ಸೋಮವಾರ, ಮೇ 23, 2022
20 °C

ಕಾಂಗ್ರೆಸ್ ದೂಳೀಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರಕ್ಕಿಂತ ಪಕ್ಷ ಮತ್ತು ಜಾತಿನಿಷ್ಠೆಯೇ ಮತದಾರರಿಗೆ ಮುಖ್ಯ ಎಂಬ ಆಂಧ್ರಪ್ರದೇಶ ಉಪಚುನಾವಣೆಯ ಫಲಿತಾಂಶದ ಸಂದೇಶ ಪ್ರಜಾಪ್ರಭುತ್ವ ಮತ್ತು ಸಮಾಜದ ಆರೋಗ್ಯಕ್ಕೆ ಹಿತವಾದುದಲ್ಲ.ಆದರೆ ಇಂತಹ ತಾತ್ವಿಕ ವಿಚಾರಗಳು ಚರ್ಚಾಕೂಟಕ್ಕಷ್ಟೇ ಸೀಮಿತ. ವಾಸ್ತವಿಕ ರಾಜಕಾರಣದಲ್ಲಿ ಚುನಾವಣೆಯ ಗೆಲುವಿನದ್ದೇ ಬಹು ಚರ್ಚಿತ ಪಾತ್ರ. ಇದರಿಂದಾಗಿ ಆಂಧ್ರಪ್ರದೇಶದಲ್ಲಿ ಮಾತ್ರವಲ್ಲ ಈಗ ದೇಶದಾದ್ಯಂತ ಈ ಉಪಚುನಾವಣೆಯ ಫಲಿತಾಂಶದ್ದೇ ಚರ್ಚೆ.ಹದಿನೆಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಹನ್ನೆರಡರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಹದಿನೆಂಟರಲ್ಲಿ ಹನ್ನೆರಡು ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷಕ್ಕೆ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಎರಡು ಸ್ಥಾನಗಳನ್ನು ಮಾತ್ರ.ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಸತತ ಸೋಲು ಕಂಡಿದ್ದ ರಾಜ್ಯದ ಪ್ರಮುಖ ವಿರೋಧಪಕ್ಷವಾದ ತೆಲುಗುದೇಶಂ ಸಾಧನೆ ಶೂನ್ಯ. ವಿರೋಧಿಗಳನ್ನು ದೂಳೀಪಟ ಮಾಡಿರುವ ವೈಎಸ್‌ಆರ್ ಕಾಂಗ್ರೆಸ್ ನಿಸ್ಸಂಶಯವಾಗಿ ಆಂಧ್ರಪ್ರದೇಶದ ನೂತನ ಪ್ರಾದೇಶಿಕ ಪಕ್ಷವಾಗಿ ಉದಯಿಸಿದೆ.ಉಪಚುನಾವಣೆ ನಡೆದ ಹದಿನೆಂಟು ವಿಧಾನಸಭಾ ಕ್ಷೇತ್ರಗಳು ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಹರಡಿಕೊಂಡಿರುವುದರಿಂದ ವೈಎಸ್‌ಆರ್ ಕಾಂಗ್ರೆಸ್ ಪ್ರಭಾವ ರಾಯಲಸೀಮೆಯ ಪ್ರದೇಶಕ್ಕಷ್ಟೇ ಸೀಮಿತ ಎನ್ನುವ ಲೆಕ್ಕಾಚಾರ ಕೂಡಾ ತಲೆಕೆಳಗಾಗಿದೆ. ಚುನಾವಣೆ ನಡೆಯುತ್ತಿದ್ದಾಗಲೇ ಜಗನ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದ ಕಾಂಗ್ರೆಸ್ ಕಾರ್ಯತಂತ್ರ ಕೂಡಾ ಬೂಮರಾಂಗ್ ಆಗಿದೆ. ಈ ಕ್ರಮದ ಹಿಂದೆ ಆಂಧ್ರಪ್ರದೇಶದ ಮತದಾರರು ರಾಜಕೀಯ ದುರುದ್ದೇಶವನ್ನು ಕಂಡಿರುವುದಕ್ಕೆ ಫಲಿತಾಂಶವೇ ಸಾಕ್ಷಿ.