ಸೋಮವಾರ, ಜೂನ್ 21, 2021
29 °C

ಕಾಂಗ್ರೆಸ್‌ 20 ಸೀಟು ಗೆದ್ದರೆ ರಾಜಕೀಯ ಸನ್ಯಾಸ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಲೋಕಸಭಾ ಚುನಾ­ವಣೆ­ಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ 20­ಸೀಟು ಗೆದ್ದರೆ, ರಾಜ­ಕೀಯ ಸನ್ಯಾಸ ಸ್ವೀಕರಿಸುತ್ತೇನೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.­ಈಶ್ವರಪ್ಪ ಗುರುವಾರ ಇಲ್ಲಿ ಘೋಷಿಸಿದರು.ಲೋಕಸಭಾ ಅಭ್ಯರ್ಥಿ ಬಿ.ಎಸ್.­ಯಡಿಯೂರಪ್ಪ ನಾಮಪತ್ರ ಸಲ್ಲಿಸಿದ ನಂತರ ನಗರದ ನೆಹರೂ ಕ್ರೀಡಾಂಗಣ­ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿ­ಕೊಳ್ಳುತ್ತಿದ್ದಾರೆ. ಹಾಗೆ ಗೆದ್ದಲ್ಲಿ ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ರಾಜ್ಯಸಭಾ ಸದಸ್ಯ ಆಯನೂರು ಮಂಜು­ನಾಥ ಮಾತನಾಡಿ, ಗೌರವ­ದಿಂದ ಬಾಳಿದ ಮನೆಯ ಹೆಣ್ಣು­ಮಗಳನ್ನು ರಾಜಕೀಯಕ್ಕೆ ತಂದು, ಆ ಮನೆ­ತನದ ಮರ್ಯಾದೆಯನ್ನು ದೇವೇ­ಗೌಡರು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಮಕೃಷ್ಣ ಹೆಗಡೆ ಮುಖ್ಯ­ಮಂತ್ರಿ­ಯಾಗಿದ್ದ ಸಂದರ್ಭದಲ್ಲಿ ಬಂಗಾರಪ್ಪ ಅವರು  ಮಂತ್ರಿ ಪದವಿ ತಪ್ಪಿಸಿದರು ಎಂಬ ದ್ವೇಷದಿಂದ ಅವರ ಕುಟುಂಬ­ವನ್ನು ನಾಶ ಮಾಡುವುದಕ್ಕೆ ದೇವೇ­ಗೌಡರು ಹೊರಟಿದ್ದಾರೆ ಎಂದು ದೂರಿದರು. ‘ಬಂಗಾರಪ್ಪ ಕುಟುಂಬದವರನ್ನು ಒಂದಾ­ಗುವುದಕ್ಕೆ ಬಿಡದೇ, ಅಕ್ಕ–ತಂಗಿ, ಅಣ್ಣ–ತಮ್ಮ ಹಾಗೂ ಅವರ ತಾಯಿ ಶಕುಂತಲಾ ಅವರನ್ನು ರಾಜ­ಕೀಯಕ್ಕೆ ಕರೆತರಲು ಹೊರಟು, ಅವರ ಮಧ್ಯೆ ವಿಷ ಬೀಜ ಬಿತ್ತೀದ್ದೀರಲ್ಲಾ ಇದು ನ್ಯಾಯವೇ?’ ಎಂದು ಅವರು ದೇವೇ­ಗೌಡ ಅವರನ್ನು ಪ್ರಶ್ನಿಸಿದರು.ಶಿವಮೊಗ್ಗ ಲೋಕಸಭಾ ಚುನಾ­ವಣೆ­ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿ­ಎಸ್‌­ನಿಂದ ಕಣಕ್ಕಿಳಿದಿರುವವರು ಕ್ಷೇತ್ರದ ಗಂಧ–ಗಾಳಿ ಗೊತ್ತಿಲ್ಲದವರು. ಗೀತಾ ಶಿವರಾಜ್ ಕುಮಾರ್ ಬೆಂಗ­ಳೂ­ರಿನ­ವರಾದರೆ, ಮಂಜುನಾಥ ಭಂಡಾರಿ ಮಂಗಳೂರಿನವರು. ರಾಜ್ ಕುಟುಂ­ಬಕ್ಕೆ ಸೇರಿದ ಗೀತಾ, ಮತ್ತೊಮ್ಮೆ ಸೊರಬದ ಮಗಳಾಗು­ವುದಕ್ಕೆ ಸಾಧ್ಯವೇ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.