ಕಾಂಗ್ರೆಸ್ ತೊರೆಯಲು ಶಾಸಕರು ಸಜ್ಜು

7

ಕಾಂಗ್ರೆಸ್ ತೊರೆಯಲು ಶಾಸಕರು ಸಜ್ಜು

Published:
Updated:

ಚಿಕ್ಕಬಳ್ಳಾಪುರ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ನಡುವೆ ಕೆಲ ವರ್ಷಗಳಿಂದ ಹೊಯ್ದಾಡುತ್ತಿದ್ದ ಶೀತಲ ಸಮರ ಈಗ ತಾರಕಕ್ಕೇರಿದೆ.

ಕೆ.ಎಚ್.ಮುನಿಯಪ್ಪ ವಿರುದ್ಧ ಡಾ.ಸುಧಾಕರ್ ಜೊತೆಗೆ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಸಹ ಸಮರ ಸಾರಿದ್ದು, `ಕಾಂಗ್ರೆಸ್‌ನಲ್ಲಿ ಕೆ.ಎಚ್.ಮುನಿಯಪ್ಪ ಇಲ್ಲವೆ ನಾವು ಇರಬೇಕು~ ಎಂಬ ಅಂತಿಮ ಎಚ್ಚರಿಕೆ ನೀಡಿದ್ದಾರೆ.ಇಬ್ಬರೂ ಶಾಸಕರು ಚಿಂತಾಮಣಿ ಮತ್ತು ಗೌರಿಬಿದನೂರಿನಲ್ಲಿ ಪ್ರತ್ಯೇಕವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಬಂಡಾಯ ಪ್ರದರ್ಶಿಸಿದ್ದಾರೆ.ಈ ಎಲ್ಲ ಬೆಳವಣಿಗೆಗೆ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯೇ ಪ್ರಮುಖ ಕಾರಣ. ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ತಪ್ಪಿಸುವಲ್ಲಿ  ಕೆ.ಎಚ್.ಮುನಿಯಪ್ಪ ಅವರದ್ದೇ ನೇರ ಕೈವಾಡವಿದೆ ಎಂದು ಇಬ್ಬರೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮಾತ್ರವೇ ತಮ್ಮ ರಾಜಕೀಯ ಚಟುವಟಿಕೆ ಸೀಮಿತಗೊಳಿಸುವುದರ ಬದಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೂ ಪ್ರವೇಶಿಸಿ ಕೆ.ಎಚ್.ಮುನಿಯಪ್ಪ ಅವರು ಜಿಲ್ಲಾ ಪಂಚಾಯಿತಿಯಲ್ಲಿದ್ದ ಏಕೈಕ ಬಿಜೆಪಿ ಸದಸ್ಯರನ್ನು ಜಿ.ಪಂ. ಅಧ್ಯಕ್ಷರನ್ನಾಗಿಸಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.`ಜಿಲ್ಲಾ ಪಂಚಾಯಿತಿಯಲ್ಲಿರುವ 27 ಸದಸ್ಯರ ಪೈಕಿ 21 ಸದಸ್ಯರು ಕಾಂಗ್ರೆಸ್‌ನವರೇ ಇದ್ದು, ಯಾರಿಗೂ ಸಹ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಕೋಲಾರದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಹಾಳುಗೆಡವಿರುವ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ.

 

ಅಂಥವರಿಂದ ಕಾಂಗ್ರೆಸ್‌ಗೆ ದುರ್ಗತಿ ಬರುವ ಮುನ್ನವೇ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೆ.ಎಚ್.ಮುನಿಯಪ್ಪ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಅವರ ಬೆಂಬಲಿಗರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವವರೆಗೆ ಸುಮ್ಮನೆ ಕೂರುವವರಲ್ಲ~ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವು ಬಿಸಿಎಂ-ಎ ವರ್ಗಕ್ಕೆ ಮೀಸಲಾಗಿದ್ದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಚಿಂತಾಮಣಿಯ ಎಸ್.ಎನ್.ಚಿನ್ನಪ್ಪ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಸದಸ್ಯರು ಒಪ್ಪಿದ್ದರು. ಆದರೆ ಚುನಾವಣೆ ನಡೆಯುವ ಕೆಲ ಗಂಟೆಗಳ ಮುನ್ನ ಕೆಲ ಸದಸ್ಯರನ್ನು ಓಲೈಸಿದ ಕೆ.ಎಚ್.ಮುನಿಯಪ್ಪ ಅವರು ಅಧ್ಯಕ್ಷ ಸ್ಥಾನವನ್ನು ಏಕೈಕ ಬಿಜೆಪಿ ಸದಸ್ಯ ಸಿ.ಆರ್.ನರಸಿಂಹಮೂರ್ತಿ ಅವರಿಗೆ ಲಭಿಸುವಂತೆ ಮಾಡಿದರು.ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಸದಸ್ಯ ಯಾವುದೇ ಕಾರಣಕ್ಕೂ ಅಧ್ಯಕ್ಷರಾಗಬಾರದು ಎಂಬ ಕಡಿವಾಣ ಹಾಕಿದರು. ಕೇಂದ್ರದಲ್ಲಿ ಸಚಿವ ಸ್ಥಾನದಲ್ಲಿದ್ದವರು ಜಿಲ್ಲಾ ಪಂಚಾಯಿತಿ ಮಟ್ಟಕ್ಕೂ ಬಂದು ರಾಜಕೀಯ ಮಾಡುತ್ತಾರೆಂದರೆ ಸಹಿಸಲು ಆಗುವುದಿಲ್ಲ~ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ `ಪ್ರಜಾವಾಣಿ~ಗೆ ತಿಳಿಸಿದರು.