ಉಪಚುನಾವಣೆಯ ಫಲಿತಾಂಶ ಹದಿನೆಂಟು ಕ್ಷೇತ್ರಗಳಿಗಷ್ಟೇ ಸೀಮಿತವಾಗಿ ಉಳಿಯಲಾರದು. ಈಗಾಗಲೇ ಹಲವಾರು ಶಾಸಕರು ಗೆಲ್ಲುವ ಕುದುರೆಯ ಬಾಲ ಹಿಡಿಯುವ ಸಿದ್ಧತೆಯಲ್ಲಿದ್ದಾರಂತೆ. ಇಂತಹ ಶಾಸಕರ ಸಂಖ್ಯೆ ಇಪ್ಪತ್ತು ಮೀರಿದೆ ಎನ್ನುವ ಸುದ್ದಿ ಇದೆ.ಇದರಿಂದಾಗಿ ಆಂಧ್ರಪ್ರದೇಶದ ಕಿರಣ್‌ಕುಮಾರ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಹಜವಾಗಿಯೇ ಅಭದ್ರತೆಗೀಡಾಗಿದೆ. ಸದ್ಯಕ್ಕೆ ಅವಶ್ಯಕವಾದ ಸಂಖ್ಯಾಬಲವನ್ನು ಹೊಂದಿದ್ದರೂ ಯಾವುದೇ ಕ್ಷಣದಲ್ಲಿ ನಡೆಯುವ ರಾಜಕೀಯ ಪಲ್ಲಟಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯ.ಮುಂದಿನ ದಿನಗಳಲ್ಲಿ ರಾಜ್ಯದ ವಿಧಾನಸಭೆಗೆ ಮಾತ್ರವಲ್ಲ ಲೋಕಸಭೆಗೆ ನಡೆಯುವ ಚುನಾವಣೆಯ ಮೇಲೂ ಈ ಫಲಿತಾಂಶ ಪರಿಣಾಮ ಬೀರುವ ಸೂಚನೆಗಳು ಸ್ಪಷ್ಟವಾಗಿ ಕಾಣತೊಡಗಿವೆ. ಕಳೆದ ವರ್ಷ ಕಡಪಾ ಲೋಕಸಭಾ ಕ್ಷೇತ್ರವನ್ನು ಜಗನ್ ಭಾರೀ ಬಹುಮತದಿಂದ ಗೆದ್ದಿದ್ದರು.

 

ಈ ಬಾರಿ ನೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿಯೂ ಅವರ ಪಕ್ಷ ಗೆದ್ದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ದಕ್ಷಿಣದಿಂದ ದೊಡ್ಡ ಕೊಡುಗೆಯನ್ನು ನೀಡಿದ್ದು ಆಂಧ್ರಪ್ರದೇಶ.2004ರಲ್ಲಿ 29 ಮತ್ತು 2009ರಲ್ಲಿ 33 ಲೋಕಸಭಾ ಸದಸ್ಯರನ್ನು ವೈ.ಎಸ್.ರಾಜಶೇಖರ ರೆಡ್ಡಿ ಗೆಲ್ಲಿಸಿ ಕಳುಹಿಸಿದ್ದರು. ಈ ಬಾರಿ ಅಂತಹ ಬೆಂಬಲವನ್ನು ನಿರೀಕ್ಷಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಜಗನ್ ಪರವಾಗಿ ಎದ್ದಿರುವ ಅಲೆಯಲ್ಲಿ ಕೊಚ್ಚಿಹೋಗುತ್ತಿರುವಂತೆ ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜೀವ ಉಳಿಸಿಕೊಳ್ಳಲು ಬಹಳ ದಾರಿಗಳಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.