ಸೋಮವಾರ, ಜನವರಿ 27, 2020
24 °C

ಕಾಂಗ್ರೆಸ್‌ ಶಾಸಕರ ಮೇಲೆ ಸಿ.ಎಂ ಗರಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಪಕ್ಷ ಮತ್ತು ಸರ್ಕಾರದ ನಡುವೆ ‘ಹೊಂದಾ­ಣಿಕೆ ಇಲ್ಲ, ಅಂತರ ಸೃಷ್ಟಿಯಾಗಿದೆ’ ಎಂದು ಬಿಂಬಿಸಲು ಕೆಲವು ಶಾಸಕರು ಪ್ರಯತ್ನಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸರ್ಕಾರ ಮತ್ತು ಪಕ್ಷದ ನಡುವಿನ ಸಂಬಂಧ ಕುರಿತು ವದಂತಿ ಹಬ್ಬಿಸುವವ­ರನ್ನು ಪತ್ತೆ ಹಚ್ಚುವುದಾಗಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.ಸುವರ್ಣಸೌಧದ ಸಮ್ಮೇಳನ ಸಭಾಂ­ಗ­ಣದಲ್ಲಿ ಬುಧವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಂದರ್ಭ­ದಲ್ಲಿ ಪಕ್ಷದೊಳಗಿನ ಬೆಳವಣಿಗೆಗಳು ಮತ್ತು ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕ­ರಿಗೆ ಅಸಮಾಧಾನವಿದೆ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೆಲ­ವರು ಹಬ್ಬಿಸುತ್ತಿರುವ ವದಂತಿಯಿಂದ ಸರ್ಕಾರ ಮುಜುಗರ ಅನುಭವಿಸುವಂತಾ­ಗಿದೆ ಎಂದು ಮುಖ್ಯಮಂತ್ರಿಯವರು ಬೇಸರ ವ್ಯಕ್ತಪಡಿಸಿದ್ದಾರೆ.‘ಸರ್ಕಾರ ಮತ್ತು ಶಾಸಕರ ನಡುವೆ ಅಂತರವಿದೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಕೆಲವೇ ಜನರಿದ್ದಾರೆ. ಅಂತಹವರನ್ನು ಪತ್ತೆಮಾಡ­ಬೇಕಿದೆ’ ಎಂದು ಸಭೆಯಲ್ಲಿ ಹೇಳುವ ಮೂಲಕ ಶಾಸಕರಿಗೆ ಬಿಸಿ ಮುಟ್ಟಿಸುವ ಯತ್ನ ಮಾಡಿದ್ದಾರೆ. ‘ಸಚಿವರ ಕಾರ್ಯವೈಖರಿ ಕುರಿತು ಕೆಪಿಸಿಸಿ ಅಥವಾ ಕಾಂಗ್ರೆಸ್ ಹೈ­ಕಮಾಂಡ್‌­­ಗೆ ಶಾಸಕರ್‍ಯಾರೂ ಪತ್ರ ಬರೆದಿಲ್ಲ. ಆದರೂ 30–40 ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆ­ದಿದ್ದಾರೆ ಎಂದು ವದಂತಿ ಹಬ್ಬಿಸ­ಲಾ­ಗುತ್ತಿದೆ.

ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಇಲ್ಲ. ಆದರೂ ಆ ರೀತಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಎಲ್ಲ ಶಾಸಕರೂ ಸಹಕಾರ ನೀಡಬೇಕು’ ಎಂದು ಸಿದ್ದ­ರಾಮಯ್ಯ ಮನವಿ ಮಾಡಿದರು ಎನ್ನಲಾಗಿದೆ. ತಮ್ಮ ಸರ್ಕಾರ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ. ಅವುಗಳಿಗೆ ಸರಿಯಾದ ಪ್ರಚಾರ ದೊರೆಯುತ್ತಿಲ್ಲ. ಶಾಸಕರ ಅಸಮಾಧಾನವಿದೆ ಎಂಬ ಗಾಳಿಸುದ್ದಿಯೇ ಅದಕ್ಕೆ ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.‘ಕುಳಿತು ಕೆಲಸ ಮಾಡಿ’: ಪದೇಪದೇ ಸೂಚನೆ ನೀಡಿದರೂ ಕೆಲ ಸಚಿವರು ವಿಧಾನಸೌಧದ ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡದಿರು­ವುದು ಮತ್ತು ಶಾಸಕರ ಜೊತೆ ಸರಿ­ಯಾಗಿ ನಡೆದುಕೊಳ್ಳದೇ ಇರುವ ಬಗ್ಗೆ ಮುಖ್ಯಮಂತ್ರಿಯವರು ಸಭೆಯಲ್ಲಿ ಅಸ­ಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿವೇಶ­ನದ ಬಳಿಕ ಎಲ್ಲ ಸಚಿವರೂ ಕಡ್ಡಾಯ­ವಾಗಿ ವಾರಕ್ಕೆ ಮೂರು ದಿನ ಕಚೇರಿ­ಯಲ್ಲಿ ಕುಳಿತು ಕೆಲಸ ಮಾಡಬೇಕು ಎಂದು ­ತಾಕೀತು ಮಾಡಿದ್ದಾರೆ.‘ಸಚಿವರು ಕಾರ್ಯವೈಖರಿ ಬದಲಿಸಿ­ಕೊಳ್ಳಬೇಕು ಎಂದು ಹಲವು ಬಾರಿ ಸೂಚನೆ ನೀಡಿದ್ದೇನೆ. ಆದರೆ, ಕೆಲವು ಸಚಿವರು ವಿಧಾನಸೌಧದ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲ ಎಂಬ ದೂರುಗಳಿವೆ. ಕೆಲವು ಸಚಿವರು ಶಾಸಕರ ಮಾತನ್ನು ನಿರ್ಲಕ್ಷಿಸುತ್ತಾರೆ ಎಂಬ ಬೇಸರ  ಇದೆ. ಮತ್ತೆ ಆ ರೀತಿಯ ದೂರುಗಳು ಬರದಂತೆ ಕೆಲಸ ಮಾಡಿ’ ಎಂದು ಮುಖ್ಯಮಂತ್ರಿ­ಯವರು ಖಡಕ್‌ ಆಗಿ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಜಿಲ್ಲೆಗಳಿಗೆ ಸಂಬಂಧಿಸಿದ ವಿಷಯ­ಗಳಲ್ಲಿ ತೀರ್ಮಾನ ಕೈಗೊಳ್ಳುವ ಮುನ್ನ ಸಚಿವರು ಸ್ಥಳೀಯ ಶಾಸಕರ ಜೊತೆ ಸಮಾ­ಲೋಚನೆ ನಡೆಸಬೇಕು. ಪಕ್ಷದ ಮುಖಂಡ­ರ ಸಲಹೆಗಳಿಗೂ ಮನ್ನಣೆ ನೀಡಬೇಕು. ಶಾಸಕರು ತಮ್ಮ ಬಳಿ ದೂರು­ಗಳನ್ನು ತರುವ ವಾತಾವರಣ ನಿರ್ಮಾಣ ಆಗಬಾರದು ಎಂದು ಎಚ್ಚ­ರಿಕೆ ನೀಡಿದ್ದಾರೆ.ಪಕ್ಷ ಗಮನಿಸುತ್ತಿದೆ: ‘ಸರ್ಕಾರದ ಕಾರ್ಯ­­ವೈಖರಿಯನ್ನು ಕೆಪಿಸಿಸಿ ಗಮನಿಸು­ತ್ತಿದೆ. ಆ ಬಗ್ಗೆ ಕೆಪಿಸಿಸಿ ಪ್ರಮುಖರು ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸು­ತ್ತಾರೆ. ನಾನು ಕೂಡ ಪ್ರತ್ಯೇಕವಾಗಿ ಎಲ್ಲ ಸಚಿವರ ಬಗ್ಗೆಯೂ ಹೈಕಮಾಂಡ್‌ಗೆ ವರದಿ ನೀಡುತ್ತೇನೆ. ನೀವು ಎಷ್ಟು ಎಚ್ಚರಿಕೆ­ಯಿಂದ ಕೆಲಸ ಮಾಡುತ್ತೀರೋ ಅಷ್ಟು ಉತ್ತಮ’ ಎಂದು ಸಿದ್ದರಾಮಯ್ಯ ಅವರು ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ.ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಾಸಕರು ಕೂಡ ಮುಖ್ಯಮಂತ್ರಿ­ಯವರ ಮುಂದೆ ಅಹವಾಲು ಹೇಳಿ­ಕೊಂಡಿ­ದ್ದಾರೆ. ಶಾಸಕರ ಕೋರಿಕೆ­ಗಳನ್ನು ತ್ವರಿತವಾಗಿ ವಿಲೇವಾರಿ ಮಾಡು­ವಂತೆ ಮುಖ್ಯಮಂತ್ರಿಯವರು ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)