`ಕೆ.ಎಚ್.ಮುನಿಯಪ್ಪ ಅವರು ಚಿಂತಾಮಣಿಯಲ್ಲಿ ಹೀಗೆ ಮೂಗು ತೂರಿಸುತ್ತಿರುವುದು ನಿನ್ನೆ-ಮೊನ್ನೆಯದಲ್ಲ. ಜಾತಿ ವಿಷ ಬಿತ್ತುವ ಮೂಲಕ ಅವರು ನನ್ನನ್ನೇ 2008ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿದ್ದರು.

 

ಚುನಾವಣೆಯಲ್ಲಿ ಸೋಲಿಸಲೆಂದೇ ಚಿಂತಾಮಣಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜ ಸುಧಾರಕರನ್ನು ಹುಟ್ಟುಹಾಕಿದ್ದಾರೆ. ಬಾಗೇಪಲ್ಲಿಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಮುಂತಾದವರಿಗೆ ವಿಧಾನಸಭಾ ಟಿಕೆಟ್ ನೀಡುವುದಾಗಿ ಹೇಳಿ ಆಸೆ-ಆಮಿಷ ಒಡ್ಡುತ್ತಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ~ ಎಂದು ಅವರು ಹೇಳಿದರು.`ಕೋಲಾರ ಮತ್ತು ಚಿಂತಾಮಣಿಗೆ ಸೀಮಿತಗೊಳ್ಳದ ಕೆ.ಎಚ್.ಮುನಿಯಪ್ಪ ಅವರು ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಮುಖಂಡರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಮುಖಂಡರಿಗೆ ಆಸೆ-ಆಮಿಷ ಒಡ್ಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಉಂಟು ಮಾಡುತ್ತಿದ್ದಾರೆ.ಕೋಲಾರದಲ್ಲಿ ಬಿಜೆಪಿ ಬೇರೂರಲು ಪರೋಕ್ಷವಾಗಿ ಕಾರಣವಾಗಿದ್ದು, ಚಿಕ್ಕಬಳ್ಳಾಪುರದಲ್ಲೂ ಅಂಥದ್ದೇ ಸ್ಥಿತಿ ನಿರ್ಮಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಉಳಿದುಕೊಂಡು ಅವರು ಇಂಥ ಕೃತ್ಯ ಮಾಡುವುದನ್ನು ಮುಂದುವರೆಸಿದರೆ ನಾವು ಪಕ್ಷದಿಂದ ದೂರ ಉಳಿಯುತ್ತೇವೆ. ಅಂಥವರಿಗೆ ತಲೆಬಾಗುವುದರ ಬದಲು ಜನರ ತೀರ್ಮಾನಕ್ಕೆ ತಲೆಬಾಗುತ್ತೇವೆ~ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಸೋನಿಯಾ ಗಾಂಧಿಗೆ ದೂರುಚಿಕ್ಕಬಳ್ಳಾಪುರ: `ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಕುರಿತು ದೀರ್ಘವಾದ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆಯುತ್ತೇವೆ. ಮುನಿಯಪ್ಪ ಅವರನ್ನು ಪಕ್ಷದಿಂದ ಅಮಾನತು ಇಲ್ಲವೇ ವಜಾ ಮಾಡಬೇಕೆಂದು ಒತ್ತಾಯಿಸುತ್ತೇವೆ. ಕೆಲ ದಿನಗಳ ಮಟ್ಟಿಗೆ ಕಾಲಾವಕಾಶ ನೀಡುತ್ತೇವೆ. ಇದರ ನಂತರವೂ ಕ್ರಮ ಕೈಗೊಳ್ಳದಿದ್ದರೆ ನಾವು ಕಾಂಗ್ರೆಸ್‌ನಿಂದ ದೂರವಾಗುತ್ತೇವೆ. ಕ್ಷೇತ್ರದ ಜನರು ಹೇಳಿದಂತೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ~ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.`ಮುನಿಯಪ್ಪ ವಿರುದ್ಧ ಪಕ್ಷದ ಹೈಕಮಾಂಡ್ ಯಾವುದೇ ಕ್ರಮ ಜರುಗಿಸದಿದ್ದರೆ, ನನ್ನೊಂದಿಗೆ 15 ಸಾವಿರ ಕಾಂಗ್ರೆಸ್ ಸದಸ್ಯರು, 2600 ಮಂದಿ ಬೂತ್ ಸಮಿತಿ ಪದಾಧಿಕಾರಿಗಳು ಮತ್ತು ಯುವ ಕಾಂಗ್ರೆಸ್‌ನ 2400 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ಘೋಷಿಸಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಧಕ್ಕೆಯಾಗಲಿದೆ~ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry