ಬುಧವಾರ, ನವೆಂಬರ್ 20, 2019
21 °C

ಕಾಂಗ್ರೆಸ್ ಅಭ್ಯರ್ಥಿಗೆ ಶಿಕ್ಷಕರ ದಿಗ್ಬಂಧನ

Published:
Updated:

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಮೂರ್ತಿ ನಾಯ್ಕ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಸುಮಾರು 65 ಶಿಕ್ಷಕರು ತಮ್ಮ ಸೇವಾ ಪುಸ್ತಕ ಹಾಗೂ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಶನಿವಾರ ಅವರ ನಿವಾಸದಲ್ಲೇ ದಿಗ್ಬಂಧನ ಹಾಕಿ ಪರಸ್ಪರ ಮಾತಿನ ಚಕಮಕಿ, ಗದ್ದಲ ನಡೆಸಿದ ಘಟನೆ ನಡೆದಿದೆ.ಶಿವಮೂರ್ತಿ ನಾಯ್ಕ ಅವರ ಇಲ್ಲಿನ ವಿನೋಬನಗರ 2ನೇ ಮೇನ್ 14ನೇ ಕ್ರಾಸ್‌ನಲ್ಲಿರುವ ನಿವಾಸಕ್ಕೆ ಆಗಮಿಸಿದ ಶಿಕ್ಷಕರು ತಮ್ಮ ಸೇವಾ ಪುಸ್ತಕ ನೀಡುವಂತೆ ಕೋರಿದರು. ಮಹಿಳಾ ಶಿಕ್ಷಕರು ಮನೆಯ ಒಳಗೆ ಕುಳಿತು ಸೇವಾ ಪುಸ್ತಕಕ್ಕಾಗಿ ಒತ್ತಾಯಿಸಿದರೆ ಪುರುಷ ಶಿಕ್ಷಕರು ಹಾಗೂ ಅವರ ಕುಟುಂಬಸ್ಥರು ಮನೆಯ ಹೊರಗೆ ಇದ್ದರು.`ಸೇವಾಪುಸ್ತಕ ತಮ್ಮ ಬಳಿ ಇಲ್ಲ. ತಮ್ಮ ಒಡೆತನದ 9 ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶದ ಪ್ರಕಾರ ಮುಚ್ಚಿವೆ. ಅದಕ್ಕೆ ಸಂಬಂಧಿಸಿದ ಪ್ರಕರಣ ಹೈಕೋಟ್‌ನಲ್ಲಿದೆ. ಸೇವಾ ಪುಸ್ತಕವನ್ನೂ ಹೈಕೋರ್ಟ್‌ಗೆ ನೀಡಲಾಗಿದೆ' ಎಂದು ಶಿವಮೂರ್ತಿ ನಾಯ್ಕ ಹೇಳಿದರು.`ಹಾಗಿದ್ದರೆ ಪುಸ್ತಕ ಹೈಕೋರ್ಟ್‌ನಲ್ಲಿದೆ ಎಂದು ಲಿಖಿತವಾಗಿ ನೀಡಿ. ಅಲ್ಲಿಂದಾದರೂ ಪಡೆಯುತ್ತೇವೆ ಎಂದ ಶಿಕ್ಷಕರು ಹೇಳಿದಾಗ ಅದೇನು ಮಾಡುತ್ತೀರೋ ಮಾಡಿಕೊಳ್ಳಿ. ನನ್ನ ಬಳಿ ಪುಸ್ತಕ ಇಲ್ಲ ಎಂದು ಹೇಳುತ್ತಾ ತಮ್ಮನ್ನು ಸರಿಸಿಕೊಂಡು ಹೊರಹೋಗಲು ಯತ್ನಿಸಿದರು' ಎಂದು ಅಲ್ಲಿ ಸೇರಿದ್ದ ಶಿಕ್ಷಕರು ತಿಳಿಸಿದರು.ಶಿವಮೂರ್ತಿ ಅವರ ಮಾತಿನಿಂದ ಕೆರಳಿದ ಶಿಕ್ಷಕರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆಗೆ ತಳ್ಳಾಟ, ಪರಸ್ಪರ ದೂಷಣೆ ಜೋರಾಗಿಯೇ ನಡೆಯಿತು. ಯಾರೂ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಶಿವಮೂರ್ತಿ ಅವರ ಸಹೋದರನ ಪುತ್ರ ಸಂದೇಶ್ ನಾಯ್ಕ ಎಲ್ಲ ಪ್ರತಿಭಟನಾಕಾರರನ್ನು ಸರಿಸಿದರು. ಈ ಸಂದರ್ಭ ಎಳೆದಾಟ ನಡೆಯಿತು. ಸಂದೇಶ್ ಅವರ ಕೈಗೆ ತರಚು ಗಾಯಗಳಾಗಿವೆ. ಶಿವಮೂರ್ತಿ ನಾಯ್ಕ ಅವರು ಹೊರಬರುತ್ತಿದ್ದಂತೆಯೇ ಶಿಕ್ಷಕಿಯರು ಆಕ್ರೋಶಭರಿತರಾಗಿ ಧಿಕ್ಕಾರ ಕೂಗಿದರು. ಪಟ್ಟುಬಿಡದ ಶಿವಮೂರ್ತಿ ನಾಯ್ಕ ಅವರು ಬೆಂಬಲಿಗರ ಜತೆ ಕಾರನ್ನೇರಿ ಹೊರ ತೆರಳಿದರು.ರಾಜಕೀಯ ಪ್ರೇರಿತ: ಶಿಕ್ಷಕರ ಹೆಸರಿನಲ್ಲಿ ನನ್ನ ರಾಜಕೀಯ ವಿರೋಧಿಗಳು ಈ ರೀತಿ ತಂತ್ರಗಾರಿಕೆ ಮಾಡಿದ್ದಾರೆ. ಬೆಳಿಗ್ಗೆ ನನ್ನ ಮನೆಗೆ ಬಂದ ಅವರು ಕೊರಳಪಟ್ಟಿಗೆ ಕೈಹಾಕಿದ್ದಾರೆ. ಹಲ್ಲೆ ನಡೆಸಿ ಗಾಜು ಒಡೆದುಹಾಕಿದ್ದಾರೆ. `ಬಿ' ಫಾರಂನ್ನು ಕಸಿದು ಹರಿದುಹಾಕಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಪಕ್ಷದ ಆಂತರಿಕ ಮತ್ತು ಬಾಹ್ಯಶಕ್ತಿಗಳು ಸೇರಿವೆ. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನನ್ನ ಮೇಲೆ ಒಟ್ಟು 90 ಪ್ರಕರಣ ದಾಖಲಿಸಲಾಗಿದೆ. ನನಗೆ `ಬಿ' ಫಾರಂ ಸಿಕ್ಕಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಶಿವಮೂರ್ತಿ ನಾಯ್ಕ ಘಟನೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.35 ವರ್ಷ ಹಳೆಯ ಪರಿಶಿಷ್ಟ ಜಾತಿಯವರ ಆಡಳಿತಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ನನ್ನ ಶಿಕ್ಷಣ ಸಂಸ್ಥೆಗಳನ್ನು 6 ತಿಂಗಳ ಹಿಂದೆ ಮುಚ್ಚಲಾಗಿದೆ. ಸೇವಾ ಪುಸ್ತಕ ಹೈಕೋರ್ಟ್‌ನಲ್ಲಿದೆ. ಪ್ರಕರಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗವೂ ವಿಚಾರಣೆ ನಡೆಸುತ್ತಿದೆ. ಒಟ್ಟಾರೆ ಘಟನೆ ಹಿಂದೆ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಅವರು ನನ್ನ ವಿರುದ್ಧ ಈ ಶಿಕ್ಷಕರನ್ನು ದಾಳವಾಗಿ ಬಳಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಕಾಂಗ್ರೆಸ್‌ನಿಂದ ತಮಗೆ `ಬಿ' ಫಾರಂ ಸಿಕ್ಕಿದೆ. ಏ. 15ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಶಿಕ್ಷಕರಿಗೆ ವೇತನ ನೀಡದಿರುವುದು, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು, ಶಿಕ್ಷಕರಿಗೆ ಉಂಟಾದ ತೊಂದರೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವರು ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು.

ಪ್ರತಿಕ್ರಿಯಿಸಿ (+)