ಭಾನುವಾರ, ಆಗಸ್ಟ್ 25, 2019
26 °C
ಸ್ವಾತಂತ್ರ್ಯದ ತೊರೆಗಳು 2

ಕಾಂಗ್ರೆಸ್ ಚಳವಳಿಯ ಕಾವು

Published:
Updated:

ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದಲೇ ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಆಂದೋಲನದ ಚಟುವಟಿಕೆಗಳು ಗರಿಗೆದರಿದರೂ ಕಾಂಗ್ರೆಸ್ ಹೆಚ್ಚಿನ ಆಸ್ಥೆ ವಹಿಸಲು ಮುಂದಾಗಿರಲಿಲ್ಲ. ಇದಕ್ಕೆ ಮೈಸೂರು ಭಾಗದಲ್ಲಿ ದೇಶಿ ರಾಜರ ಆಳ್ವಿಕೆ ಇದ್ದದ್ದೇ ಕಾರಣ.ಸ್ವಯಂ ಪ್ರೇರಿತರಾಗಿ ಹಲವರು ಚಳವಳಿಯಲ್ಲಿ ತೊಡಗಿಕೊಂಡು ಕಾಂಗ್ರೆಸ್ ಅಧಿವೇಶನ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ 1921ರಲ್ಲಿ ಮೈಸೂರು ಸಂಸ್ಥಾನದಲ್ಲಿ ಘಟಕವೊಂದನ್ನು ಸ್ಥಾಪಿಸಿತು. ಆ ಬಳಿಕ ಕಾಂಗ್ರೆಸ್ ವಿಚಾರಧಾರೆಯನ್ನು ಒಪ್ಪಿಕೊಂಡು ಅನೇಕ ಸ್ವಯಂ ಸೇವಕರು ಅಕ್ಕಪಕ್ಕದ ಸ್ಥಳ (ಮೈಸೂರು ಪ್ರಾಂತ್ಯ ಹೊರತುಪಡಿಸಿ)ಗಳಲ್ಲಿ ಸಂಘಟಿಸುತ್ತಿದ್ದ ಚಳವಳಿಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ತೆರಳುತ್ತಿದ್ದರು. ಬೆಂಗಳೂರು ಯುವಕರ ದಂಡು 1923ರಲ್ಲಿ ನಾಗ್ಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿದ್ದರು.ಆ ವೇಳೆಗಾಗಲೇ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ 1920ರ ಆಸುಪಾಸಿನಲ್ಲಿ ಅಸಹಕಾರ ಆಂದೋಲನ, 1930-34ರ ನಡುವೆ ಕಾನೂನು ಭಂಗ ಚಳುವಳಿಗಳನ್ನು ಸಂಘಟಿಸಿ ಬ್ರಿಟಿಷ್ ಆಳ್ವಿಕೆಗೆ ಎಚ್ಚರಿಕೆಯ ಗಂಟೆ ಮೊಳಗಿಸಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಚಳವಳಿ ನಡೆಸಿತು.ರಾಷ್ಟ್ರೀಯತೆಗೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳು ದೇಶದಾದ್ಯಂತ ಸಂಘಟಿಸುತ್ತಿದ್ದವು. ಸ್ವಾಮಿ ವಿವೇಕಾನಂದ, ರಾಜಾರಾಂ ಮೋಹನ್ ರಾಯ್, ಆನಿಬೆಸೆಂಟ್ ಮೊದಲಾದ ಮೇರು ವ್ಯಕ್ತಿಗಳ ಮುಖಂಡತ್ವದಲ್ಲಿ ನಡೆಯುತ್ತಿದ್ದ ಸಾಮಾಜಿಕ ಚಟುವಟಿಕೆಗಳು ಭಾರತೀಯರನ್ನು ಎಚ್ಚರಗೊಳಿಸುವುದರ ಜೊತೆಗೆ ಸ್ವಾತಂತ್ರ್ಯದ ಅಭಿಲಾಷೆಯನ್ನು ವ್ಯಕ್ತಪಡಿಸಲು ಹಾದಿ ಮಾಡಿಕೊಡುತ್ತಿದ್ದವು.ರಾಮಕೃಷ್ಣ ಆಶ್ರಮ, ಬ್ರಹ್ಮಸಮಾಜ, ಥಿಯೋಸಾಫಿಕಲ್ ಸೊಸೈಟಿ, ಆರ್ಯ ಸಮಾಜ ಮೊದಲಾದ ಸಮಾಜ ಸೇವಾ ಸಂಸ್ಥೆಗಳು ಭಾರತೀಯರಲ್ಲಿ ಶಿಕ್ಷಣವನ್ನು ಹರಡಲು ಜೊತೆಗೆ ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಲು ಪ್ರೆರೇಪಿಸುತ್ತಿದ್ದವು.  ಸಾಮಾಜಿಕ ಕ್ಷೇತ್ರದಲ್ಲಿನ ಬದಲಾವಣೆಗಳಿಗಾಗಿ ಈ ಸಂಸ್ಥೆಗಳು ಅನುಷ್ಠಾನಗೊಳಿಸುತ್ತಿದ್ದ ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿತ್ತು. ಅದೇ ರೀತಿ ಭಾರತದ ಸ್ವಾತಂತ್ರ್ಯಕ್ಕಾಗಿ ನೇರವಾಗಿ ಹೋರಾಟಕ್ಕಿಳಿದಿದ್ದ ಕಾಂಗ್ರೆಸ್ ಸಂಸ್ಥೆಗೆ ಸಾಮಾಜಿಕ ಪರಿವರ್ತನಾ ಸಂಸ್ಥೆಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದವು.