ಭಾನುವಾರ, ಅಕ್ಟೋಬರ್ 20, 2019
22 °C

ಕಾಂಗ್ರೆಸ್-ಟಿಎಂಸಿ ಮೈತ್ರಿ ಬಿಕ್ಕಟ್ಟಿನಲ್ಲಿ

Published:
Updated:
ಕಾಂಗ್ರೆಸ್-ಟಿಎಂಸಿ ಮೈತ್ರಿ ಬಿಕ್ಕಟ್ಟಿನಲ್ಲಿ

ಕೋಲ್ಕತ್ತ/ ನವದೆಹಲಿ (ಪಿಟಿಐ/ಐಎಎನ್‌ಎಸ್): `ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಯಾವುದೇ ಕ್ಷಣದಲ್ಲಾದರೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೈತ್ರಿಯನ್ನು ಕಡಿದುಕೊಳ್ಳಬಹುದು~ ಎಂದು ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಶನಿವಾರ ಸವಾಲು ಎಸೆದಿದ್ದಾರೆ.`ಟಿಎಂಸಿ ಸಖ್ಯ ತೊರೆಯುವ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಸ್ವತಂತ್ರ. ಒಂದು ವೇಳೆ ಸಿಪಿಎಂ ಜೊತೆ ಕೈಜೋಡಿಸಲು ಅದು ಮುಂದಾದರೆ ಅದಕ್ಕೂ ನಮ್ಮದೇನೂ ಅಭ್ಯಂತರ ಇಲ್ಲ. ಯಾವುದೇ ಸಂಕೋಚವಿಲ್ಲದೆ ಕಾಂಗ್ರೆಸ್ ಪಕ್ಷ ಟಿಎಂಸಿಯ ಸಖ್ಯ ತೊರೆಯಲಿ. ಅದಕ್ಕೆ ಸದಾ ನಮ್ಮ ಬಾಗಿಲು ತೆರೆದಿರುತ್ತದೆ~ ಎಂದು ಅವರು ಕುಹಕವಾಡಿದ್ದಾರೆ.ಮಮತಾ ಅವರ ಈ ಹೇಳಿಕೆ ಹೊರಬಿದ್ದ ತಕ್ಷಣ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, ನಾವು ಮಮತಾ ಅವರ ಆದೇಶ ಪಾಲಿಸುವ ಸಲುವಾಗಿ ಇಲ್ಲಿ ಇಲ್ಲ, ಸಂಪುಟದಲ್ಲಿ ಮುಂದುವರಿಯುತ್ತೇವೆ ಎಂದು ಹೇಳಿದೆ.ಮಮತಾ ಅವರು ಆಕ್ರಮಣಕಾರಿಯಾಗಿ ಮತ್ತು ಪ್ರಚೋದನಕಾರಿಯಾಗಿ ವರ್ತಿಸಬಾರದು ಎಂದು ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪ್ರತಿಕ್ರಿಯಿಸಿದೆ.ಈ ಬೆಳವಣಿಗೆಯಿಂದ, ಕೇಂದ್ರದ ಯುಪಿಎ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಬಾಂಧವ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಬಿರುಕು ಮತ್ತಷ್ಟು ದೊಡ್ಡದಾಗುವ ಲಕ್ಷಣ ಇದೆ.ಆಶೀರ್ವಾದದ ಬಲ: `ಮಮತಾ ಕೃಪಾಕಟಾಕ್ಷ ಅಥವಾ ಆಶೀರ್ವಾದದಿಂದ ನಾವು ಸರ್ಕಾರದಲ್ಲಿ ಇಲ್ಲ. ಯಾವುದೇ ಒಬ್ಬ ವ್ಯಕ್ತಿಯನ್ನು ಸಂತುಷ್ಟಗೊಳಿಸಲು ಸಹ ನಾವು ಸರ್ಕಾರದಲ್ಲಿ ಪಾಲ್ಗೊಂಡಿಲ್ಲ. ಜನರ ಆಶೀರ್ವಾದದ ಬಲದಿಂದ ಅಧಿಕಾರದಲ್ಲಿ ಇದ್ದೇವೆ. ಜನತೆ ಬಯಸಿರುವವರೆಗೂ ಸರ್ಕಾರದಲ್ಲಿ ಇರುತ್ತೇವೆ. ಜನರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾರದೋ ಇಚ್ಛೆ ಅಥವಾ ಆದೇಶದ ಮೇರೆಗೆ ಸಚಿವ ಸಂಪುಟವನ್ನು ತೊರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.