ಕಾಂಗ್ರೆಸ್–-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ

7
ಶಿವಮೊಗ್ಗ ನಗರಸಭೆ: ಬಿಜೆಪಿ, ಕೆಜೆಪಿಗೆ ಮುಖಭಂಗ

ಕಾಂಗ್ರೆಸ್–-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ

Published:
Updated:

ಶಿವಮೊಗ್ಗ: ನಗರಸಭೆ ಅಧ್ಯಕ್ಷ –-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ, --ಕೆಜೆಪಿ ಮೈತ್ರಿಕೂಟದ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಬುಡಮೇಲಾಗಿದ್ದು, ಅಧಿಕಾರ ವಂಚಿತವಾಗಿವೆ. ಬಿಸಿಎಂ (ಎ) ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಖುರ್ಷಿದ್ ಭಾನು ಹಾಗೂ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿರಿಸಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ರೇಖಾ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರಸಭೆಯ ಇತಿಹಾಸದಲ್ಲಿ ಇಲ್ಲಿಯವರೆಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವೊಬ್ಬ ವ್ಯಕ್ತಿಯೂ ಅಧ್ಯಕ್ಷರಾಗಿರಲಿಲ್ಲ. ಇದೇ ಪ್ರಪ್ರಥಮ ಬಾರಿಗೆ ಖುರ್ಷಿದ್‌ ಭಾನು ಅವರು ಅಧ್ಯಕ್ಷರಾಗಿದ್ದು, ಇತಿಹಾಸ ನಿರ್ಮಾಣವಾಗಿದೆ.ನಾಮಪತ್ರ ಸಲ್ಲಿಕೆ: ಬಿಜೆಪಿ –ಕೆಜೆಪಿ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುನೀತಾ ಅಣ್ಣಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಜೆಪಿಯಿಂದ ಅರ್ಚನಾ ಬಳ್ಳೇಕೆರೆ ಅವರು ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತುವ ಮೂಲಕ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.ಕಾಂಗ್ರೆಸ್-–ಜೆಡಿಎಸ್ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿದ್ದ ಖುರ್ಷಿದ್‌ ಭಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿದ್ದ ರೇಖಾ ಚಂದ್ರಶೇಖರ್ ಅವರ ಪರವಾಗಿ 23 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ-–ಕೆಜೆಪಿ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ ಸುನೀತಾ ಅಣ್ಣಪ್ಪ ಹಾಗೂ ಅರ್ಚನಾ ಬಳ್ಳೇಕೆರೆ ಪರವಾಗಿ ಕೇವಲ 19 ಸದಸ್ಯರು ಕೈ ಎತ್ತಿದ್ದರು.ನಾಲ್ಕು ಮತಗಳ ಅಂತರದಿಂದ ಕಾಂಗ್ರೆಸ್–-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಶಾಲಿಯಾದರು. ಚುನಾವಣಾ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಕುಸುಮಕುಮಾರಿ ಕಾರ್ಯನಿರ್ವಹಿಸದರು.ಬಲಾಬಲ: ನಗರಸಭೆಯಲ್ಲಿ ಒಟ್ಟು 35 ಸದಸ್ಯ ಬಲವಿದೆ. ಅದರಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಕೆಜೆಪಿ 7, ಪಕ್ಷೇತರ 2 ಹಾಗೂ ಎಸ್‌ಡಿಪಿಐ ಪಕ್ಷದ ಒಬ್ಬರು ಸದಸ್ಯರಿದ್ದಾರೆ. ಉಳಿದಂತೆ ಬಿಜೆಪಿಯಲ್ಲಿ ನಾಲ್ಕು ವಿಧಾನ ಪರಿಷತ್ ಸದಸ್ಯರು ಇಬ್ಬರು ಸಂಸತ್ ಸದಸ್ಯರು, ಜೆಡಿಎಸ್‌ನ  ಒಬ್ಬ ಎಂಎಲ್ಎ ಮತ ಚಲಾವಣೆಯ ಹಕ್ಕು ಹೊಂದಿದ್ದರು. ಕಾಂಗ್ರೆಸ್ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್ ನಗರಸಭಾ ಸದಸ್ಯರೂ ಆಗಿರುವ ಕಾರಣ ಅವರಿಗೆ ಕೇವಲ ಒಂದು ಮತ ಚಲಾವಣೆಯ ಹಕ್ಕು ಲಭ್ಯವಾಗಿತ್ತು.ಚುನಾವಣಾ ಪ್ರಕ್ರಿಯೆಯಲ್ಲಿ ಸಂಸತ್ ಸದಸ್ಯರಾದ ಆಯನೂರು ಮಂಜುನಾಥ್, ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸ್ಪೀಕರ್ ಡಿ.ಎಚ್.ಶಂಕರಮೂರ್ತಿ, ಭಾನುಪ್ರಕಾಶ್, ಪಿ.ವಿ.ಕೃಷ್ಣಭಟ್, ಆರ್.ಕೆ.ಸಿದ್ದರಾಮಣ್ಣ, ಶಾಸಕಿ ಶಾರದಾ ಪೂರಾ್ಯನಾಯ್ಕ್, ಕಾಂಗ್ರೆಸ್ ಶಾಸಕ ಪ್ರಸನ್ನಕುಮಾರ್ ಸೇರಿದಂತೆ ಎಲ್ಲಾ ಪಕ್ಷಗಳ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.'ಕೈ' ಕೊಟ್ಟ ಇಬ್ಬರು ಸದಸ್ಯರು

