ಮಂಗಳವಾರ, ನವೆಂಬರ್ 12, 2019
21 °C
ಅನಿಲ, ಅಂದಾನಯ್ಯ, ಮಹಾದೇವ, ಮಂಜುನಾಥ ಉಮೇದುವಾರಿಕೆ ಸಲ್ಲಿಕೆ

ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತ ಜನತೆ: ಅನಿಲ

Published:
Updated:

ಗದಗ: ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಸಾವಿರಾರು ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಗದಗ ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ಜೆಡಿಎಸ್ ಅಭ್ಯರ್ಥಿ ಅಂದಾನಯ್ಯ ಕುರ್ತಕೋಟಿ ಮಠ, ಬಿಎಸ್‌ಪಿ ಅಭ್ಯರ್ಥಿ ಮಹಾದೇವ ಛಲವಾದಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಶೋಕ ಜವಳಿ, ಲೋಕಜನಶಕ್ತಿ ಪಾರ್ಟಿ ಮಂಜುನಾಥ ನಿಲಗುಂದ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ನಾಮಪತ್ರ ಸಲ್ಲಿಕೆಗೂ ಮುನ್ನ ಗದಗ ವಿಧಾನಸಭಾ ಕ್ಷೇತ್ರದ ಕಲ್ಲೂರ ಗ್ರಾಮದ ಹೊನ್ನೆತ್ತೆಮನ ದೇವಸ್ಥಾನ, ಚಿಂಚಲಿ ಬಸವೇಶ್ವರ, ಮುಳಗುಂದದ ಬಾಲಲೀಲಾ ಸ್ವಾಮಿ ಹಾಗೂ ವೀರೇಶ್ವರ ಪುಣ್ಯಾಶ್ರಮದಲ್ಲಿ ಕತೃ ಗದ್ದುಗಗೆ ಪೂಜೆ ಸಲ್ಲಿಸಿದರು.ಬಳಿಕ ಗಾಂಧೀಜಿ, ಅಂಬೇಡ್ಕರ್, ಕಿತ್ತೂರ ಚೆನ್ನಮ್ಮ, ಪುಟ್ಟರಾಜ ಗವಾಯಿ ಪ್ರತಿಮೆಗಳಿಗೆ ಮಾಲರ್ಪಣೆ ಮಾಡಿ ತೆರೆದ ಜೀಪ್‌ನಲ್ಲಿ ಮೆರವಣಿಗೆ ಮೂಲಕ ಮಧ್ಯಾಹ್ನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಉಪವಿಭಾಗಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರಿಗೆ ಸಲ್ಲಿಸಿದರು.ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಶ್ರೀರಾಮುಲುಗೆ ಜೈ, ಬಿಎಸ್‌ಆರ್‌ಕಾಂಗ್ರೆಸ್‌ಗೆ ಜೈ ಮತ್ತು ಅನಿಲ ಮೆಣಸಿನಕಾಯಿಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು. ಶ್ರೀರಾಮುಲು ಭಾವಚಿತ್ರ ಇರುವ ಪಕ್ಷದ ಬಾವುಟ ರಾರಾಜಿಸುತ್ತಿತ್ತು.ಬಿರು ಬಿಸಿಲನ್ನು ಲೆಕ್ಕಿಸದೆ ನೇತಾರನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಮಹಿಳೆಯರು ಹಾಗೂ ಅಭಿಮಾನಿಗಳು ಹೆಜ್ಜೆ ಹಾಕಿದರು.  ಭೂಮರಡ್ಡಿ ಸರ್ಕಲ್, ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮೂಲಕ ಚುನಾವಣಾಧಿಕಾರಿ ಕಚೇರಿಗೆ ಮೆರವಣಿಗೆ ಆಗಮಿಸಿತು.ನಾಮಪತ್ರ ಸಲ್ಲಿಸಿದ ಬಳಿಕ ಹೊರಗೆ ಬಂದು ಅಭಿಮಾನಿಗಳಿಗೆ ವಿಜಯದ ಚಿಹ್ನೆ ತೋರಿಸಿದರು. ಗ್ರಾಮಾಂತರ ಪ್ರದೇಶಗಳಿಂದ ಕಾರ್ಯಕರ್ತರನ್ನು ಕರೆತರಲು ಟಂಟಂ, ಟ್ರ್ಯಾಕ್ಸ್, ಲಾರಿಗಳ ವ್ಯವಸ್ಥೆ ಮಾಡಲಾಗಿತ್ತು.ಜೆಡಿಎಸ್ ಅಭ್ಯರ್ಥಿ ಅಂದಾನಯ್ಯ ಕುರ್ತಕೋಟಿ ಮಠ ಅವರು ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಪಕ್ಷದ ಕಚೇರಿಯಿಂದ ಎತ್ತಿನಗಾಡಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ ಮೆಣಸಿನಕಾಯಿ, ಕಾಂಗ್ರೆಸ್ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಒಂದು ವರ್ಷದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಗದಗ ಕ್ಷೇತ್ರಕ್ಕೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅನುಮೋದನೆಗೊಂಡ ಕಾಮಗಾರಿಗಳನ್ನು ಬಿಜೆಪಿ ಶಾಸಕರು ಉದ್ಘಾಟಿಸುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಪರ ಅಲೆ ಇದ್ದು, ಜನತೆ ಈ ಬಾರಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ಅಭ್ಯರ್ಥಿ ಅಂದಾನಯ್ಯ ಕುರ್ತಕೋಟಿ ಮಠ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ರೈತರು, ಕೂಲಿಕಾರರು ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ. ಈ ಬಾರಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ. ಹಣ ಬಲ ಹೆಚ್ಚು ಕಾಲ ನಡೆಯುವುದಿಲ್ಲ ಎಂದು ಹೇಳಿದರು.ಎನ್‌ಸಿಪಿ ಅಭ್ಯರ್ಥಿ ಅಶೋಕ್ ಎಂ ಜವಳಿ ಅವರು  ರಾಚೋಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಸಂಶಿ,  ವೇದವರ್ಷಿಣಿ, ಮುಖಂಡರಾದ ಎಂ.ಎಸ್. ಹೂಗಾರ, ಖಾದರಸಾಬ ಕಲೇಗಾರ ಹಾಜರಿದ್ದರು.ಶ್ಯಾಮಸುಂದರ ಭಾಂಡಗೆ  ಅವರು  ಶುಭ ಕರ್ನಾಟಕ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ  ಎರಡು ಪ್ರತ್ಯೇಕ ನಾಮಪತ್ರ, ಎನ್‌ಪಿಪಿಯಿಂದ ಅಬ್ದುಲ್ ಮುನಾಫ್ ಖಾಜಿ  ಹಾಗೂ ಪಕ್ಷೇತರರಾಗಿ  ರುದ್ರಪ್ಪ ಕುಂಬಾರ, ಸತ್ಯಪ್ಪನವರ ಭೀಮಪ್ಪ  ಮತ್ತು ಬಸವಣ್ಣೆಪ್ಪ ಗೂಳೆಪ್ಪನವರ ತಲಾ ಒಂದು ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)