`ಕಾಂಗ್ರೆಸ್ ಮತ್ತು ಟಿಎಂಸಿ ಜಂಟಿಯಾಗಿ ವಿಧಾನಸಭಾ ಚುನಾವಣೆ ಎದುರಿಸಿವೆ. ಜನರು ಮೈತ್ರಿಗೆ ಮತ ನೀಡಿದ್ದಾರೆ. ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಮತಗಳನ್ನು ಪಡೆಯುವ ಮೂಲಕ ತೃಣಮೂಲ ಕಾಂಗ್ರೆಸ್ ಲಾಭ ಗಳಿಸಿದೆ. ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜನಸಾಮಾನ್ಯ ಆದೇಶಿಸಿದರೆ ತಕ್ಷಣ ಸಂಪುಟ ತೊರೆಯುತ್ತೇವೆ~ ಎಂದು ಅವರು ಹೇಳಿದ್ದಾರೆ.`ನಾವು ಹೊರಹೋಗಬೇಕು ಎಂದು ಮಮತಾ ಅವರು ಬಯಸಿದ್ದರೆ ಸಂಪುಟದಿಂದ ಹೊರಹಾಕಲಿ. ಮುಂದುವರಿಯುವ ಅಥವಾ ಹೊರಹೋಗುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ~ ಎಂದು ಕಾಂಗ್ರೆಸ್ ನಾಯಕ ಅರುಣವೊ ಘೋಷ್ ಸವಾಲು ಎಸೆದಿದ್ದಾರೆ. `ಕಾಂಗ್ರೆಸ್ ಮೈತ್ರಿ ಉಳಿಸಿಕೊಳ್ಳಲು ಬಯಸುತ್ತದೆ. ಆದರೆ, ಮಮತಾ ಏಕಚಕ್ರಾಧಿಪತ್ಯ ನಡೆಸಲು ಬಯಸುತ್ತಿದ್ದಾರೆ~ ಎಂದು ಅವರು ಟೀಕಿಸಿದ್ದಾರೆ.ಪಿತೂರಿ ಆರೋಪ: `ರಾಜ್ಯದಲ್ಲಿ ಕಮ್ಯುನಿಸ್ಟರ ಜತೆ ಕೈಜೋಡಿಸಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಪಿತೂರಿ ನಡೆಸಿದೆ. ಪಕ್ಷದ ಹೆಸರನ್ನು ಹಾಳು ಮಾಡುತ್ತಿದೆ~ ಎಂದು ಮಮತಾ ಸುದ್ದಿಗಾರರ ಬಳಿ ಆರೋಪಿಸಿದರು. `ಒಂದು ವೇಳೆ ಕಾಂಗ್ರೆಸ್ ಪಕ್ಷ ಸಿಪಿಎಂ ಜೊತೆ ಕೈಜೋಡಿಸಿದರೆ ಅದು ಟಿಎಂಸಿ ಸಖ್ಯವನ್ನು ತೊರೆಯಬೇಕಾಗುತ್ತದೆ~ ಎಂದು ಎಚ್ಚರಿಸುವ ಮೂಲಕ, ಕಾಂಗ್ರೆಸ್ ವಿರುದ್ಧ ಬಹಿರಂಗ ಸಮರ ಸಾರಿದರು. ತಮ್ಮ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಜಯ ಗಳಿಸಿದೆ ಎಂದು ಹೇಳುವ ಮೂಲಕ, ಕಾಂಗ್ರೆಸ್ ಬೆಂಬಲದ ಅಗತ್ಯ ತಮಗಿಲ್ಲ ಎಂಬ ಸೂಚನೆಯನ್ನೂ ಪರೋಕ್ಷವಾಗಿ ಅವರು ನೀಡಿದರು.