ಟಿ ಅವರು ಸಮಾಜಸೇವೆಗೆ ಹೆಸರಾಗಿದ್ದರು, ದಲಿತರ ಉದ್ಧಾರಕ್ಕಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಚುನಾವಣೆ ನಡೆದಿದ್ದು ಬಡಜನತೆ ಹಾಗೂ ಶ್ರೀಮಂತ ವರ್ಗದ ನಡುವೆ. ಲೋಕಸಭಾ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಅವರು ‘ಗರೀಬಿ ಹಠಾವೋ’ ಘೋಷಣೆ ಹೊರಡಿಸಿದರು. 1969ರಲ್ಲಿ ನಡೆಸಿದ ಬ್ಯಾಂಕ್‌ಗಳ ರಾಷ್ಟ್ರೀಕರಣ, ರಾಜಮಹಾರಾಜರಿಗೆ ಸಂದಾಯವಾಗುತ್ತಿದ್ದ ರಾಯಧನವನ್ನು ಸ್ಥಗಿತಗೊಳಿಸಿದ್ದು... ಮೊದಲಾದ ಅಂಶಗಳು ಇಂದಿರಾ ಗಾಂಧಿಯನ್ನು ಬಡವರ ಪರ ನಾಯಕಿ ಎಂಬಂತೆ ಬಿಂಬಿಸಿದವು. ಜತೆಗೆ, ಕೆ.ಕೆ.ಶೆಟ್ಟಿ ಅವರಿಗಿದ್ದ ಬಡವರ ಪರ ಕಾಳಜಿಯೂ ಈ ಚುನಾವಣೆಯಲ್ಲಿ ಕೆಲಸ ಮಾಡಿತು’ ಎಂದು ಸ್ಮರಿಸುತ್ತಾರೆ ಶೆಣೈ.ಚುನಾವಣಾ ಫಲಿತಾಂಶ ಕರಾವಳಿಯ ಜನತೆಯನ್ನೂ ಅಚ್ಚರಿಯಲ್ಲಿ ಕೆಡವಿತು. ಕೆ.ಕೆ.ಶೆಟ್ಟಿ ಅವರು ಸಿ.ಎಂ.ಪೂಣಚ್ಚ ಅವರನ್ನು 1.21 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಮಂಗಳೂರು ಕ್ಷೇತ್ರದ ಇತಿಹಾಸದಲ್ಲೇ ಅಲ್ಲಿಯವರೆಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಇಷ್ಟೊಂದು ಭಾರಿ ಅಂತರದಲ್ಲಿ ಗೆದ್ದ ಉದಾಹರಣೆ ಇರಲಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ (ಒ) ಅಭ್ಯರ್ಥಿಯನ್ನು ಹೊರತುಪಡಿಸಿ ಉಳಿದೆಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ಗೆಲುವು ಕರಾವಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ದೇಶದ 352 ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.ಉಡುಪಿಯಲ್ಲೂ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪಿ.­ರಂಗನಾಥ ಶೆಣೈ ಅವರು ಸ್ವತಂತ್ರ ಪಾರ್ಟಿಯ ಜೆ.ಎಂ.ಎಲ್‌.ಪ್ರಭು ಅವರನ್ನು 1.27 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಎರಡೂ ಕ್ಷೇತ್ರಗಳಲ್ಲೂ ಹಾಲಿ ಸಂಸದರು ಹೀನಾಯವಾಗಿ ಸೋತಿ­ದ್ದರು. ಉಡುಪಿಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದ ಸಂಜೀವ ಶೆಟ್ಟಿ ಕಿಳ್ಕೆಬೈಲ್‌ ಹಾಗೂ ಪೆರೋಡಿ ವಿಠಲ ಶೆಟ್ಟಿ ಠೇವಣಿ ಕಳೆದು­ಕೊಂಡಿದ್ದರು. 1967ರ ಚುನಾವಣೆಯಲ್ಲಿ ಕರಾವಳಿಯಲ್ಲಿ ಮತದಾರರ ಒಲವು ಕಳೆದುಕೊಂಡಿದ್ದ ಕಾಂಗ್ರೆಸ್‌ 1977ರ ಚುನಾವಣೆಯಲ್ಲಿ ಮತ್ತೆ ಪಾರಮ್ಯ ಮೆರೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.