ಶುಕ್ರವಾರ, ಮೇ 27, 2022
23 °C

ಕಾಂಗ್ರೆಸ್ ಧುರೀಣ ಅರ್ಜುನ್ ಸಿಂಗ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಹಿರಿಯ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರ ಮಾಜಿ ಸಚಿವ ಅರ್ಜುನ್ ಸಿಂಗ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಶುಕ್ರವಾರ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ವಯೋ ಸಹಜವಾದ ಹೃದಯ ತೊಂದರೆ ಮತ್ತು ನರರೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಂಜೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಹೃದಯಾಘಾತಕ್ಕೆ ಒಳಗಾದ ಸಿಂಗ್ ಸಂಜೆ 6.15ಕ್ಕೆ ಕೊನೆಯುಸಿರೆಳೆದರು.ಕೊನೆಯವರೆಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಅರ್ಜುನ್ ಸಿಂಗ್ ಅವರು, ಪತ್ನಿ ಸರೋಜ ದೇವಿ, ಪುತ್ರರಾದ ಶಾಸಕ ಅಜಯ ಸಿಂಗ್ ಮತ್ತು ಅಭಿಮನ್ಯು ಹಾಗೂ ಪುತ್ರಿ ವೀಣಾ ಅವರನ್ನು ಅಗಲಿದ್ದಾರೆ. ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಅವರು 80ರ ದಶಕದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದರು. ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ, ಪಂಜಾಬ್ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.ಕಾಕತಾಳೀಯ ಎಂಬಂತೆ ಇಂದೇ ಅವರನ್ನು ಕಾಂಗ್ರೆಸ್ ಕಾರ್ಯಕಾರಣಿ ಸದಸ್ಯತ್ವದಿಂದ ಕೈಬಿಟ್ಟು ಕಾಯಂ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಕೃಷ್ಣ ಶೋಕ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ನಿಧನ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಶೋಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ನನ್ನ ಆತ್ಮೀಯರಾಗಿದ್ದ ಅರ್ಜುನ್ ಸಿಂಗ್ ಅವರ ನಿಧನದಿಂದಾಗಿ ಮಧ್ಯಪ್ರದೇಶದಲ್ಲಿ ಶೂನ್ಯ ಆವರಿಸಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.