ಉತ್ತರ ಪ್ರದೇಶ, ಮಣಿಪುರದಲ್ಲಿ ತಮ್ಮ ಪಕ್ಷ ಏಕಾಂಗಿ ಹೋರಾಟ ನಡೆಸಲು ಮುಂದಾಗಿದ್ದು ಸಹ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಟಿಎಂಸಿ ನೀಡುತ್ತಿರುವ ಸ್ಪರ್ಧೆಯಿಂದ ಅದು ಹೆದರಿದೆ. ಇದೇ ಕಾರಣಕ್ಕಾಗಿ ಹೊಲಸು ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.ಕೇಂದ್ರದ ಯುಪಿಎಯ ಅಂಗ ಪಕ್ಷವಾಗಿದ್ದರೂ ಟಿಎಂಸಿಯು ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಪೆಟ್ರೋಲ್ ದರ ಹೆಚ್ಚಳ, ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳನ್ನು ವಿರೋಧಿಸಿದೆ. ಹೀಗಾಗಿ ಕಾಂಗ್ರೆಸ್ ತಮ್ಮ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದರು.`ರಾಯ್‌ಗಂಜ್ ವಿಶ್ವವಿದ್ಯಾಲಯ ಕಾಲೇಜು ಪ್ರಾಚಾರ್ಯರ ಮೇಲೆ ಈಚೆಗೆ ನಡೆದ ಹಲ್ಲೆಯಂತಹ ಪುಟ್ಟ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಕಾಂಗ್ರೆಸ್, ಈ ವಿವಾದದ ಬೆಂಕಿಗೆ ತುಪ್ಪ ಸುರಿದು ದೊಡ್ಡ ವಿವಾದ ಸೃಷ್ಟಿಸಿದೆ. ಕಮ್ಯುನಿಸ್ಟರ ಜತೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿದೆ~ ಎಂದು ಅಸಮಾಧಾನ ಹೊರಹಾಕಿದರು. `ನಮ್ಮದು ಕಳ್ಳಕಾಕರ ಪಕ್ಷವಲ್ಲ. ಸ್ವಂತ ಬಲದ ಮೇಲೆ ಹೋರಾಟ ನಡೆಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಇಂತಹ ನೀಚ ರಾಜಕೀಯಕ್ಕೆ ನಾವು ಮಣಿಯುವುದಿಲ್ಲ. ಏಕಾಂಗಿ ಹೋರಾಟ ಕೂಡಾ ನಮಗೆ ಹೊಸದಲ್ಲ. ಈಗಲೂ ನಾವು ಏಕಾಂಗಿ ಹೋರಾಟ ನಡೆಸುತ್ತೇವೆ. ಕೆಲವು ಸಣ್ಣಪುಟ್ಟ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ವಿಶ್ವಾಸವೂ ನಮಗಿದೆ~ ಎಂದು ಭರವಸೆ ವ್ಯಕ್ತಪಡಿಸಿದರು. `ಇಂದಿರಾ ಭವನ~ಕ್ಕೆ `ನಜರುಲ್ ಇಸ್ಲಾಂ ಭವನ~ ಎಂದು ಕ್ರಾಂತಿಕಾರಿ ಕವಿಯ ಹೆಸರನ್ನು ಪುನರ್ ನಾಮಕರಣ ಮಾಡಿದ ವಿಷಯ ಪ್ರಸ್ತಾಪಿಸಿದ ಅವರು, `ಈ ದೇಶದಲ್ಲಿ ನಜರುಲ್, ಮೌಲಾನಾ ಆಜಾದ್, ಅಂಬೇಡ್ಕರ್ ಮತ್ತಿತರರ ಹೆಸರುಗಳನ್ನು ಸಾರ್ವಜನಿಕ ಸ್ಥಳಗಳಿಗೆ ಇಡಲೇಬಾರದೆ~ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಸಿಪಿಎಂ ಕಾರ್ಯಕರ್ತರು ತಮ್ಮ ಪಕ್ಷದ ಅನೇಕ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು.

 

Post Comments (+)