ಜನ ಸಮುದಾಯ ಆಡಳಿತದಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಿಕೊಡುವ ಚುನಾವಣಾ ಪದ್ಧತಿಯನ್ನು ಆರಂಭಿಸುವ ಮೂಲಕ ಜವಾಬ್ದಾರಿಯುತ ಸರ್ಕಾರ ಸ್ಥಾಪನೆಗೆ ಹಲವು ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. ಕಾಂಗ್ರೆಸ್ ಇದಕ್ಕೆ ಹೆಚ್ಚಿನ ಒತ್ತು ನೀಡಿ, ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತು. ರಚನಾತ್ಮಕ ಚಟುವಟಿಕೆಗಳನ್ನು ಮಾತ್ರ ನಿರ್ವಹಿಸಲು ನಿರ್ದೇಶನ ಪಡೆದಿದ್ದ ಮೈಸೂರು ಕಾಂಗ್ರೆಸ್‌ಗೆ ಚುನಾವಣೆ ಹೊಸದಾಗಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್ ಚುನಾವಣೆಗಳಲ್ಲಿ ಬಲ ತಂದುಕೊಂಡು ಜನತೆಯ ಒಳಿತಿಗಾಗಿ ಸರ್ಕಾರವನ್ನು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸತೊಡಗಿತು.ದೇಶದ ಹಿರಿಯ ಮುತ್ಸದ್ಧಿಗಳು ಬೆಂಗಳೂರಿಗೆ ಆಗಮಿಸಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣ ಮಾಡಿ ರಾಷ್ಟ್ರೀಯತೆಗೆ ಒತ್ತು ನೀಡುವುದಲ್ಲದೇ ಸ್ವಾತಂತ್ರ್ಯದ ಹಕ್ಕುಗಳನ್ನು ಪ್ರತಿಪಾದಿಸತೊಡಗಿದರು. ಅದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಗಣಪತಿ ಗಲಾಟೆ ಪ್ರಕರಣಗಳಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬಂದಿತು. ಖಾದಿ ಪ್ರಚಾರ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಕಾರ್ಮಿಕರಿಗೆ ನ್ಯಾಯಯುತ ವೇತನ ಮೊದಲಾದ ವಿಚಾರಗಳಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿತು.ಕಾಂಗ್ರೆಸ್ ಮೈಸೂರು ಪ್ರಾಂತ್ಯದಲ್ಲಿ ಸಕ್ರಿಯವಾದ ಮೇಲೆ ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿಯೂ ಆಚರಿಸಿತು. ಬೆಂಗಳೂರು ಪ್ರಾಂತ್ಯದ ಮುಖ್ಯ ನಗರವಾಗಿ ಎಲ್ಲಾ ಚಟುವಟಿಕೆಗಳ ಕೇಂದ್ರ ಸ್ಥಳವಾಯಿತು. ಸತ್ಯಾಗ್ರಹ ಎಂಬ ಆಯುಧ ದಿನದಿಂದ ದಿನಕ್ಕೆ ಪ್ರಬಲವಾಗುತ್ತಾ ಹೋಯಿತು. ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಆರಿಸಿ ಬಂದು, ಜನತೆಯ ಬೇಕು-ಬೇಡಗಳನ್ನು ಆಡಳಿತದ ಮುಂದೆ ಇಡತೊಡಗಿದರು. ಈ ಸಂದರ್ಭದಲ್ಲಿ ಚಳವಳಿಗಳೂ ಬಲಗೊಳ್ಳುತ್ತಾ ಹೋದವು. ಸ್ವದೇಶಿ ಚಳವಳಿಯಿಂದಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಜಾಗೃತಿ ವಿಷಯಗಳಿಗೆ ಪ್ರಬಲವಾದ ತಳಹದಿ ದೊರೆಯಿತು. ಬೆಂಗಳೂರಿನ ಹಲವೆಡೆ ಸ್ವದೇಶಿ ಅಂಗಡಿಗಳು ಶುರುವಾದವು. ವಿದೇಶಿ ವಸ್ತುಗಳನ್ನು ಧಿಕ್ಕರಿಸಿ ಸ್ಥಳೀಯ ವಸ್ತುಗಳನ್ನು ಉಪಯೋಗಿಸುವ ಮೂಲಕ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಸೆಡ್ಡುಹೊಡೆಯುವ ಚಟುವಟಿಕೆಗಳು ನಿರಂತರವಾಗಿ ಸಾಗಿದವು. 1935ರಲ್ಲಿ ಕಾಂಗ್ರೆಸ್‌ನ ಸುವರ್ಣ ಮಹೋತ್ಸವ ಆಚರಣೆ ಬೆಂಗಳೂರಿನಲ್ಲಿ ಅದ್ದೂರಿಯಿಂದ ಜರುಗಿತು. ಈ ಆಚರಣೆಯ ಸಂದರ್ಭದಲ್ಲಿ ಬಾಪೂಜಿಯವರ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಲಾಯಿತು. ಇದರಲ್ಲಿ ನಗರದ ಯುವ ಸಮೂಹ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಚಳುವಳಿಗೆ ಇನ್ನೊಂದು ಆಯಾಮ ಸಿಕ್ಕಿತು.

 

Post Comments (+)