ಬುಧವಾರ, ನವೆಂಬರ್ 13, 2019
21 °C
ಸುಳ್ಯ ಬಿಜೆಪಿ ಸಮಾವೇಶದಲ್ಲಿ ಡಿವಿ ಸದಾನಂದ ಗೌಡ ಒತ್ತಾಯ

`ಕಾಂಗ್ರೆಸ್ ಟಿಕೆಟ್ ಮಾರಾಟ ಪ್ರಕರಣ ಸಿಬಿಐಗೆ ವಹಿಸಲಿ'

Published:
Updated:

ಸುಳ್ಯ: ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಟಿಕೆಟ್‌ಗಳನ್ನು 4ರಿಂದ 5 ಕೋಟಿಗೆ ಮಾರಾಟ ಮಾಡುವ ಮೂಲಕ ಮತದಾರರಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಇದನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಒತ್ತಾಯಿಸಿದ್ದಾರೆ.ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಕೆಟ್‌ಗಾಗಿ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರಿಗೆ 4ರಿಂದ 5 ಕೋಟ ರೂಪಾಯಿ ನೀಡಿದ್ದನ್ನು ಅವರ ಪಕ್ಷದ ಮುಖಂಡರೇ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರಿಗೆ ಅದರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.`ರಾಜ್ಯದಲ್ಲಿ 5 ವರ್ಷಗಳ ಅಡಳಿತವನ್ನು ಎರಡು ಅಧ್ಯಾಯಗಳಾಗಿ ವಿಂಗಡಿಸಬಹುದು ಎಂದ ಅವರು ಮೊದಲ ಅಧ್ಯಾಯದಲ್ಲಿ ನಡೆದ ಹಲವು ವಿದ್ಯಮಾನಗಳಿಂದ ಜನರ ಮನಸ್ಸಿಗೆ ನೋವಾಗಿದೆ. ಸರ್ವಾಧಿಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಡಿನೋಟಿಫಿಕೇಶನ್ ಹಗರಣ ಎಲ್ಲವೂ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ ಎಂಬುದನ್ನು ಒಪ್ಪುತ್ತೇವೆ. ಆದರೆ ನಾನು ಮುಖ್ಯಮಂತ್ರಿಯಾದ ಬಳಿಕ ಜಗದೀಶ ಶೆಟ್ಟರ್‌ವರೆಗಿನ ಎರಡನೇ ಅಧ್ಯಾಯದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನೀಡಿದ್ದೇವೆ. ಕಳೆದ ಬಾರಿಯ ಚುನಾವಣಾ ಪ್ರಣಾಳಿಕೆಯನ್ನು ಸಂಪೂರ್ಣ ಜಾರಿಗೆ ತಂದಿದ್ದೇವೆ. ಎಲ್ಲರೂ ಗೌರವದಿಂದ, ಸ್ವಾಭಿಮಾನದಿಂದ ನಡೆಯುವಂತೆ ಆಡಳಿತ ನೀಡಿದ್ದೇವೆ' ಎಂದು ಹೇಳಿದರು.ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಅಭಿವೃದ್ಧಿ ಮಂತ್ರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಕಳೆದ ಬಾರಿ ಹಿಂದುತ್ವದ ಅಡಿಯಲ್ಲಿ ಮತ ಕೇಳಿದ್ದೆವು. ಗೋಹತ್ಯೆ ನಿಷೇಧ, ಸಾರಾಯಿ ನಿಷೇಧ ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಗಾಂಧೀಜಿಯವರ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ಬಿಜೆಪಿ ಗಾಂಧೀಜಿಯ ವಿಚಾರಧಾರೆಯನ್ನು ಅನುಷ್ಠಾನ ಮಾಡಿದೆ ಎಂದರು.ಪಕ್ಷದ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್ ಸಮಾವೇಶ ಉದ್ಘಾಟಿಸಿದರು. ಅಭಿವೃದ್ಧಿಯಲ್ಲಿ ರಾಜ್ಯ ದೇಶಕ್ಕೆ 2ನೇ ಸ್ಥಾನದಲ್ಲಿದೆ. ಸರ್ಕಾರ ಮಹಿಳಾ ಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಮಹಿಳೆಯರೂ ಬಿಜೆಪಿ ಕಡೆಗೆ ಇದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರೂ ಮಾತನಾಡಿದರು. ಪಕ್ಷದ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಿ.ವಿ.ಸದಾನಂದ ಗೌಡ ಅವರನ್ನು ಮಂಡಲ ಸಮಿತಿ ವತಿಯಿಂದ ಸನ್ಮಾನಿಲಾಯಿತು.ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಅಂಗಾರ, ವಿವಿಧ ಸಮಿತಿ ಮುಖಂಡರಾದ ಸಾವಿತ್ರಿ ಶಿವರಾಂ, ಬಾಬು ಜಾಲ್ಸಡೂರು, ಸಂಜೀವ ಕುಮಾರ್, ಅಬ್ದುಲ್ ಕುಂಞಿ ನೇಲ್ಯಡ್ಕ, ಕುಶಲಪ್ಪ ಗೌಡ ಮುಗುಪ್ಪು, ಜಯರಾಮ ಹಾಡಿಕಲ್ಲು, ಸುಧಾಕರ ಕಾಮತ್, ಆನಂದ ಬೆಟ್ಟಂಪಾಡಿ, ಭಾಗೀರಥಿ ಮುರುಳ್ಯ ಮತ್ತಿತರರಿದ್ದರು.

ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿ, ಪಿಜಿಎಸ್‌ಎನ್ ಪ್ರಸಾದ್ ವಂದಿಸಿದರು. ಮುರಳಿಕೃಷ್ಣ ಚಳ್ಳಂಗಾರು ನಿರೂಪಿಸಿದರು.

ಪ್ರತಿಕ್ರಿಯಿಸಿ (+)