ಗುರುವಾರ , ನವೆಂಬರ್ 21, 2019
21 °C

ಕಾಂಗ್ರೆಸ್ ನಾಯಕತ್ವ ಗೊಂದಲ ಮುಂದುವರಿಕೆ...

Published:
Updated:

ನವದೆಹಲಿ: ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ- ಮನಮೋಹನ್ ಸಿಂಗ್ ಅವರಲ್ಲಿ ಯಾರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ತಲೆದೋರಿರುವ ಗೊಂದಲ ಮುಂದುವರಿದಿದೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನರ್ದಾನ ದ್ವಿವೇದಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿ, ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಲ್ಲಿ ರಾಹುಲ್ ಗಾಂಧಿ ಬಹುತೇಕ ಇಲ್ಲ ಎಂದರು. ಇದೇ ವೇಳೆ, ಪಕ್ಷ ಅಧಿಕಾರ ಉಳಿಸಿಕೊಂಡರೆ ಪುನಃ ಮನಮೋಹನ್ ಸಿಂಗ್ ಅವರೇ ಪ್ರಧಾನಿ ಆಗಬಹುದು ಎಂಬ ಸುಳಿವು ನೀಡಿದರು.ದ್ವಿವೇದಿ ಅವರ ಈ ಹೇಳಿಕೆಯು, ನಾಲ್ಕು ದಿನಗಳ ಮುನ್ನ ಎಐಸಿಸಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರಿಬ್ಬರ `ಉಭಯ ಅಧಿಕಾರ ಕೇಂದ್ರ ವ್ಯವಸ್ಥೆ' ಅಷ್ಟು ಸರಿ ಹೋಗುತ್ತಿಲ್ಲ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದರೆ ರಾಹುಲ್ ಅವರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ದಿಗ್ವಿಜಯ್ ಒತ್ತಾಯಿಸಿದ್ದರು.`ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರ ನಡುವಿನ ಹೊಂದಾಣಿಕೆಯು ವಿಶಿಷ್ಟವಾದುದು. ಇಂತಹ ಹೊಂದಾಣಿಕೆಯನ್ನು ನಾವು ಹಿಂದೆಂದೂ ನೋಡಿಲ್ಲ. ಭವಿಷ್ಯಕ್ಕೆ ಕೂಡ ಅತ್ಯಂತ ಆದರ್ಶವಾದ ಹೊಂದಾಣಿಕೆ ಇದಾಗಿದೆ' ಎಂದು ಪಕ್ಷದ ಪ್ರಧಾನ ವಕ್ತಾರರೂ ಆದ ದ್ವಿವೇದಿ ಬಣ್ಣಿಸಿದರು.

ಪ್ರತಿಕ್ರಿಯಿಸಿ (+)