ಮಂಗಳವಾರ, ನವೆಂಬರ್ 19, 2019
23 °C

ಕಾಂಗ್ರೆಸ್, ಜೆಡಿಎಸ್ ಆಟ-ಮೇಲಾಟ

Published:
Updated:

ಅರಕಲಗೂಡು: ಜೀವನದಿ ಹೇಮಾವತಿ ಹಾಗೂ ಕಾವೇರಿ ನದಿ ಹರಿಯುವ ಅರೆಮಲೆನಾಡು ಪ್ರದೇಶ ವಾದ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಚತುಷ್ಕೋನ ಸ್ಪರ್ಧೆಗೆ ಅಖಾಡ ಸಿದ್ಧಗೊಂಡಿದೆ.ಕಳೆದ ಎರಡೂವರೆ ದಶಕಗಳಿಂದ ಪ್ರಬಲ ಎದುರಾಳಿಗಳಾಗಿ ಅವರೊಮ್ಮೆ, ಇವರೊಮ್ಮೆ ಎಂಬಂತೆ ಆಯ್ಕೆಯಾಗುತ್ತಿದ್ದ ಹಾಲಿ ಶಾಸಕ ಕಾಂಗ್ರೆಸ್‌ನ ಎ.ಮಂಜು ಹಾಗೂ ಮಾಜಿ ಶಾಸಕ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅವರಿಗೆ ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಎಚ್.ಯೋಗಾರಮೇಶ್ ಮತ್ತು ಎಸ್. ಪುಟ್ಟಸ್ವಾಮಿ ಸೆಡ್ಡು ಹೊಡೆದಿದ್ದಾರೆ.ಕ್ಷೇತ್ರದಿಂದ ಜಿ.ಎ.ತಿಮ್ಮಪ್ಪಗೌಡ ಎರಡು ಬಾರಿ, ಪುಟ್ಟೇಗೌಡ ಒಂದು ಬಾರಿ,ಮಾಜಿ ಸಚಿವ ಎಚ್.ಎನ್. ನಂಜೇಗೌಡ ಎರಡು ಬಾರಿ ಚುನಾಯಿತರಾಗಿದ್ದರು.ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಕೆ.ಬಿ.ಮಲ್ಲಪ್ಪ 1978ರಿಂದ 1985ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 1989 ಮತ್ತು 94ರಲ್ಲಿ ಎರಡು ಬಾರಿ ಎ.ಟಿ. ರಾಮಸ್ವಾಮಿ ಗೆಲುವು ಸಾಧಿಸಿದ್ದರೆ, 1999ರಲ್ಲಿ ಎ. ಮಂಜು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಯಾದರು. 2004ರಲ್ಲಿ ಪುನಃ ಎ.ಟಿ. ರಾಮಸ್ವಾಮಿ ಚುನಾಯಿತರಾದರೆ 2008ರಲ್ಲಿ ಎ.ಮಂಜು ಪುನರಾಯ್ಕೆಗೊಂಡರು. ಇದು ಇಲ್ಲಿನ ಈವರೆಗಿನ ರಾಜಕೀಯ ಚಿತ್ರಣ. ಎ.ಮಂಜು ಒಂದು ಬಾರಿ ಬಿಜೆಪಿ ಯಿಂದ ಗೆಲುವು ಸಾಧಿಸಿದ್ದು ಬಿಟ್ಟರೆ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದ್ದೇ ಆಟ- ಮೇಲಾಟ.ಕ್ಷೇತ್ರ ವಿಂಗಡಣೆ ವೇಳೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯೂ ಸೇರ್ಪಡೆಗೊಂಡಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಈ ಬಾರಿ ಸಂಪೂರ್ಣ ಬದಲಾಗಿದೆ. ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿ ಗಳಾದ ಹಾಲಿ ಶಾಸಕ ಎ.ಮಂಜು ಅವರಿಗೆ ಕಾಂಗ್ರೆಸ್‌ನಿಂದ ಮತ್ತೆ ಟಿಕೆಟ್ ದೊರೆತಿದ್ದರೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.ಸಾರಿಗೆ ಸಂಸ್ಥೆ ನೌಕರರಾಗಿದ್ದ ಎಚ್.