ಕೆಜೆಪಿ ಪಕ್ಷದ 1ನೇ ವಾರ್ಡ್‌ನ ಸದಸ್ಯರಾದ ಬೊಮ್ಮನಕಟ್ಟೆ ಮಂಜುನಾಥ್ ಹಾಗೂ 31ನೇ ವಾರ್ಡ್‌ ಸದಸ್ಯೆ ಶಾಯಿಸ್ತಾ ನ್ಯೂಮಾನ್ ಕೊನೆ ಕ್ಷಣದಲ್ಲಿ ಕೆಜೆಪಿಗೆ ‘ಕೈ’ ಕೊಟ್ಟು ಕಾಂಗ್ರೆಸ್-–ಜೆಡಿಎಸ್ ಮೈತ್ರಿಕೂಟದ ಪರ ನಿಂತಿದ್ದಾರೆ.ಈ ಇಬ್ಬರು ಸದಸ್ಯರು ಚುನಾವಣೆ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಾಲಿನಲ್ಲಿ ಕುಳಿತುಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಪರವಾಗಿ ಕೈ ಎತ್ತಿದರು.ಉಳಿದಂತೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ 5ನೇ ವಾರ್ಡ್‌ ಪಕ್ಷೇತರ ಸದಸ್ಯ ನರಸಿಂಹಮೂರ್ತಿ ಕಾಂಗ್ರೆಸ್-–ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್–-ಜೆಡಿಎಸ್ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವಂತಾಯಿತು.ಕೋಮುವಾದಿ ಪಕ್ಷಕ್ಕೆ ಸೋಲು

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತಾನಾಡಿ, ಕೋಮುವಾದಿ ಪಕ್ಷದ ಪ್ರಯತ್ನ ವಿಫಲವಾಗಿದೆ. ಅವರ ಬಣ್ಣ ಬಯಲಾಗಿದೆ. ಇದರಿಂದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಯಾರು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ ಪಕ್ಷಕ್ಕೆ ಮುಖಭಂಗವಾಗಿದೆ ಎಂದರು.ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ  ಎಂ.ಶ್ರೀಕಾಂತ್‌ ಮಾತನಾಡಿ, ಕೆಜೆಪಿ, ಬಿಜೆಪಿಯಿಂದ ದೂರ ಉಳಿದು ಜ್ಯಾತ್ಯತೀತ ಪಕ್ಷ ಎಂದು ಹೇಳಿಕೊಂಡಿತ್ತು. ಆದ್ದರಿಂದ ಕೆಲ ಸದಸ್ಯರು ಕೆಜೆಪಿಯಲ್ಲಿ ಇದ್ದರು. ಆದರೆ ಕೆಜೆಪಿ, ಬಿಜೆಪಿಯೊಂದಿಗೆ ಗುರುತಿಸಿಕೊಂಡ ಕಾರಣ ಕೆಜೆಪಿ ತೊರೆದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಬಿಜೆಪಿ–ಕೆಜೆಪಿ ಮೈತ್ರಿ ಮುಂದಾಳತ್ವ ವಹಿಸಿದ್ದ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ  ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ಕಡೆಗೆ ಸದಸ್ಯರು ಒಲವು ತೋರಿದ್ದಾರೆ. ಇದು ಸಹಜ; ಕೆಜೆಪಿ ಸದಸ್ಯರು ಸ್ವಾರ್ಥದಿಂದ ಹೀಗೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಯೋಚಿಸಲಾಗುವುದು ಎಂದರು.

–ಬಿ.ವೈರಾಘವೇಂದ್ರ, ಸಂಸತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry