ಕಾಂಗ್ರೆಸ್ ಆಂತರಿಕ ವೈರುಧ್ಯ, ನಗ್ನ ಸತ್ಯ: ತೇಜಸ್ವಿನಿ

7

ಕಾಂಗ್ರೆಸ್ ಆಂತರಿಕ ವೈರುಧ್ಯ, ನಗ್ನ ಸತ್ಯ: ತೇಜಸ್ವಿನಿ

Published:
Updated:
ಕಾಂಗ್ರೆಸ್ ಆಂತರಿಕ ವೈರುಧ್ಯ, ನಗ್ನ ಸತ್ಯ: ತೇಜಸ್ವಿನಿ

ರಾಮನಗರ: ‘ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂಬ ಗಾದೆಯಂತೆ ಕಾಂಗ್ರೆಸ್‌ನಲ್ಲಿ ಇರುವ ಆಂತರಿಕ ವೈರುಧ್ಯ ಎಲ್ಲರಿಗೂ ಗೊತ್ತಿರುವ ವಿಷಯ’ ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ಇಲ್ಲಿ ಅಭಿಪ್ರಾಯಪಟ್ಟರು.ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ಸಿಗರ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 

‘ಚುನಾವಣೆಗಳಲ್ಲಿ ಪಕ್ಷದಿಂದ ಯಾರಾದರೂ ಸ್ಪರ್ಧಿಸಲಿ ಅವರ ಗೆಲುವಿಗೆ ದುಡಿಯಬೇಕು. ಆದರೆ ಕೆಲ ಪ್ರದೇಶಗಳ ಕಾಂಗ್ರೆಸ್ಸಿಗರಲ್ಲಿ ಈ ರೀತಿಯ ನಿಲುವು ಇಲ್ಲ’ ಎಂದು ದೂರಿದರು.

‘ಸಕಾರಾತ್ಮಕ ರಾಜಕಾರಣ ಮಾಡಬೇಕೇ ಹೊರತು ನಕಾರಾತ್ಮಕ ರಾಜಕಾರಣ ಮಾಡಬಾರದು. ನಕಾರಾತ್ಮಕ ರಾಜಕಾರಣ ಮಾಡುವುದರಿಂದ  ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮೇಲೆ ಮತ್ತು ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ವಿಶ್ಲೇಷಿಸಿದರು.

 

‘ಚುನಾವಣಾ ಅಖಾಡದಲ್ಲಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಶಕ್ತಿ ಸಾಮರ್ಥ್ಯವನ್ನು ನೋಡಿ, ಅವರಿಗೆ ಸರಿ ಸಮಾನರಾದ ಸಮರ್ಥ ಅಭ್ಯರ್ಥಿಯನ್ನು ನಮ್ಮ ಪಕ್ಷದಿಂದ ನಿಲ್ಲಿಸಬೇಕು. ಅದನ್ನು ಬಿಟ್ಟು ಅಮಾಯಕರನ್ನು ಬಲಿಷ್ಠರ ಎದುರು ಸ್ಪರ್ಧಿಸುವಂತೆ ಸೂಚಿಸಿ, ಅವರಿಗೆ ಪಕ್ಷದ ಪ್ರಮುಖ ಮುಖಂಡರು ಬೆಂಬಲ ನೀಡದೆ ಇದ್ದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

 

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಿದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದೆ. ಕುಮಾರಸ್ವಾಮಿ ಅವರ ಎದುರು ಸ್ಪರ್ಧಿಸುವ ಸಾಮರ್ಥ್ಯ ಕಾಂಗ್ರೆಸ್‌ನಲ್ಲಿ ನನಗೆ ಮತ್ತು ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಇದೆ ಎಂಬುದು ಪಕ್ಷದ ಸ್ಥಳೀಯ ಕಾರ್ಯಕರ್ತರ ಅನಿಸಿಕೆಯಾಗಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ನಾನು ಸ್ಪರ್ಧಿಸುವುದು ಇಷ್ಟ ಇರಲ್ಲಿಲ್ಲ. ಅಲ್ಲದೆ ನಾನು ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹಾಗೂ ಕುಮಾರಸ್ವಾಮಿ ವಿರುದ್ಧವೂ ಸ್ಪರ್ಧಿಸಿದ್ದೇನೆ.

ಎಷ್ಟು ಬಾರಿ ಅಂತ ಅವರ ಎದುರು ನಾನೇ ಸ್ಪರ್ಧಿಸಲಿ. ಹಾಗಾಗಿ ಈ ಬಾರಿ ಸ್ಪರ್ಧಿಸುವುದಿಲ್ಲ’ ಎಂದು ಹೇಳಿಕೆ ನಿಡಿದ್ದೆ ಎಂದು ಅವರು ಪ್ರತಿಕ್ರಿಯಿಸಿದರು.ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ವಿಶ್ವನಾಥ್ ಅವರ ನಡುವೆ ನಡೆಯುತ್ತಿರುವ ಮಾತಿನ ಸಮರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಬ್ಬರೂ ಪಕ್ಷದ ದೊಡ್ಡ ಲೀಡರ್‌ಗಳು. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಶಕ್ತಿ ಇಬ್ಬರಿಗೂ ಇದೆ. ಇವರಿಬ್ಬರನ್ನೂ ಶಾಂತಿಗೊಳಿಸುವ ಶಕ್ತಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗಿದೆ. ಹಾಗಾಗಿ ಈ ಸಂಬಂಧ ನಾನೇನು ಪ್ರತಿಕ್ರಿಯೆ ನೀಡಲಾರೆ’ ಎಂದರು.

 

ಪಕ್ಷದ ಹಿರಿಯ ಮುಖಂಡರು ಹೀಗೆ ಮಾತಿನ ಸಮರ ನಡೆಸುತ್ತಿದ್ದಾರೆ ಎಂದು ಅವರು ಭಿನ್ನಮತ ಎಂದು ಅರ್ಥೈಸಬಾರದು. ಅದು ಪಕ್ಷದ ಆಂತರಿಕ ವಿಷಯ. ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವೇ ಈ ಆಂತರಿಕೆ ವೈರುಧ್ಯ. ಅದು ಕಾಂಗ್ರೆಸ್‌ನಲ್ಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry