ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ 18 ಕ್ಕೆ

6

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ 18 ಕ್ಕೆ

Published:
Updated:

ಉಡುಪಿ:  `ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ  ಇದೇ 18ರಂದು ಮಂಗಳೂರಿನಲ್ಲಿ ನಡೆಯಲಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ~ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು.ನೆಹರೂ ಮೈದಾನದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೋನಿಯಾ ಅವರು ಭಾಗವಹಿಸುವರು. ಮಂಗಳೂರು ದಸಾರ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಳ್ಳುವರು.ಸಂಜೆ ನಾಲ್ಕು ಗಂಟೆಗೆ ನಡೆಯುವ ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡೂ ಜಿಲ್ಲೆಗಳಿಂದ ಸುಮಾರು ಹದಿನೈದು ಸಾವಿರ ಕಾಂಗ್ಸೆಸ್ ಕಾರ್ಯಕರ್ತರು ಅಧಿವೇಶನದಲ್ಲಿ ಭಾಗವಹಿಸುವರು ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು, ಸಂಸದರು ಅಧಿವೇಶನದಲ್ಲಿ ಭಾಗವಹಿಸುವರು. ಇದರ ಉಸ್ತುವಾರಿಯನ್ನು ಸಂಸದ ಆಸ್ಕರ್ ಫರ್ನಾಂಡಿಸ್ ನೋಡಿಕೊಳ್ಳುವರು ಎಂದು ಅವರು ಮಾಹಿತಿ ನೀಡಿದರು.

ನಗರಸಭೆ, ಪುರಸಭೆ, ಪಾಲಿಕೆ ಚುನಾವಣೆಗಳು ಸಮೀಪಿಸುತ್ತಿವೆ.ಇದಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ತೊರೆದು ಬೇರೊಂದು ಪಕ್ಷ ಕಟ್ಟುವ ನಿರೀಕ್ಷೆ ಇದೆ. ಅದು ನಿಜವಾದರೆ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಆದ್ದರಿಂದ ವಿಧಾನಸಭಾ ಚುನಾವಣೆ ಯಾವ ಸಂದರ್ಭದಲ್ಲಿಯಾದರೂ ಬರಬಹುದು ಎಂದರು.

ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರಿಗೆ ತಿಳಿಸಲಾಗುತ್ತದೆ.ಅವರು ಪ್ರತಿ ಮನೆ ಮನೆಗೂ ತೆರಳಿ ಕೇಂದ್ರದ ಸಾಧನೆ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕೆಂಬುದು ಉದ್ದೇಶವಾಗಿದೆ ಎಂದು ಪೂಜಾರಿ ಹೇಳಿದರು.ಕಳೆದ ಬಾರಿ ದಸರಾ ಕಾರ್ಯಕ್ರಮದಲ್ಲಿ ವಿಧವೆಯರಿಗೆ ಅರಿಶಿನ, ಕುಂಕುಮ, ಬಳೆ ನೀಡಲಾಗಿತ್ತು.

ಆ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸುವ ಇಚ್ಛೆ ಇದೆ. ಕಳೆದ ವರ್ಷ ಈ ಸಂಪ್ರದಾಯವನ್ನು ಆರಂಭಿಸಿದ ನಂತರ ಕೆಲವು ಮಠಾಧೀಶರೂ ಇದನ್ನು ಅನುಕರಣೆ ಮಾಡುತ್ತಿದ್ದಾರೆ. ಇದೊಂದು ಒಳ್ಳೆಯ ಕೆಲಸ ಎಂದು ಅವರು ಹೇಳಿದರು.ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಸಂತ ವಿ ಸಾಲಿಯಾನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಮುಖಂಡರಾದ ಎಂ.ಎ. ಗಫೂರ್, ಕೇಶವ ಕೋಟ್ಯಾನ್, ಕೃಷ್ಣಮೂರ್ತಿ ಆಚಾರ್ಯ, ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry