ಮಂಗಳವಾರ, ನವೆಂಬರ್ 12, 2019
25 °C

ಕಾಂಗ್ರೆಸ್ ಟಿಕೆಟ್ ನಿರಾಕರಣೆ ವಿ.ಆರ್. ಸುದರ್ಶನ್‌ಗೆ ಬೇಸರ

Published:
Updated:

ಬೆಂಗಳೂರು: ತಮಗೆ ಟಿಕೆಟ್ ನಿರಾಕರಿಸಿರುವುದು ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕರಿಗೆ ಪುನಃ ಟಿಕೆಟ್ ನೀಡುವ ತೀರ್ಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿ ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.`ನಾನು 1995ರಿಂದ ಈವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಪಣಾ ಮನೋಭಾವದಿಂದ ದುಡಿದಿದ್ದೇನೆ. ನಾನೂ ಸೇರಿದಂತೆ ಹಲವು ಮಂದಿ ಸಮರ್ಥರಿಗೆ ಟಿಕೆಟ್ ನಿರಾಕರಿಸುತ್ತಿರುವ ಮಾಹಿತಿ ಬಂದಿದೆ. ಇದು ದುರದೃಷ್ಟಕರ ಸಂಗತಿ. ಈ ನಿರ್ಧಾರದ ಕುರಿತು ಪಕ್ಷವು ಗಂಭೀರವಾಗಿ ಚರ್ಚಿಸಿ, ಪುನರ್ ಪರಿಶೀಲನೆ ನಡೆಸಬೇಕು' ಎಂದು ಸೋಮವಾರ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.`ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಕುರಿತು ಪರಿಶೀಲನೆ ನಡೆಸಲು ನನ್ನ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ನಾನು ವರದಿ ಸಲ್ಲಿಸಿದ್ದೆ. ಅಡ್ಡ ಮತ ಚಲಾವಣೆ ಮಾಡಿದವರ ಕುರಿತು ಮೌಖಿಕವಾಗಿಯೂ ತಿಳಿಸಿದ್ದೆ. ಆದರೆ, ಅಂತಹವರಿಗೆ ಮತ್ತೆ ಟಿಕೆಟ್ ನೀಡಲು ನಿರ್ಧರಿಸಿರುವುದು ದುರದೃಷ್ಟಕರ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)