ಭಾನುವಾರ, ಏಪ್ರಿಲ್ 18, 2021
32 °C

ಕಾಂಗ್ರೆಸ್ ಗೆಲ್ಲಿಸಲು ಹೋರಾಡೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮುಖ್ಯವಲ್ಲ. ಆ ಬಗ್ಗೆ ಚರ್ಚಿಸಲು ಇದು ಸಮಯ ಕೂಡ ಅಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನ ಹೋರಾಟ ನಡೆಸಬೇಕು. ನಂತರ ಯಾರಿಗೆ ಯಾವ ಸ್ಥಾನ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ~.

ಹೀಗೆ ಹೇಳಿದ್ದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ.ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರದೇಶ ಕಾಂಗ್ರೆಸ್ ಆಯೋಜಿಸಿದ್ದ ಸಮಾರಂಭದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. `ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಯಾವುದೇ ಭಯವಿಲ್ಲ. ನಮಗೆ ಅಗತ್ಯ ಸಂಖ್ಯಾಬಲವಿದೆ. ಅಧಿವೇಶನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಲಿವೆ. ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂಬಂಧ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಮಂಡಿಸಲಾಗುವುದು~ ಎಂದು ಖರ್ಗೆ ವಿವರಿಸಿದರು.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಇಂದಿರಾ ಗಾಂಧಿ ಬಡವರ ನಾಯಕಿಯಾಗಿದ್ದವರು. ಬಡವರ ಏಳಿಗೆಗಾಗಿ ಅವರು ರೂಪಿಸಿದ 20 ಅಂಶಗಳ ಕಾರ್ಯಕ್ರಮ ಇಂದಿಗೂ ಪ್ರಸ್ತುತ. ಬಡವರ ಎಷ್ಟೋ ಮನೆಗಳಲ್ಲಿ ಇಂದಿಗೂ ಇಂದಿರಾ ಅವರನ್ನು ಪೂಜಿಸಲಾಗುತ್ತಿದೆ ಎಂದರು.ಬಡವರಿಗೂ ಬ್ಯಾಂಕಿನ ಬಾಗಿಲು ತೆರೆಯುವಂತೆ ಮಾಡಲು ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಇದಕ್ಕೆ ಅಂದು ತೀವ್ರ ಪ್ರತಿರೋಧ, ಟೀಕೆಗಳು ಎದುರಾದವು. ಆದರೂ ಅವರು ಹಿಂದೆ ಸರಿಯಲಿಲ್ಲ. ಅವರ ಅಧಿಕಾರಾವಧಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಸಿಗದಂತಾಗಿದೆ ಎಂದು ಅವರು ಟೀಕಿಸಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇಶಕ್ಕೆ ಭದ್ರ ಆರ್ಥಿಕ ಬುನಾದಿ ಹಾಕಿದವರು ಇಂದಿರಾ ಗಾಂಧಿ. ಬಡವರಿಗೆ ಗೌರವದ ಬದುಕು ಕಲ್ಪಿಸಿಕೊಡಲು ಅವರು ಕೈಗೊಂಡ ಕಾರ್ಯಕ್ರಮಗಳು ಇಂದಿಗೂ ಉಪಯುಕ್ತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪಕ್ಷದ ಮುಖಂಡರಾದ ಸಿ.ಕೆ.ಜಾಫರ್ ಷರೀಫ್, ಮೋಟಮ್ಮ, ವೀರಣ್ಣ ಮತ್ತೀಕಟ್ಟಿ, ದಿನೇಶ ಗುಂಡೂರಾವ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಮಹಿಳೆಯರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಂದಿ ಮಹಿಳೆಯರಿಗೆ `ಇಂದಿರಾ ಗಾಂಧಿ ವಿಶಿಷ್ಟ ಸೇವಾ ಪ್ರಶಸ್ತಿ~ ನೀಡಿ ಗೌರವಿಸಲಾಯಿತು. `ಪ್ರಜಾವಾಣಿ~ಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳಾ, ಪ್ರಸೂತಿ ತಜ್ಞೆ `ಸಾವಿರ ಮಕ್ಕಳ ತಾಯಿ~ ನರಸಮ್ಮ, ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕಿ ಡಾ.ಆರ್.ಸುನಂದಮ್ಮ, ವಾಲಿಬಾಲ್ ಕ್ರೀಡಾಪಟು ಎನ್.ಶ್ವೇತಾ, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಡಾ. ಕುಸುಮ ಎನ್.ಭಟ್ಟ ಅವರಿಗೆ ಶಾಲು, ತಲಾ 10 ಸಾವಿರ ರೂಪಾಯಿ ನಗದು ನೀಡಿ ಸನ್ಮಾನಿಸಲಾಯಿತು.

ಆಸೆ ತಪ್ಪೇನಲ್ಲ: ಮಲ್ಲಿಕಾರ್ಜುನ ಖರ್ಗೆ

ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಅದು ತಪ್ಪೆಂದು ಹೇಳುವುದಿಲ್ಲ. ಆದರೆ ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್‌ನವರೇ ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಮಾತ್ರ ಖಚಿತ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.