ಮಂಗಳವಾರ, ನವೆಂಬರ್ 12, 2019
28 °C

ಕಾಂಗ್ರೆಸ್, ಜೆಡಿಎಸ್ ಜಿದ್ದಾಜಿದ್ದಿ

Published:
Updated:

ಚನ್ನರಾಯಪಟ್ಟಣ: ಜಿಲ್ಲೆಯ ರಾಜಕೀಯ ಇತಿಹಾಸ ದಲ್ಲಿ ಶ್ರವಣಬೆಳಗೊಳ ಕ್ಷೇತ್ರಕ್ಕೆ ಮಹತ್ವದ ಸ್ಥಾನವಿದೆ.

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶ್ರವಣಬೆಳಗೊಳದ ಕ್ಷೇತ್ರದಿಂದ ಕೆಎಂಪಿಪಿ ಅಭ್ಯರ್ಥಿ ಎನ್.ಜಿ. ನರಸಿಂಹೇಗೌಡ ಆಯ್ಕೆಯಾಗಿದ್ದರು. ಆ ನಂತರ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಎಸ್. ಶಿವಪ್ಪ ಆಯ್ಕೆಯಾಗಿ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಉತ್ತಮ ಕೆಲಸ ಮಾಡಿದ್ದರು.ಕಾಂಗ್ರೆಸ್‌ನ ಕೆ.ಲಕ್ಕಪ್ಪ ಒಂದು ಬಾರಿ ಸಚಿವರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ನಾಯಕರಾಗಿದ್ದ ಎಚ್.ಸಿ. ಶ್ರೀಕಂಠಯ್ಯ 1972, 1978,1983 ಹಾಗೂ 1999ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ, ಅರಣ್ಯ, ಸಹಕಾರ, ಸಣ್ಣ ನೀರಾವರಿ, ಲೋಕೋಪಯೋಗಿ, ಪೌರಾಡಳಿತ, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿ ಕ್ಷೇತ್ರಕ್ಕೆ ಹೆಸರು ತಂದುಕೊಟ್ಟಿದ್ದರು.ಆ ನಂತರ ಪುಟ್ಟೇಗೌಡರು ಈ ಕ್ಷೇತ್ರವನ್ನು ಪ್ರತಿನಿಧಿ ಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಇವರು ಈಗ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಪಕ್ಷ ಜಿಲ್ಲೆಯ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಈ ಕ್ಷೇತ್ರದ ಬಗ್ಗೆ ಸುಳಿವು ನೀಡಿಲ್ಲ. ಈ ಪ್ರಸಂಗ ಸಾಕಷ್ಟು ಕುತೂಹಲ ಉಂಟುಮಾಡಿದೆ.ಈ ಬಾರಿ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಜೆಡಿಎಸ್‌ನಿಂದ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಅಭ್ಯರ್ಥಿ ಎಂಬುದು ಕಳೆದ ಚುನಾವಣೆ ಸಂದರ್ಭದಲ್ಲೇ ಘೋಷಣೆಯಾಗಿತ್ತು.  ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಬಾಲಕೃಷ್ಣ ಕ್ಷೇತ್ರದಲ್ಲಿ ಸುತ್ತಾಡಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.ಆದರೆ, ಕಾಂಗ್ರೆಸ್ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸಿ ಕೊಂಡಿದೆ. ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಬೇಕು ಎಂದು ತಾಲ್ಲೂಕು ಕಾಂಗ್ರೆಸ್ ನಾಯಕ ಎಚ್.ಎಸ್. ವಿಜಯಕುಮಾರ್, ಎಂ.ಎ. ಗೋಪಾಲಸ್ವಾಮಿ, ಕಬ್ಬಳಿ ರಂಗೇಗೌಡ, ಸಿ.ವಿ. ರಾಜಪ್ಪ, ಸಿ.ಎನ್. ಚಂದ್ರೇಗೌಡ, ಬಿ.ಕೆ.ನಾಗರಾಜು ಮುಂತಾದವರು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. ಸಿ.ಎಸ್.ಪುಟ್ಟೇಗೌಡ ಪಕ್ಷಕ್ಕೆ ಬರಲಿ, ಆದರೆ ಅವರಿಗೆ ಟಿಕೆಟ್ ನೀಡಬಾರದು, ಕನಿಷ್ಠ ಮೂರು ವರ್ಷ ಅವರು ಪಕ್ಷಕ್ಕೆ ದುಡಿಯಲಿ ಎಂಬುದು ಅವರ ಒತ್ತಾಯ.ಎಂ.ಎ.ಗೋಪಾಲಸ್ವಾಮಿ ಬೆಂಬಲಿಗರು ಕಳೆದವಾರ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಟಿಕೆಟ್ ಸಿಗದಿದ್ದರೆ ಅವರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಪುತ್ರ ಎಚ್.ಎಸ್.ವಿಜಯಕುಮಾರ್ ಸಹ ಟಿಕೆಟ್ ಪಡೆಯುವ ಕಸರತ್ತು ನಡೆಸಿದ್ದಾರೆ. 2004ರ ಚುನಾವಣೆಯಲ್ಲಿ ಇವರು ಸೋತಿದ್ದರು.ಸಿ.ಎಸ್.ಪುಟ್ಟೇಗೌಡ ಐದು ಬಾರಿ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದಾರೆ. ಕಾಂಗ್ರೆಸ್ ವರಿಷ್ಠರ ಒಲವು ಇವರ ಕಡೆ ಇದೆ ಎಂದು ಅವರ ಆಪ್ತ ವಲಯದವರು ನುಡಿಯುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಎಚ್‌ಡಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಎಚ್‌ಎಸ್‌ಎಸ್‌ಕೆ ಅಧ್ಯಕ್ಷ, ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಸಹ ಮಾಡುತ್ತಿದ್ದಾರೆ.2007ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ ಜೆಡಿಎಸ್ 20  ಸ್ಥಾನಗಳಿಸಿದ್ದರೆ, ಕಾಂಗ್ರೆಸ್ ಕೇವಲ  3 ಸ್ಥಾನಗಳಿಸಿತ್ತು. 2012ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನ ಗಳಿಸಿದೆ. ಬಾಲಕೃಷ್ಣ ಅವರ ಪ್ರಚಾರದ ಹೊರತಾಗಿಯೂ ಇಲ್ಲಿ ಕಾಂಗ್ರೆಸ್ ತನ್ನ ಬಲ ವೃದ್ಧಿಸಿಕೊಂಡಿದೆ.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುಧಾಮಣಿ ಅವರ ಪುತ್ರ ಜಿ.ಬಿ. ಅರ್ಜುನ್‌ಕುಮಾರ್ ಪಕ್ಷೇತರ ರಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ. ಬಿಜೆಪಿ, ಜೆಡಿಯು ಮತ್ತು ಕೆಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಾರಿಯ ಚುನಾಣೆಯಲ್ಲಿ ಕ್ಷೇತ್ರದಲ್ಲಿ  ಕಾಂಗ್ರೆಸ್, ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆಯುವ ಲಕ್ಷಣಗಳಿವೆ.

ಪ್ರತಿಕ್ರಿಯಿಸಿ (+)