ಯೋಗಾ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪೊಟ್ಯಾಟೊ ಕ್ಲಬ್ ಮೂಲಕ ತಾಲ್ಲೂಕಿನಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ. ಈ ಮೂಲಕ ಚುನಾವಣೆಗೆ ವೇದಿಕೆ ಸಿದ್ಧಪಡಿಸಿ ಕೊಂಡಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಖಾಡಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.ಹಳ್ಳಿ ಮೈಸೂರು ಹೋಬಳಿ ಅಣ್ಣೇಚಾಕನಹಳ್ಳಿಯ ನಿವೃತ್ತ ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಕೆಜೆಪಿ ಸೇರಿರುವುದರಿಂದ ಸ್ಪರ್ಧೆ ಕುತೂಹಲ ಕೆರಳಿಸಿದೆ.ಸಿದ್ದರಾಮಯ್ಯ ನಿಕಟವರ್ತಿಯಾಗಿದ್ದ ಪುಟ್ಟಸ್ವಾಮಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿಯೇ ತಾಲ್ಲೂಕಿಗೆ ಬಂದಿದ್ದರು. ಕಳೆದ ಸುಮಾರು ಒಂದು ವರ್ಷದಿಂದ ಚುನಾವಣೆಗೆ ಸಿದ್ಧತೆ ಮಾಡಿಕೊಂ ಡಿದ್ದರು. ತಾಲ್ಲೂಕು ಕಾಂಗ್ರೆಸ್‌ನ ಭಾರಿ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರ ಬೆಂಬಲದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸಾಕಷ್ಟು ಹೋರಾಟದ ಬಳಿಕವೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ವಿಫಲರಾದ ಕಾರಣ ಈಗ ಅವರು ಕೆಜೆಪಿಗೆ ವಾಲಿ, ಅಲ್ಲಿಂದ ಟಿಕೆಟ್ ಪಡೆದಿದ್ದಾರೆ.ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎಂಬ ಕಾಂಗ್ರೆಸ್ ಸೂತ್ರದ ಅನ್ವಯ ಎ.ಮಂಜು ಟಿಕೆಟ್ ಪಡೆದುಕೊಂಡಿದ್ದಾರೆ. ಇವರ ಜತೆಗೆ ಬಿಜೆಪಿ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಸಹ ಕಣಕ್ಕಿಳಿಯಲಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಹಿಂದಿನ ಎಲ್ಲ ಚುನವಾಣೆ ಗಳಿಗಿಂತಲೂ ಈ ಬಾರಿಯ ಚುನಾವಣೆ ಹೆಚ್ಚಿನ ರಂಗು ಪಡೆದುಕೊಂಡು ತೀವ್ರ ಕುತೂಹಲಕ್ಕೂ ಕಾರಣ ವಾಗಿದೆ. ಜಯ ಮಾಲೆ ಯಾರಿಗೆ ಎಂಬುದನ್ನು ಮತದಾರ ನಿರ್ಧರಿಸಬೇಕಿದೆ.`ನಾನು ಪಕ್ಷೇತರ ಅಭ್ಯರ್ಥಿ'

ಪ್ರಜಾ ಪ್ರಗತಿರಂಗದ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ಈಚೆಗೆ ಬೆಂಗಳೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡಿದರು. ಅದರಲ್ಲಿ `ಅರಕಲಗೂಡಿನಿಂದ ಯೋಗಾ ರಮೇಶ್ ನಮ್ಮ ಅಭ್ಯರ್ಥಿ' ಎಂದು ಹೇಳಿದಿದ್ದರು. ಆದರೆ ಯೋಗಾ ರಮೇಶ್ ಇದನ್ನು ನಿರಾಕರಿಸಿದ್ದು `ನಾನು ಸ್ವತಂತ್ರ ಅಭ್ಯರ್ಥಿ' ಎಂದು ಸ್ಪಷ್ಟನೆ ನೀಡಿದ್ದಾರೆ.`ಅವರು ಏನು ಘೋಷಣೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಜತೆಗೆ ನಾನು ಮಾತನಾಡಿಲ್ಲ. ನಾನು ಸ್ವತಂತ್ರ ಅಭ್ಯರ್ಥಿ' ಎಂದು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)